ಕೆ.ಆರ್,ಪೇಟೆ :ಬಾಲ್ಯ ವಿವಾಹ ಪದ್ಧತಿಯು ಸಾಮಾಜಿಕ ಅನಿಷ್ಠವಾಗಿದ್ದು, ನಾಗರೀಕ ಸಮಾಜಕ್ಕೆ ಅಂಟಿರುವ ಶಾಪವಾಗಿದೆ ಎಂದು ಕೆ.ಆರ್.ಪೇಟೆ ಪಟ್ಟಣದ ಜೆಎಂಎಫ್‌ಸಿ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಸುಧೀರ್ ಹೇಳಿದರು. ಅವರು ಇಂದು ಕೃಷ್ಣರಾಜಪೇಟೆ ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಮದ್ದೂರಿನ ಧ್ವನಿ ಲಯನ್ ಸಂಸ್ಥೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಬಾಲ್ಯ ವಿವಾಹ ನಿಷೇಧ ಹಾಗೂ ಆಹಾರ ಸಂರಕ್ಷಣೆ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹೆಣ್ಣು ಮಕ್ಕಳು ಸಮಾಜದ ಶಕ್ತಿಯಾಗಿದ್ದು ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಹೆಣ್ಣು ಮಕ್ಕಳ ಪಾತ್ರವು ನಿರ್ಣಾಯಕವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಹೆಣ್ಣು ಗಂಡು ಎಂದು ಭೇದ ಭಾವ ಮಾಡದೆ ಗಂಡು ಮಕ್ಕಳಿಗೆ ನೀಡುವಂತಹ ಶಿಕ್ಷಣ ಮತ್ತಿತರೆ ಸೌಲಭ್ಯಗಳನ್ನು ಹೆಣ್ಣು ಮಕ್ಕಳಿಗೂ ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಿಸಿ ಸಾಧನೆ ಮಾಡಲು ಬೆನ್ನು ತಟ್ಟಿ ಪ್ರೋತ್ಸಾಹಿಸಿ ಅವಕಾಶ ಮಾಡಿಕೊಡಬೇಕು. ಹೆಣ್ಣು ಮಕ್ಕಳಿಗೆ 18 ವರ್ಷ ಹಾಗೂ ಗಂಡು ಮಕ್ಕಳಿಗೆ 21 ವರ್ಷ ತುಂಬುವ ಮುನ್ನವೇ ವಿವಾಹ ಮಾಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಹೆಣ್ಣು ಮಕ್ಕಳನ್ನು 18 ವರ್ಷ ತುಂಬುವ ಮುನ್ನವೇ ಮದುವೆ ಮಾಡುವುದರಿಂದ ಹೆಣ್ಣು ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆಯಲ್ಲದೆ ದೈಹಿಕ ಸಾಮರ್ಥ್ಯದಲ್ಲಿ ವ್ಯತ್ಯಯವಾಗಿ ಸಮಸ್ಯೆಗಳ ಸುಳಿಗೆ ಸಿಲುಕಿ ನರಳ ಬೇಕಾಗುತ್ತದೆ. ಆದ್ದರಿಂದ ಹೆಣ್ಣು ಮಕ್ಕಳು 18 ವರ್ಷ ತುಂಬುವ ಮುನ್ನ ವಿವಾಹ ಬಂಧನಕ್ಕೆ ಸಿಲುಕಿ ನರಳದೆ ಶಿಕ್ಷಣದ ಶಕ್ತಿಯನ್ನು ಪಡೆಯಲು ಮುಂದಾಗಿ ಸಾಧನೆ ಮಾಡಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಪರ ಸಿವಿಲ್ ನ್ಯಾಯಾಧೀಶರಾದ ದೇವರಾಜು ಮಾತನಾಡಿ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣ್ಣುಡಿಗೆ ವಿರುದ್ಧವಾಗಿ ಪೋಷಕರು ಹೆಣ್ಣು ಮಕ್ಕಳನ್ನು ವಿವಾಹ ಬಂಧನಲ್ಲಿ ಸಿಲುಕಿಸಿ ಸಮಸ್ಯೆಗಳ ಕೂಪದೊಳಗೆ ತಳ್ಳಬಾರದು. ಹಾಗೆಯೇ ಬೆವರು ಹರಿಸಿ ಕಷ್ಟಪಟ್ಟು