August 30, 2025

ತಾಯಿ ಶ್ರೀ ಮಹಾಲಕ್ಷ್ಮಿ ಅಮ್ಮನವರ ದೇವಾಲಯದ ಲೋಕಾರ್ಪಣೆ

ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ಬೆಳಕು ಚೆಲ್ಲುವ ದೇವಾಲಯಗಳು ಜೀವಂತ ಸ್ಮಾರಕಗಳಾಗಿವೆ ಎಂದು ಶಾಸಕ ಹೆಚ್.ಟಿ.ಮಂಜು.

ಕೃಷ್ಣರಾಜಪೇಟೆ : ತಾಲೂಕಿನ ಸಂತೆಬಾಚಳ್ಳಿ ಹೋಬಳಿಯ ಶ್ಯಾರಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಭಕ್ತರ ಸಹಕಾರದೊಂದಿಗೆ ನೂತನವಾಗಿ ನಿರ್ಮಿಸಿರುವ ತಾಯಿ ಶ್ರೀ ಮಹಾಲಕ್ಷ್ಮಿ ಅಮ್ಮನವರ ದೇವಾಲಯದ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಗ್ರಾಮೀಣ ಪ್ರದೇಶದ ಜನರ ನಂಬಿಕೆಯ ಒಂದು ಭಾಗವಾಗಿರುವ ಗ್ರಾಮ ದೇವರುಗಳ ದೇವಾಲಯಗಳು ಶರಣ ಶ್ರದ್ಧಾ ಕೇಂದ್ರಗಳು ಮಾತ್ರವಲ್ಲದೆ, ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ. ಶ್ಯಾರಹಳ್ಳಿ ಗ್ರಾಮಸ್ಥರು ಶಿಥಿಲವಾಗಿದ್ದ ತಾಯಿ ಶ್ರೀಮಹಾಲಕ್ಷ್ಮೀ ಅಮ್ಮನವರ ದೇವಾಲಯವನ್ನು ಒಂದೂವರೆ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿ, ಭವ್ಯವಾಗಿ ಪುನರ್ ನಿರ್ಮಾಣ ಮಾಡಿದ್ದಾರೆ. ಇಂದಿನ ಒತ್ತಡದ ಜೀವನದಲ್ಲಿ ಮಾನವರಾದ ನಾವು ದೇವರು ಮತ್ತು ಧರ್ಮದ ಮಾರ್ಗದಲ್ಲಿ ನಡೆದರೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆಯುವ ಜೊತೆಗೆ ಕೈ ಹಿಡಿದ ಕಾರ್ಯದಲ್ಲಿ ಯಶಸ್ಸನ್ನು ಕೂಡ ಗಳಿಸಬಹುದಾಗಿದೆ. ಶ್ಯಾರಹಳ್ಳಿ ಗ್ರಾಮದಲ್ಲಿ ಭವ್ಯವಾದ ಗ್ರಾಮ ದೇವತೆ ಶ್ರೀಮಹಾಲಕ್ಷ್ಮಿ ಅಮ್ಮನವರ ದೇವಾಲಯವನ್ನು ಪುನರ್ ನಿರ್ಮಾಣ ಮಾಡುವ ಮೂಲಕ ಮಾದರಿಯಾಗಿದ್ದಾರೆ ಎಂದು ಶಾಸಕ ಮಂಜು ಅಭಿಮಾನದಿಂದ ಹೇಳಿದರು.

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ, ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ, ಹಿರಿಸಾವೆಯ ಸಂಸ್ಕೃತಿ ಸಂಘಟಕ ವೇದಬ್ರಹ್ಮ ತಿರುಮಲ ಪ್ರಿಯಕೃಷ್ಣಮೂರ್ತಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ಟಿಎಪಿಸಿಎಂಎಸ್ ನಿರ್ದೇಶಕ ಕೊಟ್ಟಗಹಳ್ಳಿ ದಿನೇಶ್, ಸಾರಂಗಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ್, ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ ಸೇರಿದಂತೆ ಶಾರೋಹಳ್ಳಿ ಹಾಗೂ ಸುತ್ತಮುತ್ತಲಿನ ಸಾವಿರಾರು ಭಕ್ತಾದಿಗಳು ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅನ್ನಪ್ರಸಾದವನ್ನು ಸ್ವೀಕರಿಸಿ ತಾಯಿ ಶ್ರೀಲಕ್ಷ್ಮಿದೇವಿ ಅಮ್ಮನವರ ಕೃಪೆಗೆ ಪಾತ್ರರಾದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author