November 19, 2025

ಪಾಳುಬಿದ್ದ ಗಾಂಧಿನಗರ ಬಸ್ ನಿಲ್ದಾಣ, ನಿರ್ವಹಣೆಗೆ ಕೊರತೆ, ಶಿಥಿಲ ಸ್ಥಿತಿ; ಜನತೆ ಆಕ್ರೋಶ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಂಧಿನಗರ ಬಸ್ ನಿಲ್ದಾಣವು ಕಳೆದ ಐದು ವರ್ಷಗಳಿಂದ ನಿರ್ವಹಣೆಯಿಲ್ಲದೆ ಬಿಸುಕೊಂಡಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ದೈನಂದಿನ ಸಮಸ್ಯೆ ಎದುರಿಸುತ್ತಿದ್ದಾರೆ.
ಸುಮಾರು ಐವತ್ತು ವರ್ಷಗಳ ಹಿಂದೆ ನಿರ್ಮಿಸಲಾದ ಈ ತಂಗುದಾಣವು ಶಿಥಿಲಾವಸ್ಥೆಗೊಳಗಾಗಿ, ಗೋಡೆಗಳು ಒಡೆದು ಬೀಳುವ ಹಂತಕ್ಕೆ ತಲುಪಿದ್ದು, ಮೇಲ್ಛಾವಣಿಯ ಹೆಂಚುಗಳು ಕೂಡ ನೆಲಕ್ಕಪ್ಪಳಿಸಿವೆ. ಮಳೆ ಬಂದಾಗ ನಿಲ್ದಾಣದೊಳಗೆ ನೀರು ಸೇರುತ್ತಿದ್ದು, ತಂಗಬೇಕಾದ ಸ್ಥಳದಲ್ಲೇ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಸುಣ್ಣಬಣ್ಣ ಮಾಸಿ ಹೋಗಿದ್ದು, ಪಕಾಸುಗಳು ಕಾಣಿಸಿಕೊಳ್ಳುತ್ತಿದೆ.
ನಿರ್ವಹಣೆಯ ಕೊರತೆಯಿಂದ ತಂಗುದಾಣದ ಸುತ್ತಮುತ್ತ ತ್ಯಾಜ್ಯ ಹಾಗೂ ಗಿಡಗಂಟಿಗಳು ತುಂಬಿ ಹಾರಿದ್ದು, ಪರಿಸರ ಮಾಲಿನ್ಯ ತೀವ್ರವಾಗಿದೆ. ಪ್ರತಿದಿನವೂ ಬೆಳಗ್ಗೆ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಬಸ್‌ಗಾಗಿ ಕಾಯುತ್ತಾ ಅಂಗಡಿಗಳ ಮುಂದೆ ನಿಲ್ಲಬೇಕಾಗಿರುವ ದುರವಸ್ಥೆ ಎದುರಾಗಿದೆ.
ಇದು ಬಸ್ ನಿಲ್ದಾಣವೋ, ಕಸದ ತೊಟ್ಟಿಯೋ ಎಂಬುದು ತಿಳಿಯದ ಪರಿಸ್ಥಿತಿ ಉಂಟಾಗಿದೆ. ವರ್ಷಕ್ಕೆ ಎರಡು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ಪ್ರತಿಕ್ರಿಯೆ ಇಲ್ಲ. ದಿನಕ್ಕೆ ಸಾವಿರಾರು ಜನರು ಈ ಭಾಗದಿಂದ ಭಟ್ಕಳಕ್ಕೆ ಪ್ರಯಾಣಿಸುತ್ತಾರೆ. ಆದರೆ ಸೂಕ್ತ ನಿಲ್ದಾಣ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳು ಹಾಗೂ ಮಹಿಳೆಯರು ಪರದಾಡುತ್ತಿದ್ದಾರೆ ಎಂದು ಗಾಂಧಿನಗರ ಸರಗಂಟಿ ವೀರ ಯುವಕ ಮಂಡಳದ ಅಧ್ಯಕ್ಷ ಮನೋಹರ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.
ಪೂರ್ತಿಯಾಗಿ ಶಿಥಿಲಗೊಂಡಿರುವ ಹಳೆಯ ನಿಲ್ದಾಣವನ್ನು ತೆರವುಗೊಳಿಸಿ, ನೂತನ ಹಾಗೂ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಈ ಕುರಿತು ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರವರು ತಕ್ಷಣ ಸ್ಪಂದಿಸಬೇಕೆAದು ಸಾರ್ವಜನಿಕರು ಅಪೇಕ್ಷಿಸಿದ್ದಾರೆ.

About The Author

error: Content is protected !!