August 30, 2025

ಭರ್ತಿಯತ್ತ ಲಿಂಗನಮಕ್ಕಿ- ದಿ. 19 ನೀರು ಬಿಡುವ ಸಾಧ್ಯತೆ

ಹೊನ್ನಾವರ: ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಕಳೆದ 2 ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವುದರಿಂದ ನೀರಿನಮಟ್ಟ ಏರುತ್ತಿದ್ದು ಸೋಮವಾರ ಮುಂಜಾನೆ 1815.5 ಅಡಿ ತಲುಪಿದೆ. ಒಳ ಹರಿವು 59,891 ಭಾರಿ ಹರಿವಿದೆ. ಇದರಿಂದ ಒಂದೇ ದಿನದಲ್ಲಿ ಆಣೆಕಟ್ಟು 1.55 ಅಡಿ ಏರಿದೆ. ಅಧಿಕೃತ ಮೂಲಗಳ ಪ್ರಕಾರ ಮಳೆ ಮುಂದುವರಿದರೆ 1816 ಅಡಿ ನಾಳೆ ಆಗಲಿದ್ದು ಗರಿಷ್ಠ ಮಟ್ಟ ತಲುಪಲು ಕೇವಲ 3 ಅಡಿ ಬಾಕಿ ಇರುವುದರಿಂದ ಮುನ್ನಚ್ಚರಿಕೆಯ ಕ್ರಮವಾಗಿ 20 ಸಾವಿರ ಕ್ಯುಸೆಕ್ಸ್ ನೀರನ್ನು ಲಿಂಗನಮಕ್ಕಿ ಗೇಟು ತೆರೆದು ಬಿಡುವ ಸಾಧ್ಯತೆ ಇದೆ. ಅದನ್ನು ಟೇಲರೀಸ್ ಆಣೆಕಟ್ಟಿನಲ್ಲಿ ತಡೆದು ನಿತ್ಯದ ಗರಿಷ್ಠ ವಿದ್ಯುತ್ ಉತ್ಪಾದನೆ ಮಾಡಿ 22 ಸಾವಿರ ಕ್ಯುಸೆಕ್ಸ್ ನಷ್ಟು ಹೊರಬಿಡಲಾಗುತ್ತದೆ. ಶರಾವತಿ ಕೊಳ್ಳದಲ್ಲಿ ಸಾಧಾರಣ ಮಳೆ ಇರುವುದರಿಂದ ನೀರು ಹರಿವಿನ ಪಾತಳಿ ಬಿಟ್ಟು ಮೇಲೆರುವುದಿಲ್ಲ. ಟೇಲರೀಸ್ ಆನೆಕಟ್ಟಿನಲ್ಲಿ 48 ಮೀ. ಮಾತ್ರ ನೀರು ಇದೆ. ಇಲ್ಲಿ ಇನ್ನೂ 7 ಅಡಿ ನೀರು ತುಂಬುವಷ್ಟು ಸ್ಥಳಾವಕಾಶವಿದೆ. ಆದ್ದರಿಂದ ನೀರು ಬಿಟ್ಟರೂ ನೆರೆ ಆಗಲಾರದು. ಮಳೆ ಮುಂದುವರಿದರೆ, ಜೋಗ ನೋಡುವವರಿಗೆ 19 ರಂದು ಸಂಭ್ರಮ ಗರಿಗೆದರಲಿದೆ.

ಕೆಪಿಸಿ ಎಲ್ಲ ಮುನ್ನಚ್ಚರಿಕೆ ಕ್ರಮ ಕೈಗೊಂಡಿದ್ದು 1816 ಅಡಿ ತುಂಬಿದ ನಂತರ ಕೊಳ್ಳದಲ್ಲಿ ಮಳೆ ಇದ್ದರೆ ಇದೇ ಮಟ್ಟವನ್ನು ಅಗಸ್ಟ್ ಕೊನೆಯವರೆಗೆ ಕಾಯ್ದುಕೊಳ್ಳಲಾಗುವುದು. ಮಳೆ ನಿಂತರೆ ನೀರು ಬಿಡುವ ಪ್ರಶ್ನೆ ಇಲ್ಲ. ಶರಾವತಿ ಸೇರುವ ಕಲ್ಕಟ್ಟೆ, ಮಾಗೋಡು, ಹಡಿನಬಾಳ, ಗೇರುಸೊಪ್ಪ ಹೊಳೆಗಳ ಜಲಾನಯನ ಪ್ರದೇಶದ ಪಶ್ಚಿಮ ಘಟ್ಟದಲ್ಲಿ ಮಳೆ ಇದ್ದರೂ ಭಾರೀ ಪ್ರಮಾಣದಲ್ಲಿ ಇಲ್ಲ. ಆದ್ದರಿಂದ ಸದ್ಯಕ್ಕೆ ಭಯ ಬೇಕಾಗಿಲ್ಲ. ಶರಾವತಿ ಕೊಳ್ಳದ ಜನ ಎಚ್ಚರಿಕೆಯಿಂದ ಇರಬೇಕಾಗಿದೆ.
ವರದಿ :ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author