November 19, 2025

ಭಟ್ಕಳದಲ್ಲಿ ಭಾವಪೂರ್ಣವಾಗಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ, ಶಿಕ್ಷಣವೇ ದೇಶದ ಪ್ರಗತಿಯ ಆಧಾರ: ಸುನಿಲ್ ಎಂ.

ಭಟ್ಕಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ (ಉತ್ತರ ಕನ್ನಡ) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಭಟ್ಕಳ ಉಪವಿಭಾಗದ ಆಶ್ರಯದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹ ಅಂಗವಾಗಿ, ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬ್ದುಲ್ ಕಲಾಮ ಅಜಾದ್ ಅವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಶಿಕ್ಷಣ ದಿನವನ್ನು ಭಾವಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವು ಕರ್ನಾಟಕ ಮೌಲಾನಾ ಅಜಾದ್ ಪಬ್ಲಿಕ್ ಸ್ಕೂಲ್ನಲ್ಲಿ ನಡೆಯಿತು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಎಂ. ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ಶಿಕ್ಷಣವೇ ದೇಶದ ಪ್ರಗತಿಯ ಮೂಲಾಧಾರ. ಮೌಲಾನಾ ಅಜಾದ್ ಅವರ ಕನಸುಗಳು ಇಂದಿನ ಭಾರತದ ಶಿಕ್ಷಣ ಕ್ಷೇತ್ರಕ್ಕೆ ದಿಕ್ಕು ತೋರಿವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೌಲಾನಾ ಅಬ್ದುರ್ ರಕೀಬ್ ಎಂ.ಜೆ. ನದ್ವಿ, ಮಜ್ಲಿಸ್-ಎ-ಇಸ್ಲಾಹ್ ಪ್ರಧಾನ ಕಾರ್ಯದರ್ಶಿ ಅವರು ವಹಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಮೊಹಮ್ಮದ್ ಹನೀಫ್ ಶಬಾಬ್ ಅವರು, ಮೌಲಾನಾ ಅಜಾದ್ ಅವರ ಜೀವನ, ದೃಷ್ಟಿಕೋನ ಹಾಗೂ ಸಾಧನೆಗಳ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿ, ಶಿಕ್ಷಣದ ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗಲೇ ನಿಜವಾದ ಪ್ರಗತಿ ಸಾಧ್ಯ ಎಂದು ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯ ಶಂಸುದ್ದೀನ್ ಅವರು ಶಾಲೆಯ ಶೈಕ್ಷಣಿಕ ಸಾಧನೆಗಳು ಹಾಗೂ ಸಮಗ್ರ ಶಿಕ್ಷಣದತ್ತ ಕೈಗೊಂಡಿರುವ ಪ್ರಯತ್ನಗಳ ಕುರಿತು ವಿವರಿಸಿದರು.ಕಾರ್ಯಕ್ರಮದಲ್ಲಿ ಫಯ್ಯಾಜ್ ಮುಲ್ಲಾ, ಅತೀಖುರ್ ರಹ್ಮಾನ್ ಶಾಬಂದರಿ, ಮುಬಶ್ಶಿರ್ ಹಲ್ಲಾರೆ, ಮೌಲಾನಾ ಅಝರ್ ಬರ್ಮಾವರ್, ಬಿಲಾಲ್ ಅಹ್ಮದ್ ಸೇರಿದಂತೆ ಹಲವರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶ್ರೀಮತಿ ಜಯಂತಿ ನಿರ್ವಹಿಸಿದರು. ಶ್ರೀಮತಿ ತನ್ಝಿಲಾ ಸ್ವಾಗತಿಸಿ, ಶ್ರೀಮತಿ ಶಿಫಾ ಫಿರ್ದೋಸ್ ವಂದಿಸಿದರು.

About The Author

error: Content is protected !!