October 6, 2025

ಜಿಲ್ಲಾ ಮಟ್ಟದ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ, ಜನಪ್ರತಿನಿಧಿಗಳ ನಡೆಯನ್ನು ಖಂಡಿಸಿದ ಶಿಕ್ಷಕರ ಸಂಘದ ಅಧ್ಯಕ್ಷ

ಹೊನ್ನಾವರ: ಶಿಸ್ತ್ರು, ಆತ್ಮವಿಶ್ವಾಸ, ನಾಯಕತ್ವ ಗುಣ ಬೆಳೆಸುವಲ್ಲಿ ಕ್ರೀಡೆಯು ಸಹಕಾರಿಯಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಲತಾ ನಾಯಕ ಹೇಳಿದರು.

ಹೊನ್ನಾವರ ಪಟ್ಟಣದ ಎಸ್‌ಡಿಎಂ ಮೈದಾನದಲ್ಲಿ ಶನಿವಾರ ಆಯೋಜಿಸಿದ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ಸಧೃಡವಾಗಲು ಕ್ರೀಡೆ ಮಹತ್ತರ ಪಾತ್ರ ವಹಿಸಲಿದೆ. ಸೋಲು- ಗೆಲುವು ಸಹಜವಾಗಿದ್ದು, ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಿ ಸಾಧನೆ ಮಾಡಬೇಕು ಎಂದರು.

ಡಯಟ್ ಪ್ರಾಚಾರ್ಯ ಎನ್.ಆರ್.ಹೆಗಡೆ ಮಾತನಾಡಿ, ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ದೈಹಿಕ ವ್ಯಾಯಾಮ ಅಗತ್ಯ. ದೈಹಿಕ ಕ್ಷಮತೆ ಪ್ರೇರೇಪಿಸಲು ಕ್ರೀಡಾಕೂಟವು ಅನುಕೂಲವಾಗಿದೆ. ಅಧಿಕಾರಿಗಳ ಮತ್ತು ಶಿಕ್ಷಕರ ಸಹಕಾರದಿಂದ ಕ್ರೀಡಾಕೂಟವು ಯಶಸ್ವಿಯಾಗಿ ನಡೆಯುತ್ತಿದೆ ಎಂದರು.  

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾವಂಕರ್ ಮಾತನಾಡಿ ಕ್ರೀಡಾಕೂಟ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಇಲಾಖೆಯಿಂದ ಅತ್ಯಂತ ಕಡಿಮೆ ಅನುದಾನ ಬಂದರೂ ಶಿಕ್ಷಕರೆಲ್ಲ ಸೇರಿ ಅದ್ದೂರಿಯಾಗಿ ಇಲಾಖೆಯ ಕಾರ್ಯಕ್ರಮ ಯಶ್ವಸಿಗೆ ನೆರವಾಗುತ್ತಿದ್ದಾರೆ. ಜನಪ್ರತಿನಿಧಿಗಳು ಕಾರ್ಯಕ್ರಮದಿಂದ ದೂರ ಇರುತ್ತಾರೆ. ಶಿಕ್ಷಕರೆಲ್ಲರೂ ಒಟ್ಟಾಗಿ ಯಶ್ವಸಿ ಮಾಡುವ ಕಾರ್ಯಕ್ರಮ ಜನಪ್ರತಿನಿಧಿಗಳು ಭಾಗವಹಿಸಿ ನೋಡಬೇಕಿತ್ತು. ಅವರು ಆಗಮಿಸುದಿಲ್ಲ ಎಂದರೆ ಇಲಾಖೆ ಅನುದಾನದಲ್ಲಿ ಕಾರ್ಯಕ್ರಮ ಮುಗಿಸೋಣ ಎಂದು ಸಲಹೆ ನೀಡಿದರು.

ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವಿಠೋಬ ನಾಯಕ, ಪ.ಪಂ.ಉಪಾಧ್ಯಕ್ಷ ಸುರೇಶ ಹೊನ್ನಾವರ, ಶಿಕ್ಷಕ ಸಂಘಟನೆಗಳ ಅಧ್ಯಕ್ಷರಾದ ರವೀಂದ್ರ ಭಟ್, ಎಲ್.ಎಂ.ಹೆಗಡೆ, ಸತೀಶ ನಾಯ್ಕ, ಎಂ.ಜಿ.ನಾಯ್ಕ, ಸಂತೋಷಕುಮಾರ, ಮಹೇಶ ಶೆಟ್ಟಿ, ಬಾಬು ನಾಯ್ಕ, ರಾಮ ಗೊಂಡ, ಗೌರೀಶ ಭಂಡಾರಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಜನಪ್ರತಿನಿಧಿಗಳ ನಡೆಯನ್ನು ಖಂಡಿಸಿದ ಶಿಕ್ಷಕರ ಸಂಘದ ಅಧ್ಯಕ್ಷ

“ಮಕ್ಕಳನ್ನು ಬಿಸಿಲಿನಲ್ಲಿ ನಿಲ್ಲಿಸಿ ಜನಪ್ರತಿನಿಧಿಗಳಿಗೆ ಕಾಯುವ ಸ್ಥಿತಿ ಬಂದು ನಿಂತಿದೆ. ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಜನಪ್ರತಿಧಿಗಳು ಒಬ್ಬರಾದರೂ ಬರಬೇಕಿತ್ತು. ಪ್ರೋಟೋಕಾಲ್ ತಪ್ಪಿದರೆ ಕೂಗಾಡುವ ರಾಜಕಾರಣಿಗಳು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳಿಗೆ ಹಾಜರಾಗದೇ ಇರುವುದು ವ್ಯವಸ್ಥೆಯ ದುಸ್ಥಿತಿಯನ್ನು ತೋರಿಸುತ್ತದೆ.” ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಆನಂದು ಗಾಂವಕರ ಬೇಸರ ವ್ಯಕ್ತಪಡಿಸಿದರು.

ಭಾವನಾ ಟಿವಿಗಾಗಿ ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!