ಭಟ್ಕಳ:ಕನಸುಗಳನ್ನೆತ್ತಿಕೊಂಡು ಹೊಸ ಬದುಕಿನತ್ತ ಹೆಜ್ಜೆ ಹಾಕಿದ್ದ ಯುವತಿಯ ಕನಸುಗಳು ರಸ್ತೆಯಲ್ಲೇ ಸುಟ್ಟು ಕರಕಲಾದವು. ಭಟ್ಕಳ ಮೂಲದ ರಶ್ಮಿ ಮಹಾಲೆ (23) ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ಜವನಗೊಂಡನಹಳ್ಳಿ–ಗೊರ್ಲತ್ತು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಗೆಳತಿಯರಾದ ಗಗನಾ ಹಾಗೂ ರಕ್ಷಿತಾ ಜೊತೆ ಗೋಕರ್ಣಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ರಶ್ಮಿಯ ದೇಹ ಗುರುತೇ ಸಿಗದಷ್ಟು ಸುಟ್ಟು ಕರಕಲಾಗಿದೆ.
ಭಟ್ಕಳದಲ್ಲಿಯೇ ಬೆಳೆದು, ಇಲ್ಲಿಯೇ ಶಿಕ್ಷಣ ಪಡೆದಿದ್ದ ರಶ್ಮಿ, 10ನೇ ತರಗತಿವರೆಗೆ ಆನಂದ ಆಶ್ರಮ ಕಾನ್ವೆಂಟ್ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಪಿಯುಸಿ ಶಿಕ್ಷಣವನ್ನು ಸಿದ್ಧಾರ್ಥ ಪ್ರೀ ಯುನಿವರ್ಸಿಟಿ ಕಾಲೇಜಿನಲ್ಲಿ ಪೂರ್ಣಗೊಳಿಸಿ, ನಂತರ ಶ್ರೀ ಗುರು ಸುಧೀಂಧ್ರ ಡಿಗ್ರಿ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದರು. ಪದವಿ ಓದುತ್ತಿದ್ದಾಗಲೇ Tata Consultancy Servicesನಲ್ಲಿ ಉದ್ಯೋಗ ಪಡೆದು, ಒಂದು ವರ್ಷ ಎಂಟು ತಿಂಗಳು ಬಿಸಿನೆಸ್ ಪ್ರೊಸೆಸ್ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದರು. ಬಳಿಕ ಏಳು ತಿಂಗಳ ಹಿಂದಷ್ಟೇ Deloitteನಲ್ಲಿ ಎಎಂಎಲ್ ಅನಾಲಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದರು. ಹೈಬ್ರಿಡ್ ಮಾದರಿಯಲ್ಲಿ ಅವರ ಕೆಲಸ ಸಾಗುತ್ತಿತ್ತು.
ಪ್ರತಿಷ್ಠಿತ ಕಂಪನಿಯ ಉದ್ಯೋಗ, ನೆಮ್ಮದಿಯ ಬದುಕಿನ ಕನಸು, ಹೊಸ ವರ್ಷದ ಸಂಭ್ರಮ—ಎಲ್ಲವನ್ನೂ ಒಂದೇ ಕ್ಷಣದಲ್ಲಿ ಕಸಿದುಕೊಂಡ ಅಪಘಾತ, ಕುಟುಂಬವನ್ನು ತೀವ್ರ ದುಃಖದಲ್ಲಿ ಮುಳುಗಿಸಿದೆ. ಮಗಳ ಸುರಕ್ಷಿತ ಮರಳುವ ನಿರೀಕ್ಷೆಯಲ್ಲಿದ್ದ ಪಾಲಕರ ಪ್ರಾರ್ಥನೆ ಫಲಿಸದೆ, ಭಟ್ಕಳದ ಮನೆಮನೆಗೆ ಶೋಕದ ಛಾಯೆ ಆವರಿಸಿದೆ.
ಟಿಸಿಎಸ್ಗೆ ಆಯ್ಕೆಯಾದ ಬಳಿಕ ಕಾಲೇಜಿನ ಯೂಟ್ಯೂಬ್ ಚಾನೆಲ್ಗೆ ಮಾತನಾಡಿದ್ದ ರಶ್ಮಿ, “ಆನ್ಲೈನ್ ಪರೀಕ್ಷೆಗೆ ಹಳೆಯ ವಿಡಿಯೋಗಳನ್ನು ನೋಡಿ ಸಿದ್ಧತೆ ಮಾಡಿಕೊಂಡೆ. ಲಾಜಿಕಲ್ ರೀಸನಿಂಗ್, ಮ್ಯಾಥಮ್ಯಾಟಿಕ್ಸ್ ಸೇರಿ ಮೂರು ವಿಭಾಗಗಳ ಪರೀಕ್ಷೆ ಇತ್ತು” ಎಂದು ತನ್ನ ಶ್ರಮದ ಪಯಣವನ್ನು ಹಂಚಿಕೊಂಡಿದ್ದರು.
ಹೊಸ ಬದುಕಿನ ಕನಸು ಕಟ್ಟಿಕೊಂಡು ಸ್ನೇಹಿತರೊಂದಿಗೆ ಸಂಭ್ರಮಿಸಲು ಹೊರಟಿದ್ದ ರಶ್ಮಿ ಮಹಾಲೆ ಅವರ ಜೀವನ, ಚಿತ್ರದುರ್ಗದ ಬಸ್ ದುರಂತದಲ್ಲಿ ಅಕಾಲಿಕ ಅಂತ್ಯ ಕಂಡಿದೆ. ಮಗಳೆಂಬ ಮಮತೆಯ ಒಡಲನ್ನೇ ಸುಟ್ಟು ಕರಕಲ ಆದ ಈ ದುರ್ಘಟನೆ ಭಟ್ಕಳದ ಜನಮನಕ್ಕೆ ಆಳವಾದ ಗಾಯವನ್ನೇ ಬಿಟ್ಟಿದೆ.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