

ಹರ, ಗುರು, ಚರ ಮೂರ್ತಿಗಳ ಸಮಕ್ಷಮದಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮ, ಹರಿದು ಬಂದ ಭಕ್ತ ಸಾಗರ.
ಕೃಷ್ಣರಾಜಪೇಟೆ ; ಇಂದಿನ ಒತ್ತಡದ ಜೀವನದಲ್ಲಿ ದೇವರು ಹಾಗೂ ಧರ್ಮದ ಮಾರ್ಗದಿಂದ ಮಾತ್ರ ನಾವು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ಪಡೆಯಲು ಸಾಧ್ಯವಿದೆ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಅವರು ಕೃಷ್ಣರಾಜಪೇಟೆ ತಾಲೂಕಿನ ಗಡಿ ಗ್ರಾಮವಾದ ಅಲ್ಪಹಳ್ಳಿಯಲ್ಲಿ ಶ್ರೀ ವರಸಿದ್ಧಿ ಕಾಲಭೈರವೇಶ್ವರ ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಕಾಲಭೈರವೇಶ್ವರ ದೇವಸ್ಥಾನದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಭೂಮಿ ಪೂಜೆ ಮಾಡಿ ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದರು.

ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ಸಮಾಜಮುಖಿ ಯಾಗಿ ಕೆಲಸ ಮಾಡುವ ಹೃದಯವಂತ ಜನರು ಹಿಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದ್ದಾರೆ ಪ್ರಗತಿಪರ ರೈತರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರಾದ ವೆಂಕಟೇಶಣ್ಣ ಅವರು ಅಲ್ಪಹಳ್ಳಿ ಗ್ರಾಮದಲ್ಲಿ ಶ್ರೀಮಠ ಹಾಗೂ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ನಿರ್ಮಾಣಕ್ಕಾಗಿ ಬೆಲೆಬಾಳುವ ಭೂಮಿಯನ್ನು ದಾನ ಮಾಡಿ ಮಠ ಮಂದಿರಗಳು ಹಾಗೂ ದೇವಾಲಯದ ನಿರ್ಮಾಣಕ್ಕೆ ನಾಂದಿ ಹಾಡಿರುವುದು ಒಳ್ಳೆಯ ವಿಚಾರವಾಗಿದೆ ಎಂದು ದರ್ಶನ್ ಪುಟ್ಟಣ್ಣಯ್ಯ ಅಭಿಮಾನದಿಂದ ಹೇಳಿದರು.
ಶ್ರೀರಂಗಪಟ್ಟಣ ತಾಲೂಕಿನ ಚಂದ್ರವನ ಆಶ್ರಮದ ಪೂಜ್ಯ ಗುರುಗಳಾದ ಶ್ರೀ ಶ್ರೀ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ನಾವು ಸತ್ತಾಗ ಏನನ್ನು ಕೊಂಡು ಹೋಗುವುದಿಲ್ಲ, ನಮ್ಮನ್ನು ಹಿಂಬಾಲಿಸುವುದು ಪಾಪ ಪುಣ್ಯಗಳ ಮೂಟೆಯೇ ಹೊರತು ನಾವು ಸಂಪಾದಿಸಿರುವ ಆಸ್ತಿಪಾಸ್ತಿಯಲ್ಲ, ಧನ ಕನಕಗಳಲ್ಲ, ಆದ್ದರಿಂದ ನಮ್ಮ ಜೀವಿತದ ಅವಧಿಯಲ್ಲಿ ಸೇವಾ ಮನೋಭಾವನೆ ಹಾಗೂ ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಂಡು ನೊಂದವರು ಹಾಗೂ ಬಡ ಜನರಿಗೆ ಕೈಲಾದ ಸಹಾಯವನ್ನು ಮಾಡುವ ಮನೋಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ನೊಂದವರು ಹಾಗೂ ಬಡಜನರ ಸೇವೆಯಲ್ಲಿ ಭಗವಂತನನ್ನು ಕಾಣುವ ಪ್ರಾಮಾಣಿಕ ಪ್ರಯತ್ನ ಮಾಡಿ ನಾವು ಸತ್ತ ನಂತರ ಪುಣ್ಯದ ಮೂಟೆಯನ್ನು ಹೊರಲು ಸಾರ್ಥಕ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಶ್ರೀರಾಮಲಿಂಗೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ. ಶಿವಬಸವ ಸ್ವಾಮೀಜಿ, ಕಾಪನಹಳ್ಳಿ ಗವಿಮಠದ ಶ್ರೀ. ಚನ್ನವೀರಯ್ಯ ಸ್ವಾಮಿಜಿ, ಕೆ.ಆರ್.ಪೇಟೆ ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಸ್. ಬಸವೇಗೌಡ, ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಇಂದ್ರೇಶ್, ಪಾಂಡವಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್. ಜಯರಾಮು, ಶ್ರೀ ವರಸಿದ್ಧಿ ಕಾಲಭೈರವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀ.ತ್ರಿಶೋಭಾನಂದ ಸ್ವಾಮೀಜಿ , ಭೂದಾನಿಗಳಾದ ವೆಂಕಟೇಶಣ್ಣ, ರೈತ ಸಂಘದ ಮುಖಂಡರಾದ ರಾಘವ ಪ್ರಕಾಶ್, ಗಿರಿಧರ್ ಬಾರ್ಕೂರು ಗಂಗಾಧರ ಶಾಸ್ತ್ರಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಅಶೋಕ್, ಶ್ರೀರಂಗಪಟ್ಟಣ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂಎಲ್ ದಿನೇಶ್ ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ನಯೋನಿಕ ಐ ಕೇರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಶ್ರೀ ವರಸಿದ್ಧಿ ಕಾಲಭೈರವೇಶ್ವರ ಸೇವಾ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ ಮಂಡ್ಯ.
More Stories
ಶ್ರೀ ಕಿಕ್ಕೇರಮ್ಮ ಕ್ರಿಕೆಟರ್ಸ್ ವತಿಯಿಂದ ಕಿಕ್ಕೇರಿ ಪ್ರೀಮಿಯರ್ ಲೀಗ್ ಸೀಸನ್ 1
ಶಾಲಾ ಮಕ್ಕಳಿಗೆ ಉಪಯೋಗಕ್ಕೆ ಬಾರದ ಶೌಚಾಲಯ
ಪ್ರೆಂಡ್ಸ್ ರಿಕ್ರಿಯೇಶನ್ ಕ್ಲಬ್ (ರಿ), ಕಿಕ್ಕೇರಿ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