December 24, 2025

ಆರೋಗ್ಯವಂತ ಜೀವನಕ್ಕೆ ಕ್ರೀಡೆ ಸಂಜೀವಿನಿ. ಅಂತಾರಾಷ್ಟ್ರೀಯ ಅಥ್ಲೀಟ್ ರೀನಾ ಜಾರ್ಜ್ ಅಭಿಮತ..

ಕೆಆರ್‌ಪೇಟೆ : ಆರೋಗ್ಯವಂತ ಜೀವನಕ್ಕೆ ಕ್ರೀಡೆಯು ಸಂಜೀವಿನಿಯಾಗಿದೆ. ವಿದ್ಯಾರ್ಥಿಗಳು ಹಾಗೂ ಯುವಜನರು ಮೊಬೈಲ್ ಪೋನಿನಿಂದ ದೂರವಿದ್ದು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಉತ್ತಮವಾದ ಕ್ರೀಡಾಪಟುಗಳಾಗಿ ಹೊರ ಹೊಮ್ಮಬೇಕು ಎಂದು ಏಕಲವ್ಯ ಪ್ರಶಸ್ತಿ ಪುರಸ್ಕೃತ ಅಥ್ಲೀಟ್ ರೀನಾ ಜಾರ್ಜ್ ಕರೆ ನೀಡಿದರು.

ಅವರು ಕೃಷ್ಣರಾಜಪೇಟೆ ಪಟ್ಟಣದ ಸ್ಕೂಲ್ ಆಫ್ ಇಂಡಿಯಾ ಶಾಲೆಯ ವಾರ್ಷಿಕ ಕ್ರೀಡಾಕೂಟ ಕ್ರೀಡೆ-2025 ರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕ್ರೀಡಾ ಜ್ಯೋತಿ ಬೆಳಗಿಸಿ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಲ್ಲಿ ಸೋಲು ಗೆಲುವು ಎನ್ನುವುದು ಸ್ವಾಭಾವಿಕವಾದ ಪ್ರಕ್ರಿಯೆಯಾಗಿದ್ದು ಗೆದ್ದಾಗ ಹಿಗ್ಗದೇ, ಸೋತಾಗ ಕುಗ್ಗದೇ ಸತತವಾದ ಪ್ರಯತ್ನ ಹಾಗೂ ಅಭ್ಯಾಸದಿಂದ ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಂಡು ಕ್ರೀಡೆಯಲ್ಲಿ ಸರ್ವಶ್ರೇಷ್ಠ ಸಾಧನೆ ಮಾಡಬೇಕು ಎಂದು ಮನವಿ ಮಾಡಿದ ರೀನಾ ಜಾರ್ಜ್ ಇಂದಿನ ದಿನಮಾನದಲ್ಲಿ ಯುವಜನರು ಕ್ರೀಡಾ ಚಟುವಟಿಕೆಗಳಿಂದ ದೂರ ಉಳಿಯುತ್ತಿದ್ದಾರೆ. ಕ್ರಿಕೆಟ್, ಪುಟ್ ಬಾಲ್ ಹಾಗೂ ಬ್ಯಾಡ್ಮಿಂಟನ್ ಆಟಗಳನ್ನು ಮಾತ್ರ ಕ್ರೀಡೆಯೆಂದು ಭಾವಿಸಿದ್ದಾರೆ. ಮೊಬೈಲ್ ಪೋನಿನೊಳಗೆ ಮುಳುಗಿ ವ್ಯರ್ಥವಾಗಿ ಸೋಮಾರಿಗಳಾಗಿ ಕಾಲ ಹರಣ ಮಾಡುತ್ತಿರುವ ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವ ನೀಡುತ್ತಿಲ್ಲ. ಕಳೆದು ಹೋದ ಸಮಯವು ನಮಗೆ ಮತ್ತೆ ದೊರೆಯುವುದಿಲ್ಲ ವಾದ್ದರಿಂದ ಪಾಠಪ್ರವಚನಗಳ ಜೊತೆಗೆ ಕ್ರೀಡೆಯಲ್ಲಿಯೂ ಬಾಗವಹಿಸಿ ಒಲಂಪಿಕ್ ಹಾಗೂ ಏಷಿಯಾಡ್ ಕ್ರೀಡೆಗಳಲ್ಲಿ ಭಾಗವಹಿಸಿ ಅತ್ಯುತ್ತಮವಾದ ಕ್ರೀಡಾಪಟುಗಳಾಗಿ ಹೊರಹೊಮ್ಮುವ ಮೂಲಕ ಭಾರತ ದೇಶದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಬೆಳಗುವ ದೀಕ್ಷೆ ತೊಡಬೇಕು. ವಿಶಾಕವಾದ ಕ್ರೀಡಾಂಗಣ, ಸುಸಜ್ಜಿತವಾದ ಕಟ್ಟಡ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರುವ ಸ್ಕೂಲ್ ಆಫ್ ಇಂಡಿಯಾ ಶಾಲೆಯ ಕ್ಯಾಂಪಸ್ ಗುಣಮಟ್ಟದ ಶಿಕ್ಷಣ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಜಿಲ್ಲೆಯಲ್ಲಿಯೇ ಹೆಸರು ಗಳಿಸಿರುವುದನ್ನು ತಿಳಿದು ಸಂತೋಷವಾಗಿದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಸಂಯಮ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಭವಿಷ್ಯದ ನಾಗರೀಕರಾಗುವ ಜೊತೆಗೆ ಉತ್ತಮವಾದ ಕ್ರೀಡಾಪಟುಗಳಾಗಿ ಹೊರಹೊಮ್ಮಿ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಂಡು ಸಾಧನೆ ಮಾಡಬೇಕು ಎಂದು ರೀನಾ ಜಾರ್ಜ್ ಕರೆ ನೀಡಿದರು.

ಸಮರ ಚಾರಿಟಬಲ್ ಟ್ರಸ್ಟಿನ ಟ್ರಸ್ಟಿಗಳಾದ ಖಾಲಿದ್ ಹುಸೇನ್ ಖಾನ್ , ಮೈಸೂರಿನ ಡೆಲ್ಲಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಮಂಜುಶರ್ಮಾ ಹಾಗೂ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಡೆಲ್ಲಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಅನುಪಮಾ ರಾಮಚಂದ್ರ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಟ್ರೋಫಿಯನ್ನು ವಿತರಿಸಿದರು. ಸ್ಕೂಲ್ ಆಫ್ ಇಂಡಿಯಾ ಶಾಲೆಯ ಪ್ರಾಂಶುಪಾಲರಾದ ಶೈನಿ ಮೇರಿ ಡಯಾಸ್, ಹಾಗೂ ಶಿಕ್ಷಣ ತಜ್ಞೆ ಶಾಲು ಅಹುಜಾ ಹಾಗೂ ಡಿಪಿಎಸ್ ನಾರ್ಥ್ ಶಾಲೆಯ ಶಿಕ್ಷಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಪ್ರದರ್ಶಿಸಿದ ಗ್ರಾಮೀಣ ಸಾಹಸ ಕ್ರೀಡೆಯಾದ ಮಲ್ಲಕಂಬ ಪ್ರದರ್ಶನ ಹಾಗೂ ಕಬಡ್ಡಿ ಆಟವು ಪೋಷಕರು ಹಾಗೂ ಅತಿಥಿಗಳ ಮೆಚ್ಚುಗೆಗೆ ಪಾತ್ರವಾಯಿತು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!