October 6, 2025

ಭಟ್ಕಳ ಹಳೆ ಮೀನು ಮಾರುಕಟ್ಟೆಯಲ್ಲಿ ಕೀಡಿಗೇಡಿಗಳ ಅಟ್ಟಹಾಸ, ತ್ಯಾಜ್ಯ ಎಸೆದು ದುರ್ವಾಸನೆ ಮಹಿಳೆಯರ ಹಠಾತ್ ಪ್ರತಿಭಟನೆ

ಭಟ್ಕಳ: ಪಟ್ಟಣದ ಹಳೆ ಮೀನು ಮಾರುಕಟ್ಟೆ ಸ್ಥಳಾಂತರ ಮಾಡಿಸಬೇಕೆಂಬ ಹಠಕ್ಕೆ ಕೆಲವರು ಇಳಿದುಕೊಂಡು ಮಾರುಕಟ್ಟೆ ದಾರಿಯಲ್ಲೇ ಕೊಳಕು ತ್ಯಾಜ್ಯಗಳನ್ನು ಎಸೆದುಹೋದ ಕೀಡಿಗೇಡಿಗಳ ಕೃತ್ಯಕ್ಕೆ ಸೋಮವಾರ ಮೀನು ಮಾರಾಟಗಾರ ಮಹಿಳೆಯರು ಕಿಡಿಕಾರಿದ್ದಾರೆ.

ಬೆಳಿಗ್ಗೆ ಮಾರುಕಟ್ಟೆ ಪ್ರವೇಶದ್ವಾರದಲ್ಲೇ ರಾಶಿರಾಶಿ ಕಸ, ಉಪಯೋಗಿಸಿದ ಸ್ಯಾನಿಟರಿ ಪ್ಯಾಡ್, ಹಳೆಯ ಒಳಉಡುಪು, ಕೂದಲು, ಹರಕುಬಟ್ಟೆ, ಕಾರ್ಯಕ್ರಮ ತ್ಯಾಜ್ಯ ಮುಂತಾದ ಕೊಳೆ ವಸ್ತುಗಳನ್ನು ಎಸೆದು ದುರ್ವಾಸನೆ ಸೃಷ್ಟಿಸಿದ್ದರಿಂದ ಮಹಿಳೆಯರು ಹಠಾತ್ ಪ್ರತಿಭಟನೆ ನಡೆಸಿದರು.

ಹಳೆ ಮಾರುಕಟ್ಟೆಯಿಂದ ನಮ್ಮನ್ನು ಹೇಗಾದರೂ ಓಡಿಸಬೇಕು ಎಂಬ ನಿಟ್ಟಿನಲ್ಲಿ ಕೆಲವರು ಸಂಚು ನಡೆಸುತ್ತಿದ್ದಾರೆ. ಕಸದ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಭಟ್ಕಳ ಮಾರ್ಕೆಟ್ ಸದಾ ಕಸದಲ್ಲೇ ಎಂದು ವೈರಲ್ ಮಾಡುತ್ತಿದ್ದಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರ ಭರವಸೆ ಹಾಳುಮಾಡುವ ಯತ್ನ?

ಈ ಹಿಂದೆ ಸಚಿವ ಮಂಕಾಳ ವೈದ್ಯ ಅವರು ಹಳೆಯ ಮಾರುಕಟ್ಟೆಗೆ ಭೇಟಿ ನೀಡಿ ಸ್ಥಳಾಂತರ ಮಾಡುವ ಪ್ರಶ್ನೆಯೇ ಇಲ್ಲ, ಹೊಸ ಮಾರುಕಟ್ಟೆ ಪ್ರಾರಂಭಿಸುತ್ತೇವೆ. ಹಳೆಯದು ಹಾಗೆಯೇ ಮುಂದುವರಿಯುತ್ತದೆ ಎಂದು ಖಾತ್ರಿಪಡಿಸಿದ್ದರು. ಇದರಿಂದ ಮಹಿಳೆಯರು ನಿರಾಳರಾಗಿದ್ದರು. ಆದರೆ ಸೆಪ್ಟೆಂಬರ್ 1ರಿಂದ ಹೊಸ ಮಾರುಕಟ್ಟೆ ಪ್ರಾರಂಭವಾದ ಬಳಿಕ ಒಂದು ಸಮುದಾಯದ ಮೀನು ವ್ಯಾಪಾರಿಗಳು ಅಲ್ಲಿ ತೆರಳಿದರೂ, ಮಹಿಳೆಯರು ಹಳೆಯ ಮಾರುಕಟ್ಟೆಯಲ್ಲಿಯೇ ಉಳಿದರು. ಇದರಿಂದ ಅಸಮಾಧಾನಗೊಂಡ ಕೀಡಿಗೇಡಿಗಳು ತ್ಯಾಜ್ಯ ಎಸೆದು ವಾತಾವರಣ ಹಾಳುಮಾಡಲು ಮುಂದಾಗಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ.

ಕ್ರಮ ಕೈಗೊಳ್ಳದಿದ್ದರೆ ರಸ್ತೆ ತಡೆ!

ಘಟನೆಯ ಗಂಭೀರತೆ ಅರಿತ ಪುರಸಭೆ ಹಿರಿಯ ಆರೋಗ್ಯಾಧಿಕಾರಿ ಸೊಜಿಯ ಸುಮನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತ್ಯಾಜ್ಯಗಳಲ್ಲಿ ಪತ್ತೆಯಾದ ಆಸ್ಪತ್ರೆ ಬಿಲ್ ಹಾಗೂ ವಿಳಾಸದ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇಂತಹ ಘಟನೆಗಳು ಮುಂದುವರಿದರೆ ಮಾರುಕಟ್ಟೆ ಬಿಟ್ಟು ರಸ್ತೆ ತಡೆದು ಅಲ್ಲಿ ಮೀನುಮಾರಾಟ ನಡೆಸುತ್ತೇವೆ ಎಂದು ಮೀನುಮಾರುಕಟ್ಟೆ ಅಧ್ಯಕ್ಷ ಖಾಜಾ ಹಸನ್ ಎಚ್ಚರಿಕೆ ನೀಡಿದರು.

About The Author

error: Content is protected !!