December 23, 2025

ಡಿ.9ಕ್ಕೆ ಮುರುಡೇಶ್ವರಕ್ಕೆ ಡಾ.ಡಿ.ವಿರೇಂದ್ರ ಹೆಗ್ಗಡೆ:ಕಾರ್ಯಕ್ರಮ ಕ್ಕೆ 20 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ

ಭಟ್ಕಳ: ತಾಲೂಕಿನ ಬಸ್ತಿಮಕ್ಕಿಯ ಶ್ರೀ ರಾಘವೇಶ್ವರ ಹವ್ಯಕ ಸಭಾ ಭವನದಲ್ಲಿ ನಡೆಯುತ್ತಿರುವ 2016ನೇ ಮದ್ಯವರ್ಜನ ಶಿಬಿರದ ಮುಕ್ತಾಯ ಸಮಾರಂಭ ಹಾಗು ಕುಟುಂಬ ಮಿಲನ ಕಾರ್ಯಕ್ರಮ ಡಿಸೆಂಬರ್ 9ರಂದು ಮಧ್ಯಾಹ್ನ 11 ಗಂಟೆಗೆ ಜರುಗಲಿದೆ. ಈ ಸಂದರ್ಭದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಹೇಶ್ ಎಂ.ಡಿ. ತಿಳಿಸಿದ್ದಾರೆ.

ಯೋಜನಾ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಶ್ರೀ ಕ್ಷೇತ್ರದ ವಿವಿಧ ಯೋಜನೆಗಳ ಅಡಿಯಲ್ಲಿ ಅನುದಾನ ವಿತರಣೆ, ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಹೆಗ್ಗಡೆಯವರ ಭಾಷಣ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಉಪಸ್ಥಿತರಿರಲಿದ್ದಾರೆ. ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷ ಚಂದ್ರಶೇಖರ ಜಿನದತ್ತ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ ಬಾದಾಮಿ, ಪಾದೇಶಿಕ ನಿರ್ದೇಶಕ ವಿವೇಕ ವಿ. ಪಾಯಸ್, ಉಡುಪಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಶಿಬಿರದ ಅಧ್ಯಕ್ಷ ಸತೀಶ ರತ್ನಾಕರ ಶೇಟ್, ಭಟ್ಕಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನವೀನ್ ಕುಮಾರ್, ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಾ ಬೈರಾ ನಾಯ್ಕ, ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಹಾಗೂ ಜನಜಾಗೃತಿ ವೇದಿಕೆಯ ಮಂಕಿಯ ಸದಸ್ಯ ರಾಜು ಎಂ. ನಾಯ್ಕ ಆಗಮಿಸಲಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮದ್ಯವರ್ಜನ ಸಮಿತಿಯ ಗೌರವಾಧ್ಯಕ್ಷ ಚಂದ್ರಶೇಖರ ಗೌಡ ಅವರು, ಈ ಬಾರಿ ಶಿಬಿರಕ್ಕೆ ಭಟ್ಕಳದಲ್ಲಿ ನಡೆಯುತ್ತಿದ್ದ ಹಳೆಯ ಶಿಬಿರಗಳಿಗಿಂತ ಹೆಚ್ಚು ಶಿಬಿರಾರ್ಥಿಗಳು ದಾಖಲಾಗಿದ್ದು ಸಂತಸ ತಂದಿದೆ. 100ಕ್ಕೂ ಹೆಚ್ಚು ಶಿಬಿರಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಶ್ಲಾಘನೀಯ ಎಂದು ಹೇಳಿದರು.

ಸಮಾರಂಭಕ್ಕೆ ಸುಮಾರು 20 ಸಾವಿರ ಜನರ ಆಗಮನ ನಿರೀಕ್ಷಿಸಲಾಗಿದೆ. ಡಾ. ಹೆಗ್ಗಡೆಯವರ ಆಗಮನ ಶಿಬಿರಾರ್ಥಿಗಳಿಗೆ ಹೊಸ ಉತ್ಸಾಹ ನೀಡಿದೆ ಎಂದು ಅವರು ತಿಳಿಸಿದರು. ಈ ಶಿಬಿರ ಆಯೋಜನೆಗೆ ಸಚಿವ ಮಂಕಾಳ ವೈದ್ಯ, ಮುರುಡೇಶ್ವರ ದೇವಾಲಯದ ಧರ್ಮದರ್ಶಿ ಸತೀಶ ಶೆಟ್ಟಿಯವರೂ ಸೇರಿದಂತೆ ಅನೇಕರು ಸಹಕಾರ ನೀಡಿದ್ದಾರೆ. ಪೊಲೀಸ್ ಇಲಾಖೆಯ ಸಹಕಾರವನ್ನು ಅವರು ವಿಶೇಷವಾಗಿ ಮೆಚ್ಚಿದರು.

ಪತ್ರಿಕಾಗೋಷ್ಟಿಯಲ್ಲಿ ಶಿಬಿರದ ಅಧ್ಯಕ್ಷ ಸತೀಶ ಶೇಟ್, ಹಿಂದಿನ ಶಿಬಿರದ ಅಧ್ಯಕ್ಷ ಸಾತಯ್ಯ ನಾಯ್ಕ, ಸಮಿತಿ ಸದಸ್ಯ ಶ್ರೀಧರ ನಾಯ್ಕ ಆಸರಕೇರಿ ಹಾಗೂ ಯೋಜನಾಧಿಕಾರಿ ಲತಾ ಬಂಗೇರ ಹಾಜರಿದ್ದರು.

About The Author

error: Content is protected !!