March 2, 2026

ಭಟ್ಕಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ – ನಾಲ್ಕು ವಾಹನಗಳಿಗೆ ಹಾನಿ, ಒಬ್ಬರಿಗೆ ಗಾಯ

ಭಟ್ಕಳ: ಕುಂದಾಪುರ–ಭಟ್ಕಳ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತೀವೇಗ ಹಾಗೂ ನಿರ್ಲಕ್ಷ್ಯಪೂರ್ಣ ಚಾಲನೆ, ಜೊತೆಗೆ ಏಕಾಏಕಿ ಹಸು ರಸ್ತೆ ದಾಟಿದ ಪರಿಣಾಮ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಗೂಡ್ಸ್ ಆಟೊ ಚಾಲಕ ಚಂದ್ರಕಾಂತ ನಾಯ್ಕ ಅವರಿಗೆ ಗಾಯಗಳಾಗಿದ್ದು, ಕಾರು, ಗೂಡ್ಸ್ ಆಟೊ, ಬೊಲೆರೋ ಮತ್ತು ಪಿಕ್‌ಅಪ್ ವ್ಯಾನ್ ಸೇರಿ ನಾಲ್ಕು ವಾಹನಗಳಿಗೆ ಭಾರಿ ಹಾನಿಯಾಗಿದೆ.


ಫಿರ್ಯಾದಿಯ ಪ್ರಕಾರ, ಮಣ್ಕೂಳಿ ಶೆಟ್ಟಿ ಗ್ಯಾರೇಜ್ ಸಮೀಪ ನಿಲ್ಲಿಸಿದ್ದ ಗೂಡ್ಸ್ ಆಟೊಗೆ ಕುಂದಾಪುರದಿಂದ ಭಟ್ಕಳದತ್ತ ಅತೀವೇಗದಲ್ಲಿ ಬಂದ ಕೇರಳ ಮೂಲದ ಕಾರು ಮೊದಲು ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಗೂಡ್ಸ್ ಆಟೊ ಮುಂಭಾಗದಲ್ಲಿ ನಿಲ್ಲಿಸಿದ್ದ ಬೊಲೆರೋ ವಾಹನಕ್ಕೂ ಕಾರು ತಾಕಿದೆ. ಬಳಿಕ ಕಾರು ಮತ್ತೊಂದು ಗೂಡ್ಸ್ ಆಟೊ ಹಾಗೂ ಪಿಕ್‌ಅಪ್ ವ್ಯಾನ್‌ಗೆ ಡಿಕ್ಕಿ ಹೊಡೆದು, ಸೈನ್‌ಬೋರ್ಡ್ ಕಂಬಕ್ಕೂ ತಾಕಿ ಎಲ್ಲಾ ವಾಹನಗಳು ರಸ್ತೆ ಬದಿಯ ಇಳಿಜಾರಿನೊಳಗೆ ಜಾರಿಬಿದ್ದಿವೆ.


ಅಪಘಾತದಲ್ಲಿ ಗೂಡ್ಸ್ ಆಟೊ ಚಾಲಕ ಚಂದ್ರಕಾಂತ ನಾಯ್ಕ ಅವರ ಬಲಗಾಲಿನ ಮಂಡಿ ಭಾಗಕ್ಕೆ ಗಾಯಗಳಾಗಿದ್ದು, ಕೇರಳದಿಂದ ಮಹಾರಾಷ್ಟ್ರದತ್ತ ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದ ದಂಪತಿ ಮತ್ತು ಅವರ ಮೂವರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಘಟನೆಯ ನಂತರ ಕ್ರೇನ್ ಮೂಲಕ ವಾಹನಗಳನ್ನು ಎತ್ತಲಾಗಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ತನಿಖೆ ಕೈಗೊಂಡಿದ್ದಾರೆ.

About The Author

error: Content is protected !!