November 19, 2025

ಕದಂಬರ ನಾಡಿನಲ್ಲಿ ಕನ್ನಡದ ವೈಭವ -ಉಮೇಶ ಮುಂಡಳ್ಳಿ ಅವರಿಗೆ ಕದಂಬ ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿಗೆ ಆಯ್ಕೆ

ಭಟ್ಕಳ– ಕದಂಬ ಕನ್ನಡ ಸೇನೆ ಕರ್ನಾಟಕ ಇವರು ಕೊಡಮಾಡುವ “ಕದಂಬ ಕನ್ನಡ ಸಾಹಿತ್ಯ ರತ್ನ 2025 ” ಪ್ರಶಸ್ತಿಗೆ ಜಿಲ್ಲೆಯ ಭಾವಕವಿ ಸುಗಮ ಸಂಗೀತ ಗಾಯಕ ಸ್ವರ ಸಂಯೋಜಕ ಉಮೇಶ ಮುಂಡಳ್ಳಿಯವರನ್ನು ಆಯ್ಕೆ ಮಾಡಲಾಗಿದೆ.

ಕನ್ನಡದ ಮೊಟ್ಟ ಮೊದಲ ರಾಜ ಮನೆತನವಾದ ಕದಂಬರ ರಾಜಧಾನಿ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನ.10 ರಂದು ಅದ್ದೂರಿಯಾಗಿ ಆಯೋಜಿಸಿರುವ “ಕದಂಬರ ನಾಡಿನಲ್ಲಿ ಕನ್ನಡದ ವೈಭವ” ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದ ಕೊಡುಗೆಗಾಗಿ ಉಮೇಶ ಮುಂಡಳ್ಳಿ ಅವರನ್ನು ಆಯ್ಕೆ ಮಾಡಿರುವುದಾಗಿ ಕದಂಬ ಸೇನೆಯ ಸಂಸ್ಥಾಪಕ ಅಧ್ಯಕ್ಷ ಕದಂಬ ನಾ.ಅಂಬರೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಳೆದ ಇಪ್ಪತೈದು ವರ್ಷಗಳಿಂದ ಸಾಹಿತ್ಯ ಮತ್ತು ಸಂಗೀತ ಸೇವೆಯನ್ನು ಜೊತೆಜೊತೆಗೆ ನಡೆಸಿಕೊಂಡು ಬರುತ್ತಿರುವ ಮುಂಡಳ್ಳಿ ಅವರು ಮೌನಗೀತೆ, ಭಾವಸುಮ, ಕರುನಾಡ ಕುಡಿಗಳು,ನಾನೂ ಶಿಲ್ಪವಾಗಬೇಕು, ಹಾಗೂ ತಿಂಗಳ ಬೆಳಕು ( ಹನಿಕವನ) ಎನ್ನುವ ಕವನ ಸಂಕಲನಗಳನ್ನು, ಬೆಂಕಿ ಬಿದ್ದಿದೆ ಹೊಳೆಗೆ ಮಕ್ಕಳ ಕಥಾ ಸಂಕಲನ, ಉತ್ತರ ಕನ್ನಡಕ್ಕೆ ಒಂದು ಸುತ್ತು ಪ್ರವಾಸಿ ಲೇಖನ, ಮಾತಾ ಮಹಿಮಾ ಹಾಗೂ ಹನುಮಾಮೃತ ಎನ್ನುವ ಭಕ್ತಿ ಪ್ರಧಾನ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದು, ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಅನೇಕ ಮೌಲ್ಯಭರಿತ ಲೇಖನಗಳನ್ನು ಬರೆಯುತ್ತಾ ಬರುತ್ತಿದ್ದಾರೆ.

