November 19, 2025

ಗ್ರಾಮೀಣ ಉದ್ಯೋಗಾಕಾಂಕ್ಷಿಗಳ ಉಜ್ವಲ ಭವಿತವ್ಯಕ್ಕೆ ಆಪ್ತ ಸಮಾಲೋಚನಾ ಶಿಬಿರ ನೆರವಾಗಲಿ- ಇ ಓ

ಹೊನ್ನಾವರ: ವ್ಯಕ್ತಿ ಉದ್ಯೋಗ ಕೈಗೊಳ್ಳುವುದರ ಮೂಲಕ ಸಮಾಜದಲ್ಲಿ ಗೌರವ ಸ್ಥಾನಮಾನ, ಆದಾಯ ಗಳಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೊನ್ನಾವರ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚೇತನ್ ಕುಮಾರ್ ಪಿ ರವರು ತಾಲೂಕಿನ ಉದ್ಯೋಗಾಕಾಂಕ್ಷಿಗಳಿಗೆ ಕರೆ ನೀಡಿದರು.

ದಿನಾಂಕ 28-10-2025 ರಂದು ಹೊನ್ನಾವರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ತಾಲೂಕ ಪಂಚಾಯತ್ ಹೊನ್ನಾವರ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹೊನ್ನಾವರ ಹಾಗೂ ಸಂಜೀವಿನಿ ತಾಲೂಕ ಅಭಿಯಾನ ನಿರ್ವಹಣಾ ಘಟಕದ ಆಶ್ರಯದಲ್ಲಿ ಗ್ರಾಮೀಣ ಯುವ ಜನತೆಗೆ ಆಯೋಜಿಸಿದ ಆಪ್ತ ಸಮಾಲೋಚನಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಣ್ಣಪ್ಪ ನಾಯಕ್ ರವರು ಎನ್ ಆರ್ ಎಲ್ ಎಂ ಯೋಜನೆಯಡಿ ಆಯೋಜಿಸಿದ ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಆಪ್ತ ಸಮಾಲೋಚನಾ ಶಿಬಿರ ಅತ್ಯಂತ ಅರ್ಥಪೂರ್ಣವಾಗಿದ್ದು, ತಾಲೂಕಿನ ಯುವ ಜನತೆ ತಮ್ಮ ಅರ್ಹತೆಗಳಿಗೆ ಅನುಗುಣವಾಗಿ ಬಂದಿರುವ ಯೋಜನ ಅನುಷ್ಠಾನ ಸಂಸ್ಥೆಗಳ ಮೂಲಕ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಅಲ್ಲದೆ ಯುವ ನಿಧಿ ಪಡೆದುಕೊಳ್ಳುತ್ತಿರುವ ಫಲಾನುಭವಿಗಳು ಉದ್ಯೋಗ ಹೊಂದಲು ಈ ಕಾರ್ಯಕ್ರಮದ ಮೂಲಕ ಸಹಕಾರಿಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹೊನ್ನಾವರ ತಾಲೂಕ ಪಂಚಾಯತ ಸಹಾಯಕ ನಿರ್ದೇಶಕರಾದ ಕಿರಣ್ ಕುಮಾರ್ ಎಂ ಜಿ ರವರು ಶಿಕ್ಷಣ ಮತ್ತು ಅರ್ಹತೆಗೆ ಅನುಗುಣವಾದ ಉದ್ಯೋಗದಿಂದ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯಈ ದಿಶೆಯಲ್ಲಿ ಆಪ್ತ ಸಮಾಲೋಚನಾ ಶಿಬಿರದಲ್ಲಿ ಭಾಗವಹಿಸುವ ಯುವ ಜನತೆ ವಿವಿಧ ಉದ್ಯೋಗಗಳಿಗೆ ಆಯ್ಕೆಯಾಗುವಂತಾಗಲಿ ಎಂದು ಹಾರೈಸಿದರು.

ಐಶ್ವರ್ಯ ಎಜುಕೇಶನಲ್ ಟ್ರಸ್ಟ್ ಬೆಂಗಳೂರು, ಕ್ಯಾಡ್ ಮ್ಯಾಕ್ಸ್ ಎಜುಕೇಶನ್ ಟ್ರಸ್ಟ್ ತುಮಕೂರು, ನಿರ್ಮಾಣ ಆರ್ಗನೈಸೇಷನ್ ತುಮಕೂರು, ಶ್ರೀ ಅನ್ನಪೂರ್ಣೇಶ್ವರಿ ಎಂಟರ್ಪ್ರೈಸಸ್ ಮಣಿಪಾಲ್ ಸಂಸ್ಥೆಗಳ ಸಂಯೋಜಕರು ಮತ್ತು ಐ ಟಿ ಐ ಕಾಲೇಜಿನ ಪ್ರಾಂಶುಪಾಲರಾದ ವಿನುತಾ ಭಟ್ ರವರು ಉಪಸ್ಥಿತರಿದ್ದು ಅವಕಾಶಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತದ ಯೋಜನಾಧಿಕಾರಿ ಲತಾ ನಾಯ್ಕ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಕೃಷ್ಣ ನಾಯ್ಕ ಮಾರಿ ಮನೆ, ಜೈನಾಬಿ ಸಾಬ್ ಇತರರು ಹಾಜರಿದ್ದರು. ತಾಲೂಕ ಪಂಚಾಯತ ಸಂಜೀವಿನಿ ನಿರ್ವಾಹಣ ಘಟಕದ ಸಿಬ್ಬಂದ್ದಿಗಳು ಕಾರ್ಯಕ್ರಮ ನಿರ್ವಹಿಸಿದರು.

About The Author

error: Content is protected !!