August 29, 2025

ಪಲ್ಲವಿ ಎಂಬ ನಾಟ್ಯ ಪ್ರತಿಭೆಗೆ ಪ್ರಥಮ ರ‍್ಯಾಂಕಿನ ಅಲಂಕಾರ

ಭಟ್ಕಳ: ಗೋಕರ್ಣ ಮೂಲದ ಕುಮಟಾ ನಿವಾಸಿಯಾದ ಪಲ್ಲವಿ ಎಂಬ ಸಂಗೀತ-ನೃತ್ಯ ಪ್ರತಿಭೆ ಅಖಿಲ ಭಾರತ ಮಟ್ಟದ ಅಲಂಕಾರ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಗಮನ ಸೆಳೆದಿದ್ದಾಳೆ. ಶ್ರೀ ಗೋಪಾಲಕೃಷ್ಣ ಗಾಯತ್ರಿ ಮತ್ತು ಲಕ್ಮೀ ಗಾಯತ್ರಿ ದಂಪತಿಗಳ ಏಕಮಾತ್ರ ಪುತ್ರಿಯಾದ ಪಲ್ಲವಿ ಬಾಲ್ಯದಿಂದಲೇ ಸಂಗೀತ ಮತ್ತು ನೃತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಾಕೆ. ಸತತ ಇಪ್ಪತ್ತು ವರ್ಷಗಳ ಕಾಲ ಶ್ರದ್ಧೆ ಮತ್ತು ಭಕ್ತಿಯಿಂದ ಅಭ್ಯಾಸ ಮಾಡಿದ ಪರಿಣಾಮವಾಗಿ ಇಂತಹ ಅದ್ವಿತೀಯ ಸಾಧನೆ ಮಾಡಲು ಆಕೆಗೆ ಸಾಧ್ಯವಾಯಿತು.

ಭಟ್ಕಳದ ನೃತ್ಯ ವಿದುಷಿ ಶ್ರೀಮತಿ ನಯನಾ ಪ್ರಸನ್ನ ಪ್ರಭು ಅವರ ಶಿಷ್ಯೆಯಾದ ಪಲ್ಲವಿ ಅತಿಯಾದ ಶ್ರದ್ಧಾ ಭಕ್ತಿಯಿಂದ ನೃತ್ಯ ಕಲೆಯನ್ನು ಆರಾಧಿಸುತ್ತ ಒಂದೊAದೆ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತ ಸಾಗಿದ ಪರಿಣಾಮ ನೃತ್ಯದಲ್ಲಿ ಸ್ನಾತಕೋತ್ತರ ಪದವಿಗೆ ಸಮಾನವಾದ ಅಲಂಕಾರ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದ ಈ ಸಾಧನೆ ಮಾಡಲು ಸಾಧ್ಯವಾಯಿತು. ಇದೇ ರೀತಿ ವಿಶಾರದದಲ್ಲಿಯೂ ರಾಷ್ಟ್ರ ಮಟ್ಟದಲ್ಲಿ ಪ್ರಥಮಳಾಗಿದ್ದನ್ನೂ ಇಲ್ಲಿ ಸ್ಮರಿಸಬಹುದಾಗಿದೆ.

ಬೆಂಗಳೂರಿನ ಜೈನ ವಿಶ್ವವಿದ್ಯಾಲಯದಿಂದ ಪಲ್ಲವಿ ಭರತನಾಟ್ಯದಲ್ಲಿ ಎಂಎ ಪದವಿಯನ್ನೂ ಪಡೆದಿರುತ್ತಾಳೆ. ಈ ಮೊದಲೇ ರಾಜ್ಯ ಮಟ್ಟದಲ್ಲಿ ನಡೆಯುವ ಜೂನಿಯರ್, ಸೀನಿಯರ್ ಮತ್ತು ವಿದ್ವತ್, ನೃತ್ಯ ಪರೀಕ್ಷೆಗಳಲ್ಲಿಯೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವುದು ವಿಶೇಷವಾಗಿದೆ. ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿಯ ವಿದ್ಯಾರ್ಥಿವೇತನಕ್ಕೆ ಭಾಜನಳಾದ ಪಲ್ಲವಿ ಕೇಂದ್ರದ ಪ್ರತಿಷ್ಠಿತ ಸಿಸಿಆರ್ಟಿ ಪರೀಕ್ಷೆಗೆ ಹಾಜರಾದ ರಾಜ್ಯದ ಆರು ಜನರ ಪೈಕಿ ಉತ್ತೀರ್ಣರಾಗಿ ಆ ವರ್ಷದಲ್ಲಿ ರಾಜ್ಯದಿಂದ ಆಯ್ಕೆಯಾದವರಲ್ಲಿ ಒಬ್ಬಳಾಗಿ ಸ್ಕಾಲರ್ಶಿಪ್ ಸಹ ಪಡೆದುಕೊಂಡಿರುತ್ತಾಳೆ. ಮಹಾರಾಷ್ಟ್ರ ರಾಜ್ಯವು ನಡೆಸುವ ಪ್ರಾರಂಭಿಕ ಪರೀಕ್ಷೆಯಿಂದ ಅಲಂಕಾರದವರೆಗಿನ ಎಲ್ಲ ಹಂತದ ಪರೀಕ್ಷೆಗಳನ್ನು ಯಶಸ್ವಿಯಾಗಿ ಉತ್ತರಿಸಿದ ಈ ಬಿಎಸ್ಸಿ ಪದವೀಧರೆ ತನಗೆ ದೊರೆತ ವೇದಿಕೆಗಳಲ್ಲಿ ತನ್ನ ಪ್ರತಿಭೆಯನ್ನು ಉತ್ತಮವಾಗಿ ಅನಾವರಣ ಗೊಳಿಸಿದ್ದಾಳೆ.

