August 31, 2025

ನಾಮಧಾರಿ ಸಮಾಜದ ಹಕ್ಕು ನಿರ್ಲಕ್ಷ್ಯ, ಸಮಗ್ರ ಚಿಂತನೆ,ಚರ್ಚೆ,ನಿರ್ಣಯಕ್ಕೆ ಸಿದ್ದಾಪುರದಲ್ಲಿ ವೇದಿಕೆ

ಭಟ್ಕಳ: ಜಿಲ್ಲೆಯಲ್ಲಿ 2.5 ಲಕ್ಷ ಮತದಾರರು, 3ರಿಂದ 4 ಲಕ್ಷ ಜನಸಂಖ್ಯೆ ಇದ್ದರೂ ನಮ್ಮ ನಾಮಧಾರಿ ಸಮಾಜಕ್ಕೆ ಸಿಗಬೇಕಾದ ಹಕ್ಕುಗಳು ಸಿಗುತ್ತಿಲ್ಲ. ರಾಜಕೀಯ ಶಕ್ತಿ ಇದ್ದರೂ ಬಳಸಿಕೆಯಾಗುತ್ತಿಲ್ಲ. ಸಮಾಜವು ಕತ್ತಲೆಯಲ್ಲೇ ಉಳಿಯುತ್ತಿದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠ ಕರದಾಳು ಚಿತ್ತಾಪುರದ ಪೀಠಾಧಿಪತಿ ಡಾ. ಪ್ರಣಮಾನಂದ ಸ್ವಾಮೀಜಿ ಆರೋಪಿಸಿದರು.

ಅವರು ಭಟ್ಕಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಈಡಿಗ ಮಹಾಮಂಡಳಿ ಕರ್ನಾಟಕ ಹಾಗೂ ಜಿಲ್ಲಾ ರಾಷ್ಟ್ರೀಯ ಈಡಿಗ ನಾಮಧಾರಿ ಬಿಲ್ಲವ ದಿವರು ಮಹಾಮಂಡಳಿ ಆಶ್ರಯದಲ್ಲಿ ಸೆಪ್ಟೆಂಬರ್ 3ರಂದು ಸಿದ್ದಾಪುರದ ಬಾಲ ಭವನದಲ್ಲಿ ಸಮಾಜದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಪ್ರಶ್ನೆಗಳ ಕುರಿತು ಸಮಗ್ರ ಚಿಂತನೆ ಚರ್ಚೆ ನಿರ್ಣಯ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಶಿರೂರು ಗುಡ್ಡ ಕುಸಿತ ಪರಿಹಾರದಲ್ಲಿ ಅನ್ಯಾಯ
2024 ಜುಲೈ 16ರಂದು ಅಂಕೋಲಾದ ಶಿರೂರು ಗುಡ್ಡ ಕುಸಿತದಲ್ಲಿ ನಾಮಧಾರಿ ಸಮಾಜದ ಏಳು ಮಂದಿ ಮರಣ ಹೊಂದಿದರೂ, ಕುಟುಂಬಗಳಿಗೆ ನ್ಯಾಯ ಸಿಕ್ಕಿಲ್ಲ. ಕೇಂದ್ರದಿAದ ಕೇವಲ ರೂ2 ಲಕ್ಷ, ರಾಜ್ಯದಿಂದ ರೂ5 ಲಕ್ಷ ಹೊರತುಪಡಿಸಿ ಹೆಚ್ಚಿನ ಪರಿಹಾರ ಸಿಕ್ಕಿಲ್ಲ. ಐಆರ್‌ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದ ಈ ದುರಂತ ಸಂಭವಿಸಿದೆ. 9 ತಿಂಗಳ ಹೋರಾಟದ ಬಳಿಕ ಮರ್ಡರ್ ಕೇಸ್ ದಾಖಲಾಗಿದೆ. ಆದರೆ ಉಸ್ತುವಾರಿ ಸಚಿವ ಮಂಕಾಳ ವೈದ್ಯರು ಹೊಣೆ ತಪ್ಪಲು ಯತ್ನಿಸುತ್ತಿದ್ದಾರೆ ಎಂದು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯದಲ್ಲಿ ಕಡೆ ಗಣನೆ
ಬಿಜೆಪಿ ಆಡಳಿತದಲ್ಲಿ ನಮ್ಮ ಸಮಾಜದ ಇಬ್ಬರು ಸಚಿವರು, ಮೂರು ನಿಗಮಾಧ್ಯಕ್ಷ ಸ್ಥಾನಗಳು ಸಿಕ್ಕಿದ್ದವು. ಇಂದಿನ ಕಾಂಗ್ರೆಸ್ ಆಡಳಿತದಲ್ಲಿ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದೆ. ಜಿಲ್ಲೆಯಲ್ಲಿ ಆರು ಮಂದಿ ಪ್ರತಿನಿಧಿಗಳಿದ್ದರೂ ಸಮಾಜದ ಹಕ್ಕು ಬಲಹೀನವಾಗಿದೆ. ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗೆ ತೆರಳಿ ಜಾಗೃತಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವರ್ಗಾವಣೆ ಅನ್ಯಾಯ
ನಾಮಧಾರಿ ಸಮಾಜದ ಸರ್ಕಾರಿ ನೌಕರರನ್ನು ಕಾರಣವಿಲ್ಲದೇ ವರ್ಗಾವಣೆ ಮಾಡಲಾಗುತ್ತಿದೆ. ಇದರ ಹಿಂದೆ ಉಸ್ತುವಾರಿ ಸಚಿವರ ಕೈವಾಡವಿದೆ ಎಂಬ ಮಾಹಿತಿ ನಮಗೆ ಬಂದಿದೆ. ಮುಂದುವರಿದರೆ ರಸ್ತೆಗಿಳಿದು ಹೋರಾಟ ನಡೆಸುತ್ತೇವೆ. ನಮ್ಮನ್ನು ಟಾರ್ಗೆಟ್ ಮಾಡಿದರೆ, ನಾವು ಕೂಡಾ ನಿಮ್ಮನ್ನೇ ಟಾರ್ಗೆಟ್ ಮಾಡುತ್ತೇವೆ ಎಂದು ಸ್ವಾಮೀಜಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶ್ರೀಧರ ನಾಯ್ಕ, ರಾಜು ನಾಯ್ಕ, ಅಚ್ಯುತ ನಾಯ್ಕ, ಮಂಜುನಾಥ ನಾಯ್ಕ, ಸತೀಶಕುಮಾರ ನಾಯ್ಕ, ಅರುಣ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

About The Author

error: Content is protected !!