December 22, 2025

ಶಿರಾಲಿಯಲ್ಲಿ ಶಿಕ್ಷಕರ ಸಬಲೀಕರಣ ಉಪನ್ಯಾಸ

ಭವಿಷ್ಯದ ಸಮಾಜ ರೂಪಿಸುವ ಶಿಲ್ಪಿಗಳು ಶಿಕ್ಷಕರು: ಎಂ.ವಿ. ರಾಮಕೃಷ್ಣ ಪ್ರಸಾದ್

ಭಟ್ಕಳ: ತಾಲ್ಲೂಕಿನ ಶಿರಾಲಿಯ ಶ್ರೀವಲಿ ಟ್ರಸ್ಟ್‌ನ ಚಿತ್ರಾಪುರ ಘಟಕದ ಶ್ರೀವಲಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶೇಷ ಶಿಕ್ಷಕರ ಸಬಲೀಕರಣ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಡಿಐಜಿಪಿ ಹಾಗೂ ಪ್ರಸ್ತುತ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಎಂ.ವಿ. ರಾಮಕೃಷ್ಣ ಪ್ರಸಾದ್ ಉಪನ್ಯಾಸ ನೀಡಿದರು.


ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಮೌಲ್ಯಾಧಾರಿತ ಶಿಕ್ಷಣದಿಂದ ಶಿಸ್ತುಬದ್ಧ ಹಾಗೂ ಜವಾಬ್ದಾರಿಯುತ ನಾಗರಿಕರನ್ನು ರೂಪಿಸಬಹುದು ಎಂದು ಅವರು ಹೇಳಿದರು. ಶಿಕ್ಷಕರು ಭವಿಷ್ಯದ ಸಮಾಜವನ್ನು ರೂಪಿಸುವ ಶಿಲ್ಪಿಗಳೆಂದೂ ಅವರು ಅಭಿಪ್ರಾಯಪಟ್ಟರು.


ಶ್ರೀವಲಿ ಟ್ರಸ್ಟ್‌ನ ಉಪಾಧ್ಯಕ್ಷ ಸತೀಶ್ ತೋನ್ಸೆ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು. ಶೈಕ್ಷಣಿಕ ಸಲಹೆಗಾರ ಡಾ. ರವೀಂದ್ರ ಆರ್. ಕಾಯ್ಕಿಣಿ, ದೈಹಿಕ ಶಿಕ್ಷಕ ವಾಸುದೇವ ಪೂಜಾರಿ, ರಜತ್ ಶುಕ್ಲಾ, ವಿಜಯಾ ಸುರಭಿ ಹಾಗೂ ಬೆಂಗಳೂರು ಮೂಲದ ಎಡ್ಯೂಮರ್ಜ್ ಸಂಸ್ಥೆಯ ಸ್ಥಾಪಕರು ಮತ್ತು ಸಹ–ಸ್ಥಾಪಕರು ಉಪಸ್ಥಿತರಿದ್ದರು.


ಶ್ರೀವಲಿ ಪಿಯು ಕಾಲೇಜು ಹಾಗೂ ಶ್ರೀವಲಿ ಪ್ರೌಢಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉಪನ್ಯಾಸ ಹಾಗೂ ಸಂವಾದ ಶಿಕ್ಷಕರಲ್ಲಿ ಹೊಸ ಚಿಂತನೆಗೆ ಪ್ರೇರಣೆಯಾದುದರೊಂದಿಗೆ ಆತ್ಮಾವಲೋಕನಕ್ಕೂ ಅವಕಾಶ ನೀಡಿತು.


ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕಿ ರಮ್ಯ ನಾಯ್ಕ ವಹಿಸಿದ್ದರು. ಸಹ ಶಿಕ್ಷಕಿ ಧನ್ಯವತಿ ಕಡ್ಲೆ ಪ್ರಾರ್ಥನೆ ಸಲ್ಲಿಸಿದರು. ಪಿಯು ಉಪನ್ಯಾಸಕಿ ನಯನ ಖಾರ್ವಿ ಧನ್ಯವಾದಗಳನ್ನು ಅರ್ಪಿಸಿದರು.

About The Author

error: Content is protected !!