
ಭಟ್ಕಳ: ಸಂವಿಧಾನ ಸಂರಕ್ಷಣಾ ಕಾರ್ಯಪಡೆ, ಎದ್ದೇಳು ಕರ್ನಾಟಕ ಹಾಗೂ ಸಂಗಾತಿ ರಂಗಭೂಮಿ (ರಿ) ಅಂಕೋಲಾ ಇವರ ನೇತೃತ್ವದಲ್ಲಿ ನಡೆಯುತ್ತಿರುವ ಸಂವಿಧಾನ ಅರಿವು ರಾಜ್ಯ ಸಂಚಾರದ ಅಂಗವಾಗಿ ಭಟ್ಕಳದ ಅಂಜುಮನ್, ಜ್ಞಾನೇಶ್ವರಿ ಹಾಗೂ ಸೌಖ್ಯ ಬಿ.ಎಡ್ ಮಹಾವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ನಿವೃತ್ತ ನ್ಯಾಯಮೂರ್ತಿ ಡಾ. ಎಚ್.ಎನ್. ನಾಗಮೋಹನದಾಸ ರಚಿಸಿರುವ ಸಂವಿಧಾನ ಓದು ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು.
ಪುಸ್ತಕ ವಿತರಣೆಗೆ ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ನೆರವು ನೀಡಿದರು.ಜ್ಞಾನೇಶ್ವರಿ ಬಿ.ಎಡ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವೀರೇಂದ್ರ ಶಾನಭಾಗ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರೀಕ್ಷೆಗಾಗಿ ಮಾತ್ರ ಸಂವಿಧಾನ ಓದುವುದು ಸಾಲದು. ಶಿಕ್ಷಕರಾಗುವ ವಿದ್ಯಾರ್ಥಿಗಳು ಅದರ ಆಳವಾದ ಜ್ಞಾನ ಪಡೆದುಕೊಂಡರೆ, ಮುಂದಿನ ಪೀಳಿಗೆಯೂ ಸಂವಿಧಾನದ ಅರಿವು ಪಡೆಯಲು ಸಾಧ್ಯ ಎಂದರು.
ಪತ್ರಕರ್ತ ವಿಷ್ಣುದೇವಾಡಿಗ ಮಾತನಾಡಿ, ರಾಜ-ಮಹಾರಾಜರ ಕಾಲದಲ್ಲಿ ಓದುವ ಹಕ್ಕು ಕೂಡ ಇರಲಿಲ್ಲ. ಸಂವಿಧಾನ ಜಾರಿಗೆ ಬಂದ ಬಳಿಕ ಎಲ್ಲಾ ಹಕ್ಕುಗಳನ್ನು ಗಳಿಸಿದ್ದೇವೆ. ಸಮಾಜವನ್ನು ಒಂದಾಗಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಸೇಂಟ್ ಮಿಲಾಗ್ರಿಸ್ ಸಹಕಾರ ಸಂಘದ ವೆಲೇರಿಯನ್ ಫರ್ನಾಂಡಿಸ್, ಸಂಸ್ಥೆಯ ಲಾಭದಲ್ಲಿ ಸ್ವಲ್ಪವನ್ನು ಸಮಾಜಮುಖಿ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದೇವೆ. ವಿದ್ಯಾರ್ಥಿಗಳಿಗೆ ಸಂವಿಧಾನದ ಅರಿವು ಮೂಡಿಸಲು ಈ ಕಾರ್ಯಕ್ರಮ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಂಜುಮನ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಹಸನಬಾಗೇವಾಡಿ, ಅಂಜುಮನ್ ಸಂಸ್ಥೆಯ ಕಾರ್ಯದರ್ಶಿ ಮಹಮ್ಮದ ಆಹೆ ಮೋತೆಸಾಮ್, ಸೌಖ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ನಾರಾಯಣ ಪಟಗಾರ, ದೂರದರ್ಶನ ನಿರೂಪಕ ನಾಗರಾಜ ಭಟ್ಕಳ, ಅಧ್ಯಾಪಕ ನಾರಾಯಣ ಮಡಿವಾಳ, ಸೇಂಟ್ ಮಿಲಾಗ್ರಿಸ್ ಅಭಿವೃದ್ಧಿ ಅಧಿಕಾರಿ ರೋಹಿತ ಮೊಗೇರ, ವ್ಯವಸ್ಥಾಪಕರಾದ ತನೋಜಾ ನಾಯ್ಕ, ಸಂವಿಧಾನ ಅರಿವು ರಾಜ್ಯ ಸಂಚಾರದ ಪ್ರಧಾನ ಸಂಚಾಲಕ ಕೆ. ರಮೇಶ್, ಸಂಯೋಜಕರಾದ ರವೀಂದ್ರ ಶೆಟ್ಟಿ ಹಾಗೂ ಸಫೀನಾ ಅನ್ವರ ಮುಲ್ಲಾ ಹಾಜರಿದ್ದರು.
More Stories
ಅತಿವೇಗದ ಬಸ್ ಡಿಕ್ಕಿ, ಸ್ಕೂಟಿ ಸವಾರ ಸ್ಥಳದಲ್ಲೇ ದುರ್ಮರಣ
ಭಟ್ಕಳದ ದರ್ಶನ ನಾಯ್ಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟಕ್ಕೆ ಭಟ್ಕಳದ ಕೀರ್ತಿ
ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