November 19, 2025

ಹಬ್ಬ ಹರಿ ದಿನಗಳು ಜಾತ್ರೆ ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ.. ಪ್ರಕಾಶ್ ಗುರೂಜಿ.

ಕೆ.ಆರ್. ಪೇಟೆ : ಜಾತ್ರೆ ಉತ್ಸವಗಳು, ಹಬ್ಬ ಹರಿ ದಿನಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಧಾರ್ಮಿಕ ಪರಂಪರೆಯ ಮೇಲೆ ಬೆಳಕು ಚೆಲ್ಲುವ ವಿಶೇಷವಾದ ಸಮಾರಂಭಗಳಾಗಿವೆ ಎಂದು ಪ್ರಕಾಶ್ ಗುರೂಜಿ ಹೇಳಿದರು.

ಅವರು ಕೃಷ್ಣರಾಜಪೇಟೆ ಪಟ್ಟಣದ ಹೊರವಲಯದ ಬಂಡಬೋಯನಹಳ್ಳಿ ಗ್ರಾಮದ ಸಮೀಪದಲ್ಲಿರುವ ಶ್ರೀ ಮಲೈ ಮಹದೇಶ್ವರಸ್ವಾಮಿ ದೇವಾಲಯದಲ್ಲಿ 25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಶ್ರೀ ಮಲೈಮಹದೇಶ್ವರ ಸ್ವಾಮಿಯವರ ಅದ್ದೂರಿ ಜಾನಪದ ಕಲಾ ತಂಡಗಳ ಭವ್ಯ ಮೆರವಣಿಗೆ ಹಾಗೂ ಮಹದೇಶ್ವರರ ಉತ್ಸವಕ್ಕೆ ಚಾಲನೆ ನೀಡಿ ನೆರೆದಿದ್ದ ಸದ್ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ಶ್ರೀ ಮಲೈಮಹದೇಶ್ವರ ಸ್ವಾಮಿಯವರ ಉತ್ಸವದ ಅಂಗವಾಗಿ ನೂರಾರು ಮಕ್ಕಳಿಗೆ ನಾಮಕರಣ ಕಾರ್ಯಕ್ರಮವನ್ನು ನೆರವೇರಿಸಿ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಕಾಶ್ ಗುರೂಜಿಯವರು ಮಲೈ ಮಹದೇಶ್ವರರು ನಮ್ಮ ಜಾನಪದ ಮುಖ್ಯ ಆರಾಧ್ಯ ದೈವ ವಾಗಿದ್ದು ಹುಲಿವಾಹನಧಾರಿಯಾದ ಮಹದೇಶ್ವರ ರ ಬಗ್ಗೆ ಅಪಾರವಾದ ನಂಬಿಕೆ ಹಾಗೂ ಭಕ್ತಿ ವಿಶ್ವಾಸಗಳಿವೆ. ಕೃಷ್ಣರಾಜಪೇಟೆ ತಾಲೂಕಿನಲ್ಲಿ ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ಸೇರಿದಂತೆ ಮೂರೂ ನದಿಗಳು ಒಂದಾಗಿ ಸೇರುವ, ಪವಿತ್ರ ತ್ರಿವೇಣಿ ಸಂಗಮದಲ್ಲಿ ಉತ್ತರ ದೇಶದಿಂದ ಬಂದಿದ್ದ ಬಾಲಕ ಮಹದೇಶ್ವರರು ಪವಾಡ ನಡೆಸಿ ತಾವು ಹೊಂದಿದ್ದ ಕೆಂಪು ವಸ್ತ್ರವನ್ನೇ ನದಿಯ ನೀರಿನ ಮೇಲೆ ಹಾಸಿ ಹರಿಗೋಲನ್ನಾಗಿ ಮಾಡಿಕೊಂಡು ನದಿ ದಾಟಿದ್ದು ಜಾನಪದ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಬೇಡಿ ಬಂದ ಭಕ್ತರ ಕೋರಿಕೆಗಳು ಹಾಗೂ ಅಭೀಷ್ಟೆಗಳನ್ನು ಈಡೇರಿಸುತ್ತ ಮಹದೇಶ್ವರ ಬೆಟ್ಟದಲ್ಲಿ ನೆಲೆ ನಿಂತಿರುವ ಮಹದೇಶ್ವರ ಸ್ವಾಮಿಯನ್ನು ನೋಡಲು ಮುಡುಪಿನೊಂದಿಗೆ ಹೋಗಿ, ದೇವರ ದರ್ಶನ ಮಾಡುವುದೇ ನಮ್ಮ ಸುಕೃತಾ ಪುಣ್ಯವಾಗಿದೆ. ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಬಂಡ ಬೋಯನಹಳ್ಳಿ ಗ್ರಾಮದಲ್ಲಿರುವ ಶ್ರೀ ಮಹದೇಶ್ವರ ಸ್ವಾಮಿಯವರ ದೇವಾಲಯವನ್ನು ಸ್ಥಾಪನೆ ಮಾಡಿ 25 ವರ್ಷಗಳು ಸಂಪೂರ್ಣಗೊAಡಿರುವ ಹಿನ್ನೆಲೆಯಲ್ಲಿ ಈ ಬಾರಿ ಅದ್ದೂರಿಯಾಗಿ ಸ್ವಾಮಿಯ ರಜತ ಮಹೋತ್ಸವ ಸಂಭ್ರಮವನ್ನು ಜಾನಪದ ಕಲಾತಂಡಗಳ ವೈಭವದ ಮೆರವಣಿಗೆಯೊಂದಿಗೆ ನಡೆಸಿ ಸಾವಿರಾರು ಭಕ್ತಾದಿಗಳಿಗೆ ಅನ್ನಪ್ರಸಾದವನ್ನು ನೀಡಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ನಡೆಸಲಾಗಿದೆ ಎಂದು ಪ್ರಕಾಶ್ ಗುರೂಜಿ ಹೇಳಿದರು.

