December 23, 2025

ಪರ್ತಗಾಳಿ ಮಠದಲ್ಲಿ ದಾಖಲೆ ಮಟ್ಟದ ರಕ್ತದಾನ 604 ಯುನಿಟ್ ಸಂಗ್ರಹ

ಗೋವಾ: ಪರ್ತಗಾಳಿ : ಗೋವಾದ ಕಾಣಕೋಣದಲ್ಲಿ ಪರ್ತಗಾಳಿ ಮಠದ ಸಾರ್ಧ ಪಂಚಶತಮಾನೋತ್ಸವದ ಅಂಗವಾಗಿ ಏರ್ಪಡಿಸಿದ ರಕ್ತದಾನ ಶಿಬಿರದಲ್ಲಿ 604 ಯುನಿಟ್ ರಕ್ತ ಶೇಖರಣೆಯಾಗಿದ್ದು, ಈ ಮೂಲಕ ಗೋವಾ ರಾಜ್ಯದಲ್ಲೆ ಅತಿ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಿದ ದಾಖಲೆಗೆ ಶ್ರೀಮಠವೂ ಪಾತ್ರವಾಗಿದೆ.

ಗೋಕರ್ಣ ಪರ್ತಗಾಳಿ ಮಠದ ಶ್ರೀಮದ್ ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಶನಿವಾರ ಸೇವಾಭಾವನೆಗೆ ಒತ್ತು ನೀಡುವ ಉದ್ದೇಶದಿಂದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಮಠದ ಅದ್ಯಕ್ಷ ಶ್ರೀನಿವಾಸ ಡೆಂಪೊ, ಪಲ್ಲವಿ ಡೆಂಪೊ ಸಹಕಾರ ನೀಡಿದರು ಮಠದ ಸೇವಾ ಘಟಕ ಹಾಗೂ ಎಚ್‌ಡಿಎಫ್‌ಸಿ ಪರಿವರ್ತನ, ಮಣಿಪಾಲ ಆಸ್ಪತ್ರೆ, ವಿಕ್ಟರ್ ಆಸ್ಪತ್ರೆ, ಗೋವಾ ಮೆಡಿಕಲ್ ಕಾಲೇಜ್, ಹಾಸ್ಪಿಸಿಯೋ ಸೌತ್ ಗೋವಾ ಡಿಸ್ಟಿçಕ್ಟ್ ಹಾಸ್ಪಿಟಲ್, ಧಾರವಾಡ ಬ್ಲಡ್ ಬ್ಯಾಂಕ್, ಉತ್ತರಕನ್ನಡ ಬ್ಲಡ್ ಸೆಂಟರ್‌ಗಳ ವೈದ್ಯಕೀಯ ತಂಡದ ಸಂಯುಕ್ತ ಪ್ರಯತ್ನದಿಂದ ನಡೆದ ಈ ಶಿಬಿರಕ್ಕೆ ಭಕ್ತರು ಮತ್ತು ಯುವಕರು ಉತ್ಸಾಹಭರಿತವಾಗಿ ಭಾಗವಹಿಸಿದರು.

ಕುಮಟಾದ ಡಾ.ಮಹಾಬಲ ಮುಡ್ಲಗಿರಿ ಇವರು ಮಾತನಾಡಿ, ರಕ್ತದಾನವು ಅನೇಕ ಜೀವಗಳನ್ನು ಉಳಿಸಲು ಸಹಾಯಕ. ಅಪಘಾತ ಪೀಡಿತರು, ಶಸ್ತ್ರಚಿಕಿತ್ಸೆಗೆ ಒಳಗಾಗುವವರು, ಗಂಭೀರ ಅನಾರೋಗ್ಯದಿಂದ ಬಳಲುವವರು, ಬಾಣಂತಿಯರು ಸೇರಿದಂತೆ ಅವಶ್ಯಕತೆ ಇರುವವರಿಗೆ ತುರ್ತು ಸಂದರ್ಭಗಳಲ್ಲಿ ರಕ್ತ ಅತ್ಯವಶ್ಯಕ. ಒಂದು ವ್ಯಕ್ತಿಯ ರಕ್ತದಾನ ಮೂರು ಜೀವಗಳನ್ನು ಉಳಿಸಬಹುದು ಎಂದು ಅವರು ಹೇಳಿದರು. 

ಶಿಬಿರದಲ್ಲಿ ಸಂಚಾಲಕ ಪ್ರದೀಪ ಜಿ ಪೈ ಮಾತನಾಡಿ ರಕ್ತಕ್ಕೆ ರಕ್ತವೆ ಪರ್ಯಾಯ. ರಕ್ತದಾನ ಮಾಡುವುದು ಸಮಾಜದ ಕಡೆ ನಮ್ಮ ಜವಾಬ್ದಾರಿ ಹಾಗೂ ಮಾನವೀಯ ಸೇವೆಯ ಅತ್ಯುತ್ತಮ ರೂಪ ಎಂದು ಅಭಿಪ್ರಾಯಪಟ್ಟರು. ಪ್ರಮುಖರಾದ ರಾಜೇಶ ನಾಯಕ, ನೀತಿನ ಕಾಸರಕೋಡ, ಮನೋಜ ಪೈ ಸೇರಿದಂತೆ ನೂರಾರು ಸಂಖ್ಯೆಯ ರಾಮಸೇವಕರು ಸಹಕರಿಸಿದರು.

 ಶಿಬಿರದಲ್ಲಿ ಗೋವಾದ ರಾಜ್ಯದ ಇತಿಹಾಸದಲ್ಲೆ ಪ್ರಥಮ ಎನ್ನುವಷ್ಟು ಯುನಿಟ್ ರಕ್ತ ಸಂಗ್ರಹವಾಗಿದ್ದು, ಇದು ಅಗತ್ಯವಿರುವ ರೋಗಿಗಳ ಚಿಕಿತ್ಸೆಗೆ ಬಳಸಲಾಗುವುದು ಎಂದು ಆಯೋಜಕ ಸಮಿತಿ ತಿಳಿಸಿದೆ.

About The Author

error: Content is protected !!