October 6, 2025

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) (ಸಿಪಿಐಎಂ) ಉತ್ತರ ಕನ್ನಡ ಜಿಲ್ಲಾ ಸಮಿತಿಯಿಂದ ಗೌರವ ನಮನ

ಹೊನ್ನಾವರ : ನಾಡು ಕಂಡ ಅಪ್ಪಟ ಜಾನಪದ ತಜ್ಞ, ಪ್ರಗತಿಪರ ವಿಚಾರದ ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ಪ್ರಕಾಶಕ, ಜನಪರ ಚಳುವಳಿಗಳ ಹಿತೈಷಿ, ಯಕ್ಷಗಾನ ಮತ್ತು ಜಾನಪದ ಅಕಾಡೆಮಿ ಸದಸ್ಯರೂ ಆಗಿದ್ದ ಡಾ. ಎನ್.ಆರ್. ನಾಯಕ ಅವರು ಅಗಲಿರುವುದು ಜಿಲ್ಲೆಯ ಮಾತ್ರವಲ್ಲ ಸಮಸ್ತ ನಾಡಿನ ಸಾಹಿತ್ಯ ಸಾಂಸ್ಕೃತಿಕ ಲೋಕಕ್ಕೆ ಅಪಾರ ನಷ್ಟವನ್ನುಂಟುಮಾಡಿದೆ, ಜಿಲ್ಲೆಯ ಬಹುದೊಡ್ಡ ಸಾಹಿತ್ಯದ ಕೊಂಡಿ ಕಳಚಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) (ಸಿಪಿಐಎಂ) ಉತ್ತರ ಕನ್ನಡ ಜಿಲ್ಲಾ ಸಮಿತಿ ಅಭಿಪ್ರಾಯ ಪಡುತ್ತದೆ. ಅವರಿಗೆ ಪಕ್ಷವು ಗೌರವ ನಮನಗಳನ್ನು ಸಲ್ಲಿಸುತ್ತದೆ. ಕುಟುಂಬ ಮತ್ತು ಎಲ್ಲಾ ಆಪ್ತೇಷ್ಟ ಬಂಧುಬಳಗಕ್ಕೆ ಸಾಂತ್ವನವನ್ನು ಹೇಳುತ್ತೇವೆ ಎಂದು ಯಮುನಾ ಗಾಂವ್ಕರ್ ಕಾರ್ಯದರ್ಶಿ ತಿಳಿಸಿದ್ದಾರೆ

ಅಂಕೋಲೆಯಲ್ಲಿ ಒಂದು ಬಡ ಕುಟುಂಬದ ಹಿನ್ನೆಲೆಯಿಂದ ಬಂದು ಉನ್ನತವಾದ ಶಿಕ್ಷಣ ಪಡೆದು ಪ್ರಾಧ್ಯಾಪಕರಾದರು. ಸಹಸ್ರಾರು ವಿದ್ಯಾರ್ಥಿಗಳನ್ನು ರೂಪಿಸಿ ಸಮಾಜಕ್ಕೆ ನೀಡಿದರು. ಹೊನ್ನಾವರದಲ್ಲಿಯೇ ಇದ್ದು ಜಿಲ್ಲೆಯ ಜಾನಪದ ಕ್ಷೇತ್ರ ಕಾರ್ಯ ನಡೆಸಿದರು. ಮಕ್ಕಳ ಸಾಹಿತ್ಯವಿರಬಹುದು, ವೈಚಾರಿಕ ಕ್ಷೇತ್ರವಿರಬಹುದು ತಮ್ಮನ್ನು ತೊಡಗಿಸಿಕೊಂಡರು. ಅನೇಕರಿಗೆ ಸಂಶೋಧನಾ ಮಾರ್ಗದರ್ಶಕರಾಗಿದ್ದರು. ಪ್ರಾಯೋಗಿಕವಾಗಿ ಬದುಕಿದರು. ಮುಂದಿನ ಸಾಲಿನಲ್ಲಿ ಕುಳಿತು ಹಿರಿಕಿರಿಯರೆನ್ನದೇ ಅತ್ಯಂತ ಸಹನೆಯಿಂದ ವಿಚಾರ ಆಲಿಸುತ್ತಿದ್ದರು. ಜಾನಪದಕ್ಕೆ ಸಂಬAಧಿಸಿದ ೫೫ ಕ್ಕೂ ಹೆಚ್ಚು ಕೃತಿಗಳನ್ನು ಒಟ್ಟಾರೆ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಹೊಸತಲೆಮಾರಿಗೆ ನೀಡಿದ್ದಾರೆ. ಜಿಲ್ಲೆಯ ಹಾಲಕ್ಕಿ, ಗಾಮೊಕ್ಕಲ, ಕುಣಬಿ, ಸಿದ್ದಿ ಇತರ ಸಮುದಾಯದ ಒಳ ಆವರಣವನ್ನು ಸಮಾಜಕ್ಕೆ ತೆರೆದು ತೋರಿಸಲು ಶ್ರಮಿಸಿದ್ದರು ಎಂದು ಸಿಪಿಐಎಂ ಅವರ ಕೆಲಸವನ್ನು ನೆನೆಸುತ್ತದೆ. ಬಾಳಸಂಗಾತಿ ಜಾನಪದ ತಜ್ಞೆ ಶಾಂತಿ ನಾಯಕರ ಜೊತೆಗೂಡಿ ತಮ್ಮದೇ ಆದ ಜಾನಪದ ಪ್ರಕಾಶನದಿಂದ ಜಾನಪದ ದೀಪಾರಾಧನೆ ನೆರವೇರಿಸುತ್ತಿದ್ದರು. ರಾಜ್ಯೋತ್ಸವ ಪ್ರಶಸ್ತಿಯನ್ನು ಒಳಗೊಂಡು ವಿವಿಧ ಅಕಾಡೆಮಿಗಳ ಮತ್ತು ವಿವಿಧ ಸಂಸ್ಥೆಗಳು ಕೊಡಮಾಡುವ ಉನ್ನತ ಪ್ರಶಸ್ತಿಗಳು ಇವರ ಕೆಲಸಕ್ಕೆ ಲಭಿಸಿವೆ. ಅವರ ಜೀವನ ಮತ್ತು ಸಾಹಿತ್ಯ ಕೃತಿಗಳ ಅಧ್ಯಯನ ಮಾಡುತ್ತ ಮುಂದಿನ ತಲೆಮಾರಿಗೆ ತಲುಪಿಸುವುದೇ ನೈಜ ಶ್ರದ್ಧಾಂಜಲಿ ಎಂದು ಸಿಪಿಐಎಂ ಉತ್ತರ ಕನ್ನಡ ಜಿಲ್ಲಾ ಸಮಿತಿ ಅಭಿಪ್ರಾಯ ಪಡುತ್ತದೆ ಎಂದು ಯಮುನಾ ಗಾಂವ್ಕರ್ ಕಾರ್ಯದರ್ಶಿ ತಿಳಿಸಿದ್ದಾರೆ.

About The Author

error: Content is protected !!