ಅಗ್ರಹಾರ ಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದಿವಿ ಕುಮಾರ್, ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಮಂಡ್ಯ ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷರಾದ ಅಗ್ರಹಾರಬಾಚಹಳ್ಳಿ ಜಗದೀಶ್, ವೀರಶೈವ ಸಮಾಜದ ಮುಖಂಡರಾದ ತೋಟಪ್ಪಶೆಟ್ಟಿ, ಧನಂಜಯಕುಮಾರ್, ಬ್ಯಾಂಕ್ ಪರಮೇಶ್ವರ, ಡಿಂಕಾ ಮಹೇಶ್, ಸಾಸಲು ಈರಪ್ಪ, ಶ್ರೀ ಚನ್ನಬಸವೇಶ್ವರ ಕಲ್ಲು ಮಠದ ಶ್ರೀ ವಿರೂಪಾಕ್ಷ ರಾಜಯೋಗಿ ಶಿವಯೋಗಿ ಸ್ವಾಮೀಜಿಗಳು, ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಎಸ್.ಸಿ.ನಾಗೇಶ್, ಗ್ರಾಮ ಪಂಚಾಯಿತಿ ಸದಸ್ಯ ಆರ್.ಶ್ರೀನಿವಾಸ್ ಸಜ್ಜನ್, ವಳಗೆರೆಮೆಣಸ ರಮಾನಂದ, ಅನುವಿನಕಟ್ಟೆ ರಾಮಕೃಷ್ಣೇಗೌಡ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಮಲೈ ಮಹದೇಶ್ವರರ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೃಷ್ಣರಾಜಪೇಟೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಲೈ ಮಹದೇಶ್ವರರ ಉತ್ಸವವನ್ನು ಜಾನಪದ ಕಲಾತಂಡಗಳ ವೈಭವದ ಮೆರವಣಿಗೆಯೊಂದಿಗೆ ನಡೆಸಲಾಯಿತು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!