November 19, 2025

ಭಟ್ಕಳದಲ್ಲಿ ಮಾದಕ ವಸ್ತು ವಿರೋಧಿ, ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮ

ಭಟ್ಕಳ: ಅಂಜುಮನ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಮಾದಕ ವಸ್ತು ವಿರೋಧಿ ಹಾಗೂ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಜೀವನದಲ್ಲಿ ಆಸಕ್ತಿ ಕಳೆದುಕೊಂಡಾಗ ಮನುಷ್ಯನು ನಶಾಭ್ಯಾಸದತ್ತ ಸೆಳೆಯಲ್ಪಡುತ್ತಾನೆ. ಸಿಗರೇಟು, ಮದ್ಯ, ಗಾಂಜಾ ಮೊದಲಿಗೆ ಹಾನಿರಹಿತವೆಂದು ಕಾಣಿಸಿದರೂ, ಅದು ವ್ಯಕ್ತಿಯನ್ನು ಕ್ರಮೇಣ ನಾಶದತ್ತ ಕೊಂಡೊಯ್ಯುತ್ತದೆ. ಯುವಕರು ಒಳ್ಳೆಯ ಸ್ನೇಹಿತರನ್ನು ಆರಿಸಿಕೊಳ್ಳಬೇಕು. ಶಿಸ್ತು ಯಶಸ್ಸಿನ ಮೊದಲ ಹೆಜ್ಜೆ, ಎಂದು ಅವರು ಹೇಳಿದರು. ಸೈಬರ್ ಅಪರಾಧಗಳ ಏರಿಕೆಯನ್ನು ಉಲ್ಲೇಖಿಸಿ, ಅಪರಾಧಿಗಳು ಕೃತಕ ಗುರುತುಗಳಿಂದ ಸ್ನೇಹ ಬೆಸಿ ಹಣ ವಂಚಿಸುತ್ತಿದ್ದಾರೆ. ನೈಜ ಘಟನೆಗಳಿಂದ ಪಾಠ ಪಡೆದು ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಸಿದರು.

ಅತಿಥಿ ಜಮಾಅತ್-ಉಲ್-ಮುಸ್ಲಿಮೀನ್ ಉಪ ಕಾಜಿ ಮೌಲಾನಾ ಅನ್ಸಾರ್ ಖತೀಬ್ ಮದನೀ ಮಾತನಾಡಿ, ಮಾದಕ ವಸ್ತು ಪ್ರತಿಯೊಂದೂ ಆರೋಗ್ಯಕ್ಕೆ ಹಾನಿಕಾರಕ. ನಾವು ಮೌನವಾಗಿದ್ದರೆ ಸಮಾಜ ಇನ್ನಷ್ಟು ಹಾಳಾಗುತ್ತದೆ. ಬೆಂಕಿ ಹೊತ್ತಿಕೊಂಡಿದೆ, ಅದನ್ನು ಆರಿಸುವ ಹೊತ್ತಾಗಿದೆ ಎಂದು ಕರೆ ನೀಡಿದರು. ಮಜ್ಲಿಸ್-ಎ-ಇಸ್ಲಾಹ್ ವ ತಂಝೀಮ್, ಅಂಜುಮನ್ ಹಾಮಿ-ಎ-ಮುಸ್ಲಿಮೀನ್, ಇಸ್ಲಾಹ್-ಎ-ಮುಆಶಿರಾ ಸಮಿತಿ, ಭಟ್ಕಳ ಮುಸ್ಲಿಂ ಯುವಕ ಸಂಘ, ಜಿಲ್ಲಾ ಪೊಲೀಸ್ ಹಾಗೂ ನಗರ ಪೊಲೀಸ್ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನೆರವೇರಿತು.

ಅಂಜುಮನ್ ಉಪಾಧ್ಯಕ್ಷ ಮೊಹಮ್ಮದ್ ಸಾದಿಕ್ ಪಿಲ್ಲೂರು ಅಧ್ಯಕ್ಷತೆ ವಹಿಸಿದ್ದರು. ಡಾ. ಮೊಹಮ್ಮದ್ ಜುಬೈರ್ ಕೋಲಾ, ಜುಕಾಕು ಇಸ್ಮಾಯಿಲ್, ನಗರ ಠಾಣೆ ಸಿಪಿಐ ದಿವಾಕರ್, ಗ್ರಾಮೀಣ ಠಾಣೆ ಸಿಪಿಐ ಮಂಜುನಾಥ ಲಿಂಗಾರೆಡ್ಡಿ, ಅಜೀಜುರ್ ರಹ್ಮಾನ್, ಫಯ್ಯಾಝ್ ಕೋಲಾ, ದಾಮೋದರ ನಾಯಕ್ ಸೇರಿದಂತೆ ಗಣ್ಯರು ಹಾಜರಿದ್ದರು.
ವಿದ್ಯಾರ್ಥಿ ಅಬ್ದುರ್ರಹ್ಮಾನ್ ಅವರ ಕುರಾನ್ ಪಠಣದಿಂದ ಕಾರ್ಯಕ್ರಮ ಆರಂಭವಾಯಿತು. ಮುಬಾಶ್ಶಿರ್ ಹಲ್ಲಾರೆ ಸ್ವಾಗತಿಸಿದರು, ಸೈಯದ್ ಇಮ್ರಾನ್ ಲಂಕಾ ಪ್ರಾಸ್ತಾವಿಕ ಮಾತನಾಡಿದರು, ಪ್ರಿನ್ಸಿಪಾಲ್ ಯೂಸುಫ್ ಕೋಲಾ ಧನ್ಯವಾದ ಹೇಳಿದರು.

About The Author

error: Content is protected !!