November 19, 2025

ಭಟ್ಕಳದಲ್ಲಿ ವೈಟ್‌ಬೋರ್ಡ್ ವಾಹನಗಳ ಅಕ್ರಮ ಓಡಾಟಕ್ಕೆ ಟ್ಯಾಕ್ಸಿ ಚಾಲಕರ ಕಿಡಿ, ಸರ್ಪನಕಟ್ಟೆ ಚೆಕ್‌ಪೋಸ್ಟ್ನಲ್ಲಿ ಅಕ್ರಮ ವಾಹನ ತಡೆದು ಪೊಲೀಸರಿಗೆ ಹಸ್ತಾಂತರ.

ಭಟ್ಕಳ: ಮಂಗಳೂರು, ಗೋವಾ ಸೇರಿದಂತೆ ವಿವಿಧ ಪ್ರದೇಶಗಳಿಂದ ಬಾಡಿಗೆಯ ಆಧಾರದಲ್ಲಿ ಪ್ರಯಾಣಿಕರನ್ನು ಹೊತ್ತು ತರುತ್ತಿರುವ ಖಾಸಗಿ ವೈಟ್‌ಬೋರ್ಡ್ ವಾಹನಗಳ ಅಕ್ರಮ ಓಡಾಟದ ವಿರುದ್ಧ ಭಟ್ಕಳ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಪನಕಟ್ಟೆ ಚೆಕ್‌ಪೋಸ್ಟ್ನಲ್ಲಿ ಅಕ್ರಮವಾಗಿ ಪ್ರಯಾಣಿಕರನ್ನು ಕರೆತರುತ್ತಿದ್ದ ಖಾಸಗಿ ವಾಹನವನ್ನು ಪೋಲಿಸ್ ಸಮ್ಮುಖದಲ್ಲಿ ತಡೆದು ಪೊಲೀಸರ ವಶಕ್ಕೆ ನೀಡಿದ್ದಾರೆ. ಬಾಡಿಗೆಯ ಆಧಾರದಲ್ಲಿ ವಾಹನ ಚಲಾಯಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ಸಾವಿರಾರು ರೂಪಾಯಿ ತೆರಿಗೆ ಪಾವತಿಸುತ್ತಿದ್ದೇವೆ. ನಾವು ಎಲ್ಲರೂ ಈ ವೃತ್ತಿಯನ್ನೇ ಜೀವನೋಪಾಯವನ್ನಾಗಿಸಿಕೊಂಡಿದ್ದೇವೆ. ಆದರೆ ವೈಟ್‌ಬೋರ್ಡ್ ವಾಹನಗಳು ಯಾವುದೇ ತೆರಿಗೆ ಇಲ್ಲದೇ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿರುವುದು ಕಾನೂನುಬಾಹಿರ ಎಂದು ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಭಟ್ಕಳ ಹಾಗೂ ಸುತ್ತಮುತ್ತ ಅನೇಕ ಖಾಸಗಿ ವಾಹನಗಳು ಇದೇ ರೀತಿಯಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ. ಸರ್ಕಾರದ ತೆರಿಗೆ ತಪ್ಪಿಸಿ ದಂಧೆ ನಡೆಸುತ್ತಿದ್ದಾರೆ. ಆರ್‌ಟಿಓ ಮತ್ತು ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ನಾವು ಸ್ವತಃ ಇಂತಹ ವಾಹನಗಳನ್ನು ತಡೆದು ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಘಟನೆಯ ನಂತರ ತಡೆದ ಖಾಸಗಿ ವಾಹನವನ್ನು ಪೊಲೀಸರು ವಶಕ್ಕೆ ಪಡೆದು, ಆರ್‌ಟಿಓ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಈ ಕುರಿತು ಭಟ್ಕಳ ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ಗಣೇಶ ದೇವಾಡಿಗ ಅವರು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮುಷಾಕ್, ಅದ್ವಾನ್, ಗಜಾನನ, ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.

About The Author

error: Content is protected !!