October 5, 2025

ಪುರಾಣ ಪ್ರಸಿದ್ದ ಕ್ಷೇತ್ರದಲ್ಲಿ ಒಂದಾದ ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ನವರಾತ್ರಿ ಉತ್ಸವ

ಹೊನ್ನಾವರ: ಸಮುದ್ರ ಮಟ್ಟಕ್ಕಿಂತಲೂ ಮೇಲಿರುವ ಈ ಬೆಟ್ಟದ ಪ್ರದೇಶದಿಂದ ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಬೆಟ್ಟದ ಸಾಲುಗಳು, ದೂರದ ಸಮುದ್ರ ತೀರ, ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ವೀಕ್ಷಿಸುವುದೇ ಸಂಭ್ರಮವಾಗಿದೆ. ಸಹ್ಯಾದ್ರಿ ಬೆಟ್ಟದ ಸಾಲಿನಲ್ಲಿ ಕಂಗೊಳಿಸುವ ನಯನಮನೋಹರವಾದ ಸೌಂದರ್ಯರಾಶಿಯ ಮಧ್ಯೆ, ಬೆಟ್ಟದ ತಪ್ಪಲಿನಲ್ಲಿ ಪುಣ್ಯಕ್ಷೇತ್ರವಾಗಿ, ನಿಸರ್ಗಧಾಮವಾಗಿ ಶಿಲೆಗಳಿಂದಾವೃತವಾದ ಶಿಖರಗಳ ನಡುವೆ ಇದ್ದು, ಶ್ರೀ ಕರಿಕಾನಮ್ಮ ದೇವಿಯ ಶಿಲಾಮಯವಾದ ಉದ್ಭವ ಮೂರ್ತಿ ಇಲ್ಲಿದೆ. 1955ರಲ್ಲಿ ವರದಳ್ಳಿಯ ಶ್ರೀಧರ ಸ್ವಾಮಿಗಳಿಂದ ಪುನರುತ್ಥಾನಗೊಂಡಿರುವ ಈ ದೇವಿಯು ತನ್ನಲ್ಲಿಗೆ ಬರುವ ಭಕ್ತರ ಕೋರಿಕೆಗಳನ್ನು ಈಡೇರಿಸುವ ಪ್ರತೀತಿ ಇದೆ. ಕುಂಕುಮ, ಬಳೆ, ಸೀರೆ, ಕುಪ್ಪಸಗಳ ಹರಕೆ ಹೊರುವವರಿಗಂತೂ ಲೆಕ್ಕವೇ ಇಲ್ಲ. ಅರಿಷಿನ ಮುಂಡಿಗೆ ಬಂದಾಗ ಅರಿಷಿನ ಮೂಟೆಯ ಹರಕೆ ಹೊರುವುದರಿಂದ ರೋಗ ವಾಸಿಯಾಗುವುದೆಂಬ ನಂಬಿಕೆಯು ಭಕ್ತರಲ್ಲಿದೆ.

  ಇನ್ನು ನವರಾತ್ರಿಯ ಸಮಯದಲ್ಲಿ ದೇವಾಲಯದಲ್ಲಿ ಒಂಬತ್ತು ದಿನಗಳ ವಿವಿಧ ಧಾರ್ಮಿಕ ಕಾರ್ಯಕ್ರಮವಾದ ಸಪ್ತಶತಿ ಪಾರಾಯಣ, ಉಡಿ ಸೇವೆ, ಆರತಿ ಕುಂಕುಮಾರ್ಚನೆ, ಸರ್ವಸೇವೆ, ವಿವಿಧ ಬಗೆಯ ಹೋಮಗಳ ಮೂಲಕ ಭಕ್ತರಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಸೇವಾ ಕೌಂಟರ್ ಜೊತೆಗೆ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಸೇವೆ ಸಲ್ಲಿಸಲು ಯಾವುದೇ ರೀತಿಯಲ್ಲಿ ಸಮಸ್ಯೆ ಉಂಟಾಗದAತೆ ಸ್ವಯಂ ಸೇವಕರನ್ನು ಆಡಳಿತ ಮಂಡಳಿಯವರು ನಿಯೋಜಿಸಿದ್ದಾರೆ. ಪ್ರತಿ ದಿನವು  ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.  ಮುಂಜಾನೆ ತಿಂಡಿ, ತಂಪು ಪಾನೀಯ, ಮಧ್ಯಾಹ್ನ ಹಾಗೂ ರಾತ್ರಿ ಪೂಜೆಯ ಬಳಿಕ ಆಗಮಿಸಿದ ಭಕ್ತರಿಗೆ ಪ್ರಸಾದ ಭೋಜನ ವ್ಯವಸ್ಥೆ ನವರಾತ್ರಿಯಲ್ಲಿ ಪ್ರತಿದಿನವು ಕಲ್ಪಿಸಲಾಗುತ್ತದೆ.  ಹೊನ್ನಾವರದದಿಂದ ದೇವಾಲಯಕ್ಕೆ ಹೋಗಲು ಬಸ್ ಹಾಗೂ ಟೆಂಪೋ ಇರದೇ ಇರುವುದರಿಂದ ಆರೇಅಂಗಡಿಯವರೆಗೆ ತೆರಳಿ  ಅಲ್ಲಿಂದ ದೇವಾಲಯಕ್ಕೆ ತೆರಳಲು ಆಟೋ ,ಕಾರು ರಿಯಾಯತಿ ದರದಲ್ಲಿ ಇರುದರಿಂದ ಬಸ್ ಹಾಗೂ ಟೆಂಪೋಮೂಲಕ ಆಗಮಿಸಿದ ಭಕ್ತರಿಗೂ ದೇವಾಲಯಕ್ಕೆ ತೆರಳಲು ಅನುಕೂಲವಾಗಲಿದೆ. 
 ಪ್ರತಿದಿನವು ದೇವಾಲಯಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ವಿವಿದಡೆಯಿಂದ ಹೊರ ರಾಜ್ಯದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಿದ್ದಾರೆ.

ವರದಿ: ವಿಶ್ವನಾಥ ಸಾಲ್ಕೋಟ್ ಹೊನ್ನಾವರ

About The Author

error: Content is protected !!