ಕಾರವಾರ : ಡಿಸೆಂಬರ್ 13, 14, 15ರಂದು ದಾಂಡೇಲಿಯಲ್ಲಿ ನಡೆಯುತ್ತಿರುವ ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, ಅದರ ಭಾಗವಾಗಿ ಈ ಸಮ್ಮೇಳನದಲ್ಲಿ ಹಲವು ಹೊಸತನಗಳನ್ನು ತರಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆ ತಿಳಿಸಿದರು.
ಅವರು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ನಂತರದಲ್ಲಿ ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿಯೇ ಅತಿ ಹೆಚ್ಚು ಸಮ್ಮೇಳನಗಳನ್ನು ಆಯೋಜಿಸಿದ ಹಿರಿಮೆ ಉತ್ತರ ಕನ್ನಡ ಜಿಲ್ಲೆಯದಾಗಿದ್ದು, ಈ 25ನೇ ಸಮ್ಮೇಳನವನ್ನ ನಡೆಸುವ ಅವಕಾಶ ನನಗೆ ದೊರೆತಿದ್ದು ನನ್ನ ಬದುಕಿನ ಭಾಗ್ಯದ ಸಂದರ್ಭವಾಗಿದೆ. 25ನೇ ವರ್ಷದ ನೆನಪಿನಲ್ಲಿ ಸಮ್ಮೇಳನವನ್ನು ಮೂರು ದಿನಗಳ ಕಾಲ ಆಯೋಜನೆ ಮಾಡಲಾಗುತ್ತಿದ್ದು, ಉದ್ಘಾಟನಾ ಸಮಾರಂಭದಲ್ಲಿ ಈ ಹಿಂದೆ ಸಮ್ಮೇಳನ ಅಧ್ಯಕ್ಷರಾಗಿದ್ದ ಎಲ್ಲ ಸಮ್ಮೇಳನಾಧ್ಯಕ್ಷರನ್ನು ಗೌರವಿಸಲಾಗುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ಹಿಂದಿನ ಸಮ್ಮೇಳನಾಧ್ಯಕ್ಷರ ಕಿರು ಹೊತ್ತಿಗೆಯೂ ಸೇರಿದಂತೆ 25 ಪುಸ್ತಕಗಳ ಬಿಡುಗಡೆಯಾಗಲಿದೆ. 2ನೇ ದಿನ 25 ವಿವಿಧ ಕ್ಷೇತ್ರಗಳ ಸಾಧಕರಿಗೆ ಕಸಾಪ ಗೌರವ ಪುರಸ್ಕಾರ ನೀಡುವ ಜೊತೆ ಮೂರನೇ ದಿನವೂ ಕೂಡ ಈ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25 ಸಾಧಕರನ್ನು ಆಯ್ಕೆ ಮಾಡಿ ರಜತ ಗೌರವವನ್ನು ನೀಡಲಾಗುತ್ತಿದೆ. ಜೊತೆಗೆ 25ರ ಸಂಭ್ರಮದ ನೆನಪಿನಲ್ಲಿ ಸಮ್ಮೇಳನದ ಭಾಗವಾಗಿ ವಿವಿಧ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗಿದೆ ಎಂದರು.
ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ರೋಹಿದಾಸ ನಾಯಕ ಗೌರವ ನಿರ್ವಹಿಸಲಿದ್ದಾರೆ. ಡಿಸೆಂಬರ್ 13ರಂದು ಮುಂಜಾನೆ ಎಂಟು ಗಂಟೆಗೆ ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ನಂತರದಲ್ಲಿ ಸಮ್ಮೇಳನವನ್ನ ನಾಡಿನ ಹಿರಿಯ ಸಾಹಿತಿ, ಡಾ. ಬರಗೂರು ರಾಮಚಂದ್ರಪ್ಪನವರು ಉದ್ಘಾಟನೆ ಮಾಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಸಮಾರೋಪ ನುಡಿಗಳನ್ನಾಡಲಿದ್ದಾರೆ ಎಂದರು.
