August 29, 2025

ಮಗುವಿನ ಸಮರ್ಪಕ ಬೆಳವಣಿಗೆಗೆ ತಾಯಿಯ ಎದೆಹಾಲು ಅಗತ್ಯ : ದೇವಿ ಗೊಂಡ

ಭಟ್ಕಳ : ತಾಯಿಯ ಎದೆಹಾಲು ಮಗುವಿಗೆ ಅತ್ಯುತ್ತಮ ಪೌಷ್ಠಿಕ ಆಹಾರವಾಗಿದ್ದು, ಅದು ಶಿಶುವಿನ ಬೆಳವಣಿಗೆಗೆ ಬಹಳ ಅಗತ್ಯವಿದೆ ಎಂದು ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ದೇವಿ ಗೊಂಡ ತಿಳಿಸಿದ್ದಾರೆ.

ಶಿರಾಲಿ ಅಳ್ವೆಕೊಡಿ-1 ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಯಿಯ ಎದೆಹಾಲು ಮಗುವಿಗೆ ಅಮೃತಕ್ಕೆ ಸಮಾನವಾಗಿದೆ. ಇದು ಶಿಶು ಆರೋಗ್ಯ, ತೂಕವೃದ್ಧಿಗೆ ಬಹುಪಾಲುಂಟುಮಾಡುತ್ತದೆ. ಸಂಪೂರ್ಣ ಪೌಷ್ಠಿಕಾಂಶದ ಮೂಲಕ ಸೋಂಕುಗಳ ವಿರುದ್ಧ ಶಕ್ತಿಯನ್ನು ಒದಗಿಸುತ್ತದೆ ಎಂದು ಹೇಳಿದರು.

ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಶ್ವೇತಾ ಭೋಮಕರ ಅವರು ಮಾತನಾಡಿ, ತಾಯಿಯ ಎದೆಹಾಲಿನ ಮಹತ್ವವನ್ನು ವಿವರಿಸಿದರು. ಹೆತ್ತ ಬಳಿಕ ಕನಿಷ್ಠ ಎರಡು ವರ್ಷದವರೆಗೆ ತಾಯಿ ಮಗುವಿಗೆ ಹಾಲುಣಿಸಬೇಕು. ಇದು ಮಗು ಮತ್ತು ತಾಯಿಯ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ ಎಂದರು. ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಅಧ್ಯಕ್ಷರು, ಸದಸ್ಯರು, ಗರ್ಭಿಣಿಯರು, ಬಾಣಂತಿಯರು ಭಾಗವಹಿಸಿದ್ದರು.

About The Author