ತನ್ನ ಶ್ರಮದ ದುಡಿಮೆಯ ಮೂಲಕ ರೈತನು ಉತ್ಪಾದಿಸುವ ಆಹಾರ ಪದಾರ್ಥಗಳನ್ನು ವ್ಯರ್ಥವಾಗಿ ಪೋಲು ಮಾಡದೆ ನಿಯಮಿತವಾಗಿ ಬಳಸಬೇಕು ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸವಾದದರಿಂದ ಮದುವೆ ಸೇರಿದಂತೆ ಯಾವುದೇ ಸಭೆ ಸಮಾರಂಭಗಳಲ್ಲಿ ಅನ್ನವು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ದೇವರಾಜು ಕಿವಿಮಾತು ಹೇಳಿದರು. ಧ್ವನಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಡಾ.ಲೋಹಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಾಲ್ಯ ವಿವಾಹದ ವಿರುದ್ಧ ಜಾಗೃತರಾಗಿ ಧನಿ ಎತ್ತುವುದಾಗಿ ಹಾಗೂ ಅನ್ನವನ್ನು ವ್ಯರ್ಥ ಮಾಡದೇ ನಿಯಮಿತವಾಗಿ ಬಳಸುವoತೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬಂದರೆ ವಿದ್ಯಾರ್ಥಿಗಳು ಹಾಗೂ ಯುವಜನರು ಮಕ್ಕಳ ಹಕ್ಕುಗಳ ಸಂರಕ್ಷಣಾ ಘಟಕ ಅಥವಾ ಸಮೀಪದ ಪೊಲೀಸ್ ಠಾಣೆ ಇಲ್ಲವೇ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವ ಮೂಲಕ ಬಾಲ್ಯ ವಿವಾಹವನ್ನು ಕಡ್ಡಾಯವಾಗಿ ತಡೆಯಲು ಸಂಕಲ್ಪ ಮಾಡಬೇಕು ಎಂದು ಡಾ.ಲೋಹಿತ್ ಮನವಿ ಮಾಡಿದರು. ಧ್ವನಿ ಲಯನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ರಜನಿ ರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ, ಆರಕ್ಷಕ ನಿರೀಕ್ಷಕರಾದ ಆನಂದೇಗೌಡ, ಬಿ.ಸುಮಾರಾಣಿ, ಲಯನ್ ಪ್ರತಿಮಾ, ಲಯನ್ ದಿನೇಶ್ ಕುಮಾರ್, ಜಿಲ್ಲಾ ಗವರ್ನರ್ ಲಯನ್ ಸಿದ್ದರಾಜು, ಕೆಪಿಎಸ್ ಶಾಲೆಯ ಪ್ರಾಂಶುಪಾಲ ಡಿ.ಟಿ. ಪುಲಿ ಗೆರೆಯ್ಯ, ಉಪ ಪ್ರಾಂಶುಪಾಲ ರಾಘವೇಂದ್ರ, ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಕೆ.ಎಸ್.ಬಸವೇಗೌಡ ಕಾರ್ಯಕ್ರಮದಲ್ಲಿ ಮಾತನಾಡಿದರು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ವಿದ್ಯಾರ್ಥಿಗಳ ಸಮಗ್ರವಾದ ವ್ಯಕ್ತಿತ್ವದ ವಿಕಸನಕ್ಕೆ ಗಣಿತ ಹಾಗೂ ವಿಜ್ಞಾನ ಶಿಕ್ಷಣವು ದಾರಿ ದೀಪವಾಗಿದೆ. ಮುಖ್ಯ ಶಿಕ್ಷಕಿ ನಾಗರತ್ನ.
ಸದೃಢ, ಸಶಕ್ತ ರಾಷ್ಟ್ರದ ನಿರ್ಮಾಣಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ. ಮಲ್ಲಿಕಾರ್ಜುನ
ಬಾಲಯೇಸು ದೇವಾಲಯದ ಜೀರ್ಣೋದ್ಧಾರಕ್ಕೆ ಧನ ಸಹಾಯ ಮಾಡಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್