ಕರಾವಳಿ ಉತ್ಸವ, ಕುಮಟಾ ಉತ್ಸವ, ಶರಾವತಿ ಉತ್ಸವ, ಉಡುಪಿ ಕೃಷ್ಣಮಠದಲ್ಲಿ ನಡೆದ ಕಾರ್ಯಕ್ರಮ ಮೊದಲಾದವುಗಳಲ್ಲಿ ಪ್ರದರ್ಶನಗೊಂಡ ಪಲ್ಲವಿಯ ನೃತ್ಯವೈಭವ ಕಲಾಪ್ರೇಮಿಗಳ ಮನಸೂರೆಗೊಂಡಿದೆ. ಹುಬ್ಬಳ್ಳಿ ಕಾರ್ಯಕ್ರಮವೊಂದರಲ್ಲಿ ಪಲ್ಲವಿಯ ನೃತ್ಯಪ್ರದರ್ಶನವನ್ನು ಕಂಡ ರಾಜ್ಯಸಭಾ ಸದಸ್ಯೆ ಪದ್ಮಶ್ರೀ ಡಾ. ಸುಧಾಮೂರ್ತಿಯವರು ಈ ಕಲಾವಿದೆಯನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ. ಅಲಂಕಾರ ಪರೀಕ್ಷೆಗೆ ಹಾಜರಾದ ಏಳು ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನವನ್ನು ಈಕೆ ತನ್ನದಾಗಿಸಿಕೊಂಡಿದ್ದಾಳೆ. ಅಲಂಕಾರ ಪದವಿ ನೀಡಿದ ಪದ್ಮವಿಭೂಷಣ ಸೋನಲ್ ಮಾನಸಿಂಗ್ ಅವರು ಇದರ ಸಂಗಡ ದಿ. ರಂಗನಾಥ ದತ್ತಾತ್ರೇಯ ಬೇಂದ್ರೆ, ದಿ. ಮು,ರಾ. ಪರಾಸನಿಸ್, ಶ್ರೀಮತಿ ಶಾರದಾಬಾಯಿ ನಾಥ್ ಮತ್ತು ಶ್ರೀಮತಿ ಸುಶೀಲಬಾಯಿ ಕೊಗಜೆ ಪುರಸ್ಕಾರವನ್ನೂ ಸಹ ನವಿಮುಂಬೈ ನೆರೂಳ್ ತೇರಣಾ ಸಭಾಂಗಣದಲ್ಲಿ ನೀಡಿ ಅಭಿನಂದಿಸಿದರು. ಇದರಿಂದಾಗಿ ಪಲ್ಲವಿ24 ನೇ ವರ್ಷಕ್ಕೇ ಒಟ್ಟಿನಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಭರತನಾಟ್ಯದಲ್ಲಿಯೇ ಪಡೆದು ವಿಶೇಷ ಪರಿಣತಿ ಪಡೆದಿದ್ದು ಅಪರೂಪ. ಕಲಿಕೆಯಲ್ಲಿ ಶಿಷ್ಯರು ಗುರುವನ್ನು ಮೀರಿಸಿದಾಗ ಮಾತ್ರ ಗುರುವಾದವರಿಗೆ ಸಾರ್ಥಕ ಮನೋಭಾವ ಮೂಡುವದು.ಪಲ್ಲವಿಯ ಅರ್ಪಣಾ ಮನೋಭಾವದಿಂದ ತನ್ನನ್ನು ತಾನು ನೃತ್ಯಕ್ಕೆ ತೊಡಗಿಸಿಕೊಂಡ ಪರಿಣಾಮವಾಗಿ ಇದು ಸಾಧ್ಯವಾಯಿತೆಂದು ಶಿಕ್ಷಕಿ ನೃತ್ಯ ವಿದುಷಿ ನಯನಾ ಪ್ರಭು ತನ್ನ ಶಿಷ್ಯೆಯ ಬಗ್ಗೆ ಹೆಮ್ಮೆಯಿಂದ ನುಡಿಯುತ್ತಾರೆ.

ದೂರದರ್ಶನದ ‘ಬಿ’ ಗ್ರೇಡ್ ಕಲಾವಿದೆಯಾಗಿರುವ ಪಲ್ಲವಿ, ಸದ್ಯ ರಾಜ್ಯದ ರಾಜಧಾನಿಯಲ್ಲಿ ನೆಲೆಸಿದ್ದು ಅಲ್ಲಿನ ಹಾಗೂ ಹಲವಾರು ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ನೃತ್ಯ ತರಬೇತಿ ನೀಡುತ್ತಾ ಕಾರ್ಯಕ್ರಮ ನೀಡುತ್ತಿದ್ದಾಳೆ.

About The Author