ಸಂಗೀತ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಮುಂಡಳ್ಳಿಯವರು ಜಿಲ್ಲೆ ಹೊರಜಿಲ್ಲೆ ಹಾಗೂ ಗಡಿ ರಾಜ್ಯಗಳಲ್ಲೂ ಭಕ್ತಿ ಸಂಗೀತ, ಸುಗಮ ಸಂಗೀತ ಕಾರ್ಯಕ್ರಮ ನೀಡುವುದರೊಂದಿಗೆ ತಮ್ಮದೇ ಸ್ವರಚಿತ ಭಾವಗೀತೆ ಭಕ್ತಿಗೀತೆ ಹಾಗೂ ದೇಶಭಕ್ತಿ ಗೀತೆಗಳ ಜೊತೆ ರಾಜ್ಯದ ಅನೇಕ ಹಿರಿ ಹಿರಿಯ ಕವಿಗಳ ಕವಿತೆಗಳೂ ಸೇರಿದಂತೆ ಇದುವರೆಗೆ ಸುಮಾರು ಮೂವತ್ತೈದಕ್ಕೂ ಹೆಚ್ಚಿನ ಗೀತೆಗಳಿಗೆ ಸ್ವರ ಸಂಯೋಜನೆ ಮಾಡಿ ತಾವು ಹಾಡುವುದರ ಜೊತೆಗೆ ಇತರೆ ಗಾಯಕರಿಗೂ ಅವಕಾಶ ನೀಡಿದ್ದಾರೆ. ಭರವಸೆಯ ಛಾಯೆ, ಮುಂಡಳ್ಳಿ ಭಕ್ತಿ ಗಾನ ಮಾಲಾ, ಶ್ರೀ ಕಂಚಿನ ದುರ್ಗಾಪರಮೇಶ್ವರಿ ಹಾಗೂ ಶ್ರೀ ಯಕ್ಷ ಚೌಡೇಶ್ವರಿ ಭಕ್ತಿಗೀತೆಗಳು, ಅಯೋಧ್ಯಾ ಶ್ರೀ ರಾಮನ ಭಕ್ತಿಗೀತೆ ಗಳು ಇವರ ಸಂಯೋಜನೆಯ ಜನಪ್ರಿಯ ಧ್ವನಿಮುದ್ರಿಕೆಗಳು. ಇವರ “ಭರವಸೆಯ ಛಾಯೆ” ಮೊದಲ ಧ್ವನಿಮುದ್ರಣವನ್ನು 2011 ರಲ್ಲಿ ಹಿರಿಯ ಸಾಹಿತಿ ಪಾಟಿಲ್ ಪುಟ್ಟಪ್ಪನರು ಲೋಕಾರ್ಪಣೆ ಮಾಡಿರುವುದು ವಿಶೇಷವಾಗಿದೆ.

ಮುಂಡಳ್ಳಿ ಯವರಿಗೆ ಇದುವರೆಗೆ ಅನೇಕ ಪ್ರಶಸ್ತಿ ಗಳು ಲಭಿಸಿದ್ದು, ತಾಲೂಕು ಆಡಳಿತ ವತಿಯಿಂದ 2011 ರ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರ ಯುವಜನ ಸೇವಾ ಇಲಾಖೆ ಕೊಡಮಾಡುವ ಪ್ರತಿಷ್ಠಿತ ಯುವ ಪ್ರಶಸ್ತಿ ( 2014-15), ಗೋವಾ ಕನ್ನಡ ಸಂಘದ ನ್ಯಾಶನಲ್ ಐಕಾನ್ ಅವಾರ್ಡ್, ರವೀಂದ್ರ ರತ್ನ ಪುರಸ್ಕಾರ 2024, ಚಿತ್ರಸಂತೆ ವರ್ಷದ ಕನ್ನಡಿಗ ಕರ್ನಾಟಕ ಅಚಿವರ್ಸ್ ಅವಾರ್ಡ್ 2025, ಕಲಾರತ್ನ ಲೋಕೇಶ್ ಅವಾರ್ಡ್ 2023 ಹೀಗೆ ಹತ್ತಾರು ಪ್ರಶಸ್ತಿ ಗಳು ಲಭಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಬನವಾಸಿಯ ಐತಿಹಾಸಿಕ ಶ್ರೀ ಮಧುಕೇಶ್ವರ ದೇವಸ್ಥಾನದ ಆವರಣದಲ್ಲಿ ನವೆಂಬರ್ 10 ರಂದು ನಡೆಯುವ ಕನ್ನಡದ ವೈಭವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಲೆ ಸಾಹಿತ್ಯ ಸಂಗೀತ ಉದ್ಯಮ ಸಹಕಾರ ಹೀಗೆ ಅನೇಕ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ಸಾಧಕರನ್ನು ಈ ಶುಭ ಸಂಧರ್ಭದಲ್ಲಿ ಗೌರವೊಸಲಿದ್ದು, ಮೈಸೂರಿನ ರಾಜ ಶ್ರೀ ಯದುವೀರ ಒಡೆಯರ್ ಅವರು ಕಾರ್ಯಕ್ರಮದ ಭವ್ಯ ಉಪಸ್ಥಿತರಿರಲಿದ್ದಾರೆ, . ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪನವರು ದಿವ್ಯ ಸಾನಿಧ್ಯ ವಹಿಸಲಿದ್ದು, ಕಾರ್ಯಕ್ರಮ ದಲ್ಲಿ ಚಿತ್ರನಟ ನೀರನಳ್ಳಿ ರಾಮಕೃಷ್ಣ,ನಿಕಿಲ್ ಕುಮಾರ್ ಸ್ವಾಮಿ,ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.

About The Author

error: Content is protected !!