ಹಳಿಯಾಳದ ಶಾಸಕರು, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆದ ಆರ್. ವಿ. ದೇಶಪಾಂಡೆಯವರು ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಸಾರಥ್ಯ ವಹಿಸಿದ್ದು, ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್. ವಿ ದೇಶಪಾಂಡೆ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕಸಾಪ ಆಡಳಿತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ.ಎಮ್. ಗಾಯತ್ರಿ ಸೇರಿದಂತೆ ಇಲ್ಲಿಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ದಾಂಡೇಲಿಯ ಸರ್ವ ಧರ್ಮೀಯರ ಆರಾಧ್ಯ ದೈವವಾಗಿರುವ ಸತ್ಪುರುಷ ದಾಂಡೇಲಪ್ಪ ಆವರಣದಲ್ಲಿ ನಡೆಯುತ್ತಿರುವ ಸಮ್ಮೇಳನದ ವೇದಿಕೆಗೆ ಹಿರಿಯ ಸಾಹಿತಿ ಡಾ. ಎನ್.ಆರ್ ನಾಯಕ ಹೆಸರನ್ನಿಡಲಾಗಿದ್ದು, ಪದ್ಮಶ್ರೀಗಳಾದ ಸುಕ್ರಿ ಗೌಡ , ತುಳಸಿ ಗೌಡ ಹಾಗೂ ಡಾ. ಶಾಂತಿ ನಾಯಕ, ಬಿ.ಎಚ್.ದೇಸಾಯಿಸ್ವಾಮಿ, ಕೆ. ಎನ್ ರಾವ್ ರವರ ದ್ವಾರಗಳನ್ನ ನಿರ್ಮಿಸಲಾಗುತ್ತಿದೆ. ಉದ್ಘಾಟನೆ, ಸಮಾರೋಪದ ನಡುವೆ ಹತ್ತು ವಿಶೇಷ ಗೋಷ್ಠಿಗಳು ನಡೆಯಲಿವೆ. ವಿಶೇಷವಾದ ಆಕರ್ಷಣೆಯ ಪುಸ್ತಕ ಮಳಿಗೆಗಳು, ಆಹಾರ ಮಳಿಗೆಗಳು ಗಮನಸೆಳೆಯಲಿವೆ. ಜೊತೆಗೆ ಸಮ್ಮೇಳನದ ಮೊದಲ ದಿನ ಬಿಗ್ ಬಾಸ್ ಖ್ಯಾತಿಯ ಖ್ಯಾತ ಚಲನಚಿತ್ರ ಗಾಯಕ ರವಿ ಮೂರೂರು ತಂಡದಿAದ ಸಂಗೀತ ಕಾರ್ಯಕ್ರಮ ಹಾಗೂ ಸಂದ್ಯಾ ಶೆಣೈ ಅವರಿಂದ ಹಾಸ್ಯ ಸಂಜೆ, ಎರಡನೆಯ ದಿನ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ವೈಭವ, ಮೂರನೆಯ ದಿನ ಯಕ್ಷಗಾನ ಕಾರ್ಯಕ್ರಮ ಸೇರಿದಂತೆ ಜಾನಪದ ಗೀತ ಗಾಯನ, ಯಕ್ಷಗಾನ ಸ್ವಾಗತ ನೃತ್ಯ ಕೂಡ ನಡೆಯಲಿದೆ. ಬೆಳ್ಳಿ ಹಬ್ಬದ ಸಡಗರದಲ್ಲಿರುವ ಈ ಸಂಭ್ರಮವನ್ನು ಒಂದು ಅರ್ಥಪೂರ್ಣವಾದ ಕಾರ್ಯಕ್ರಮವನ್ನಾಗಿ ರೂಪಿಸುವುದರ ಜೊತೆಗೆ ಜಿಲ್ಲೆಯಲ್ಲಿ ದಾಖಲೆಯ ಹಾಗೂ ಐತಿಹಾಸಿಕ ಕಾರ್ಯಕ್ರಮವಾಗಿ ಕಟ್ಟಿಕೊಡಬೇಕೆಂಬುದೇ ನಮ್ಮ ಆಶಯವಾಗಿದೆ. 25ರ ಸಂಭ್ರಮದಲ್ಲಿರುವ ಈ ಸಮ್ಮೇಳನದಲ್ಲಿ ನಾಡಿನ ಎಲ್ಲಾ ಸಹೃದಯಿಗಳು ಭಾಗವಹಿಸುವಂತಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಜಿಲ್ಲಾ ಗೌರವಕೋಶಾಧ್ಯಕ್ಷ ಮುರ್ತುಜಾ ಹುಸೇನ, ಕಾರವಾರ ತಾಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ, ಕಾರ್ಯದರ್ಶಿ , ಬಾಬು ಶೇಖ್, ದಾಂಡೇಲಿ ಕಸಾಪ ಕೋಶಾಧ್ಯಕ್ಷ ಶ್ರೀಮಂತ ಮದರಿ, ಪ್ರಮುಖರಾದ ಜಿ.ಡಿ. ಮನೋಜೆ, ಎನ್.ಜಿ. ನಾಯ್ಕ, ಎಮ್.ಜಿ ಖತೀಬ, ಖೈರುನ್ನಿಸಾ ಶೇಖ್, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

More Stories
ಕಾರವಾರದಲ್ಲಿ ಜೈಲು ಸಿಬ್ಬಂದಿ ಮೇಲೆ ಕೈದಿಗಳ ಹಲ್ಲೆ | ಮಾದಕ ವಸ್ತುಗಾಗಿ ಬೇಡಿಕೆ.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ
ಉತ್ತರ ಕನ್ನಡ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘಕ್ಕೆ ಎಲ್.ಎಮ್.ಹೆಗಡೆ ಪುನರಾಯ್ಕೆ