
ಹೊನ್ನಾವರ: ಕವಿ, ನಾಟಕಕಾರ, ಪ್ರಕಾಶಕ, ಸಂಘಟಕ, ಸಮಾಜಚಿಂತಕ, ಸಾಹಿತಿ ಜಾನಪದ ವಿದ್ವಾಂಸರರಾದ ಡಾ. ಎನ್.ಆರ್. ನಾಯಕ (91) ನೇ ವಯಸ್ಸಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಿಧನರಾದರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಭಾವಿಕೇರಿಯಲ್ಲಿ ಹಿಂದುಳಿದ ರೈತ ಕುಟುಂಬದಲ್ಲಿ 1935ರಲ್ಲಿ ಜನಸಿದ ನಾರಾಯಣ ರಾಮ ನಾಯಕ ಇವರು ತಂದೆ ರಾಮನಾಯಕ ಹಾಗೂ ದೇವಮ್ಮ ಮಗನಾಗಿ ಜನಿಸಿ ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ಯ್ರ ಹೋರಾಟದಲ್ಲಿ ಧುಮುಕಿದ್ದರು. ಬಿ.ಎ. ಪದವಿ ಪಡೆದು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ 20 ವರ್ಷಗಳ ಕಾಲ ಸೇವೆ ಸಲ್ಲಿಸಿಇವರು ಸಾಹಿತ್ಯದತ್ತ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಎಸ್.ಡಿ.ಎಂ. ಕಾಲೇಜಿನ ಪ್ರಾಧ್ಯಾಪಕರಾಗಿ, ನಂತರ ಸುದೀರ್ಘ ಅವಧಿಯ ಪ್ರಾಚಾರ್ಯರಾಗಿ ಶಿಕ್ಷಣ ಕ್ಷೇತ್ರದಲ್ಲಿಯೂ ಅಮೋಘ ಸೇವೆಯನ್ನು ಸಲ್ಲಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ವಿದ್ಯಾರ್ಜನೆ ನೀಡಿದ್ದರು. ಸೇವಾ ಅವಧಿಯಲ್ಲಿ ಧಾರವಾಡ ವಿಶ್ವವಿದ್ಯಾಲಯದ ವಿವಿಧ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು.

ಜನಪದ ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವ ಅವರು ಸುಗ್ಗಿ ಕುಣಿತ, ಗುಮಟೆ ಪಾಂಗು, ಯಕ್ಷಗಾನ ಕಲೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ತಮ್ಮ ಜಾನಪದ ಪ್ರಕಾಶನದಿಂದ 1983ರಲ್ಲಿ ಜಾನಪದ ದೀಪಾರಾಧನೆ ಎನ್ನುವ ಸಾಂಸ್ಕೃತಿಕ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಅವರ ಕೂಸಾಯ್ತು ನಮ್ಮ ಕೊಮರಾಗೆ(1983), ಗಾಮೊಕ್ಕಲ ಮಹಾಭಾರತ(1992), ಸುಗ್ಗಿ ಹಬ್ಬ(1999) ಕೃತಿಗಳಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಬಹುಮಾನವು ಲಭಿಸಿದೆ. ಇವರ ಹೇಳ್ತೇವೋ ಗುಮ್ಟೆ ಪದನಾವಾ, ಉತ್ತರ ಕನ್ನಡ ಜಿಲ್ಲೆಯ ಜನಪದ ಆಟಗಳು, ಜೇಂಗೊಡ, ಕನ್ನಡ ಬಯಲಾಟ ಪರಂಪರೆ ಕೃತಿಗಳು ವಿಶ್ವವಿದ್ಯಾಲಯಗಳ ಪಠ್ಯ ಪುಸ್ತಕಗಳಾಗಿ ಮನ್ನಣೆ ಪಡೆದಿವೆ. ಹಾಲಕ್ಕಿ ಒಕ್ಕಲಿಗರು, ವಿಮೋಚನೆ(ನಾಟಕ ಕೃತಿ), ಚಿಂತನ ತರಂಗ, ಕೋಪ ನರಕದ ಬಾಗಿಲು, ಹುತ್ತವ ಬಡಿದರೆ ಹಾವು ಸಾಯಬಲ್ಲದೆ, ನ್ಯಾಯಾನ್ಯಾಯ ವಿವೇಚನೆ, ಬಾನುಲಿ ಅಲೆಗಳು, ಶರಣರ ಬೆಳಕಿನ ಪಥ, ಜಾನಪದ ಜಗಲಿಯಲ್ಲಿ(ಆತ್ಮಕಥನ), ಕಲಿಕೆಯ ಗುಡಿಲಲ್ಲಿ(ಅನುಭವ ಕಥನಗಳು), ಗಂಗೋತ್ರಿ, ಕರ್ನಾಟಕ ಬುಡಕಟ್ಟುಗಳು, ಗುಣ ಗೌರವ, ನಿಲಾಂಜನ, ಸೌಹಾರ್ದ ಸಂಗಮ(ಸAಪಾದಕತ್ವದ ಕೃತಿಗಳು), ಕಾದು ಅರಳು(1981), ಹಂಸಪಥ(2001), ಕಾಡು ಹಾಡು(2005), ನೂರು ಪದ ನೂರು ಹದ(2007), ಮುರುಡ ಅರಳು(2009), ದೀಪಾರಾಧನೆ, ಕಲಶ(ಅಭಿನಂದನಾ ಗ್ರಂಥಗಳು) ಓದುಗರ ಮನಗೆದ್ದಿದೆ. ಪ್ರಕಟಿತ 63 ಗ್ರಂಥಗಳಲ್ಲಿ 45 ಗ್ರಂಥಗಳು ಕೇವಲ ಜಾನಪದಕ್ಕೆ ಸಂಬAಧಿಸಿದ್ದಾಗಿದೆ. (18 ಕೃತಿಗಳು ಹಿಂದುಳಿದ. ಬುಡಕಟ್ಟು ಜನಾಂಗಗಳ ಸಾಹಿತ್ಯ, ಕಲೆ, ಸಂಸ್ಕೃತಿಗೆ ಸಂಬAಧಿಸಿದ ಸಂಶೋಧನಾತ್ಮಕ ಗ್ರಂಥಗಳಾಗಿದ್ದು, 27 ಕೃತಿಗಳು ಜನಪದ ಗೀತ, ಕಥೆ, ಬಯಲಾಟ, ಸಂಪ್ರದಾಯ, ಹಬ್ಬ ಹರಿದಿನ, ಆಟ, ಆಹಾರ ಪದ್ಧತಿ ಮುಂತಾದ ಜಾನಪದ ವಿವಿಧ ಪ್ರಕಾರಗಳಿಗೆ ಸಂಬAಧಿಸಿದ ಸಂಶೋಧನಾತ್ಮಕ ಒಳನೋಟವುಳ ಸಂಕಲನಗಳು.) ಉಳಿದ 18 ಗ್ರಂಥಗಳು ನಾಟಕ, ಕವನ ಸಂಕಲನ ಹಾಗೂ ಪ್ರೌಢ ಪ್ರಬಂಧಗಳಾಗಿವೆ.
ಉತ್ತರ ಕನ್ನಡ ಜಿಲ್ಲಾ ಪ್ರಥಮ ಜಾನಪದ ಸಮ್ಮೇಳನ, ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ, ಅಖಿಲ ಕರ್ನಾಟಕ 27ನೇ ಜಾನಪದ ಸಮ್ಮೇಳನ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಜಾನಪದ ಗೋಷ್ಠಿಗಳ ಅಧ್ಯಕ್ಷತೆ ವಹಿಸುವ ಮೂಲಕ ಕೊಡುಗೆ ನೀಡಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಿಂದ ಜಾನಪದ ತಜ್ಞ(1993), ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ(2003), ಗೌರೀಶ ಕಾಯ್ಕಿಣಿ ಪ್ರತಿಷ್ಠಾನ ಪ್ರಶಸ್ತಿ,ಗಳು ಇವರನ್ನು ಅರಸಿ ಬಂದಿದೆ.
ಇರ್ವರು ಪುತ್ರರು ಹಾಗೂ ಜನಪದ ತಜ್ಞೆ ಮಗಳು ಸವಿತಾ ಸೇರಿದಂತೆ ಅಪಾರ ಅಭಿಮಾನಿಗಳಿಂದ ದೂರವಾಗಿದ್ದಾರೆ. ಇವರ ಇಚ್ಚೆಯಂತೆ ಎರಡು ನೇತ್ರಗಳನ್ನು ದಾನ ಮಾಡಿದ್ದು, ಇವರ ಅಂತ್ಯಕ್ರಿಯೆಯು ಇವರ ಇಚ್ಚೆಯಂತೆ ಸೋಮವಾರ ಪಟ್ಟಣದ ಮುಕ್ತಿದಾಮದಲ್ಲಿ ಜರುಗಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಇವರ ನಿಧನಕ್ಕೆ ಸಾಹಿತಿಗಳು, ಜನಪ್ರತಿನಿಧಿಗಳು, ವಿವಿಧ ಸಂಘಟನೆಯ ಪ್ರಮುಖರು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
More Stories
ಅತಿವೇಗದ ಬಸ್ ಡಿಕ್ಕಿ, ಸ್ಕೂಟಿ ಸವಾರ ಸ್ಥಳದಲ್ಲೇ ದುರ್ಮರಣ
ಭಟ್ಕಳದ ದರ್ಶನ ನಾಯ್ಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟಕ್ಕೆ ಭಟ್ಕಳದ ಕೀರ್ತಿ
ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