ಕೆಆರ್ ಪೇಟೆ :ಸಾಮಾಜಿಕ ಕಟ್ಟು ಪಾಡುಗಳು ಹಾಗೂ ಮೌಡ್ಯದ ವಿರುದ್ಧ ತಮ್ಮ ಬರವಣಿಗೆಯ ಮೂಲಕ ಸಾಮಾಜಿಕ ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪು ಅವರು ಪೌರೋಹಿತಶಾಹಿ ವ್ಯವಸ್ಥೆ ವಿರುದ್ಧ ಸಂಘರ್ಷ ನಡೆಸಿದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ ಹೇಳಿದರು.
ಅವರು ಕೃಷ್ಣರಾಜಪೇಟೆ ತಾಲೂಕಿನ ಮರಡಿಲಿಂಗೇಶ್ವರ ಸುಕ್ಷೇತ್ರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವಿಶ್ವಮಾನವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವರು ಗಣ್ಯರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ಸಾಮಾಜಿಕ ಕಂದಾಚಾರಗಳು, ಮೌಡ್ಯಗಳು, ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆಗಳು ಹಾಗೂ ಶ್ರೇಣಿಕೃತ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ ವೈಚಾರಿಕ ಕ್ರಾಂತಿಯ ಮೂಲಕ ಜಾತಿ ಮತಗಳಿಂದ ಮುಕ್ತವಾದ ಸಮ ಸಮಾಜದ ನಿರ್ಮಾಣಕ್ಕೆ ತಮ್ಮ ಬರವಣಿಗೆಯ ಮೂಲಕ ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪು ಅವರು ನುಡಿದಂತೆ ನಡೆದುದ್ದಲ್ಲದೆ ತಾವು ಪ್ರತಿಪಾದಿಸಿದ ವೈಚಾರಿಕ ಕ್ರಾಂತಿಯನ್ನೇ ತಮ್ಮ ಜೀವನದ ಉಸಿರನ್ನಾಗಿಸಿಕೊಂಡು ಸರಳವಾಗಿ ಜೀವನ ನಡೆಸಿದರು. ನಾಗರೀಕ ಸಮಾಜದಲ್ಲಿ ವಾಸಿಸುವ ಎಲ್ಲಾ ಜಾತಿ ವರ್ಗಗಳ ಜನರು ಅಣ್ಣತಮ್ಮಂದಿರು ಇವರಲ್ಲಿ ಯಾವುದೇ ಭೇದ ಭಾವ ಹಾಗೂ ಭಿನ್ನಮತ ವಿಲ್ಲ ನಾವೆಲ್ಲರೂ ಒಂದು ನಾವು ಭಾರತಾಂಬೆಯ ಪುತ್ರರು ಜಾತಿ ಮತ ಪಂಥಗಳಿಂದ ಮುಕ್ತವಾದ ಸಮ ಸಮಾಜವನ್ನು ನಿರ್ಮಾಣ ಮಾಡಲು ನಾವೆಲ್ಲರೂ ಒಂದಾಗಿ ಪರಸ್ಪರ ಪ್ರೀತಿ-ವಿಶ್ವಾಸಗಳಿಂದ ಜೀವನ ನಡೆಸಿ ಮನುಜ ಮತವೇ ವಿಶ್ವ ಪಥ ಎಂದು ಸಾರಿ ಪಂಚಮಂತ್ರಗಳು ಹಾಗೂ ಸಪ್ತ ಸೂತ್ರಗಳನ್ನು ನಮಗೆ ಕೊಡುಗೆಯಾಗಿ ನೀಡಿರುವ ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ಮೊದಲ ಬಾರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಮಹನೀಯರಾಗಿದ್ದಾರೆ ಎಂದು ತಿಮ್ಮೇಗೌಡ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಪ್ರಾಸ್ತಾವಿಕ ಮಾತನಾಡಿ ಯುಗದ ಕವಿ ಜಗದ ಕವಿ ಎಂದೇ ಪ್ರಸಿದ್ಧರಾಗಿರುವ ರಾಷ್ಟ್ರಕವಿ ಕುವೆಂಪು ಅವರು ಆಡಂಬರದ ವಿವಾಹಗಳಿಗೆ ಪಿಲಾಂಜಲಿ ನೀಡಿ ಮಂತ್ರ ಮಾಂಗಲ್ಯ ಹಾಗೂ ಸರಳ ಮದುವೆಗಳ ಪ್ರಯೋಜನವನ್ನು ಶ್ರೀಸಾಮಾನ್ಯರಿಗೆ ಮನವರಿಕೆ ಮಾಡಿಕೊಟ್ಟು ಅನ್ನದಾತ ರೈತನನ್ನು ಉಳುವ ಯೋಗಿ ಎಂದು ಗುಣಗಾನ ಮಾಡಿದ್ದಾರೆ. ಕನ್ನಡಾಂಬೆಯ ಹೆಮ್ಮೆಯ ಪುತ್ರರಾದ ನಾವು ನಮ್ಮಲಿನ ಭಿನ್ನಮತವನ್ನು ಮರೆತು ಪರಸ್ಪರ ಒಂದಾಗಿ ಪ್ರೀತಿ ವಿಶ್ವಾಸ ಗಳಿಂದ ಜೀವನ ನಡೆಸಬೇಕು ಎಂಬ ಶಾಂತಿ ಮಂತ್ರದ ಸಂದೇಶ ನೀಡಿದ್ದಾರೆ ಹಿಂದಿನ ದಿನಮಾನದಲ್ಲಿ ರಾಷ್ಟ್ರಕವಿ ಕುವೆಂಪು ಅವರು ನೀಡಿರುವ ಸಾಮಾಜಿಕ ಸಂದೇಶಗಳು ನೆಮ್ಮದಿಯ ಜೀವನಕ್ಕೆ ಹಾಗೂ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕ ಡಾ.ಗಂಗಾಧರಶೆಟ್ಟಿ ಅವರು ಕುವೆಂಪು ಅವರ ಜೀವನ ಸಂದೇಶಗಳು ಹಾಗೂ ಸಾಮಾಜಿಕ ಮೌಲ್ಯಗಳನ್ನು ಕುರಿತು ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ನಿಂಗೇಗೌಡ ರಂಗಭೂಮಿ ಕಲಾವಿದ ಮಹದೇವೇಗೌಡ ಹಾಗೂ ಸಾಮಾಜಿಕ ಹೋರಾಟಗಾರ ಕಡಹೇಮ್ಮಿಗೆಯ ಕೆ. ಆರ್.ವೆಂಕಟೇಶ್ ಅವರಿಗೆ ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಎಲ್. ಮಲ್ಲಿಕಾರ್ಜುನ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕುವೆಂಪು ಅವರ ಶ್ರೇಷ್ಠ ಕಾದಂಬರಿಗಳಾದ ಕಾನೂರು ಹೆಗ್ಗಡತಿ, ಸುಬ್ಬಮ್ಮ ಹಾಗೂ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ವಿದ್ಯಾರ್ಥಿಗಳು ಓದುವ ಜೊತೆಗೆ ಕುವೆಂಪು ಅವರ ಸಾಹಿತ್ಯದ ಬಗ್ಗೆ ತಿಳಿದುಕೊಂಡು, ಸರಳವಾಗಿ ಜೀವನ ನಡೆಸಿ, ನಾಗರೀಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದು ಮನವಿ ಮಾಡಿದರು.
ಕೃಷ್ಣರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಕೆ. ಎಸ್.ಸೋಮ ಶೇಖರ್, ಕೆ.ಆರ್. ನೀಲಕಂಠ, ಬಳ್ಳೇಕೆರೆ ಮಂಜುನಾಥ್, ತಾಲೂಕು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಲ್.ಎಸ್.ಧರ್ಮಪ್ಪ, ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸಿಂದಘಟ್ಟ ನಾಗೇಶ್, ಜನಪದ ಗಾಯಕ ರವಿಶಿವಕುಮಾರ್, ಪತ್ರಕರ್ತ ಕಾಡುಮೆಣಸ ಚಂದ್ರು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಸಿ.ಟಿ.ಚನ್ನೇಗೌಡ, ಕಟ್ಟೆಮಹೇಶ್, ಶಾಲೆಯ ಉಪ ಪ್ರಾಂಶುಪಾಲ ಧನಂಜಯ್ ಕುಮಾರ್ ಹಾಗೂ ಬೋಧಕ, ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಕ್ಷಕರಾದ ಟಿ.ವೈ. ಅನಂತನರಸಿಂಹನ್, ಎಂ.ಎಸ್. ಸುನಿಲ್ ಕುಮಾರ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ. ಮಂಡ್ಯ.

More Stories
ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಗತಿ ಉತ್ಸವ-2026
ಉಕ್ಕಡಗಾತ್ರಿಯ ಕರಿಬಸವ ಅಜ್ಜಯ್ಯನ ನೂತನ ದೇವಸ್ಥಾನ ಲೋಕಾರ್ಪಣೆ
ಶ್ರೀ ಪಂಚಭೂತೇಶ್ವರ ಸುಕ್ಷೇತ್ರದಲ್ಲಿ ನಡೆದ ಮಹಾಶಿವರಾತ್ರಿಯ ಅಮಾವಾಸ್ಯೆ ಜಾಗರಣೆ ಕಾರ್ಯಕ್ರಮ