
ಭಟ್ಕಳ: ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿರುವ ಮೀನು ಮಾರುಕಟ್ಟೆಯನ್ನು ಸ್ಥಳಾಂತರ ಮಾಡುವುದಿಲ್ಲ ಎಂದು ಸಚಿವ ಮಂಕಾಳ ವೈದ್ಯ ಮೀನುಗಾರ ಮಹಿಳೆಯರಿಗೆ ಭರವಸೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ “ಮೀನು ಮಾರುಕಟ್ಟೆ ಸ್ಥಳಾಂತರ” ಕುರಿತು ಹರಡಿದ್ದ ವದಂತಿಗಳ ನಡುವೆ ಭಾನುವಾರ ಸಚಿವರು ಸ್ವತಃ ಸ್ಥಳಕ್ಕೆ ಬೇಟಿ ನೀಡಿ, ಮೀನುಗಾರ ಮಹಿಳೆಯರೊಂದಿಗೆ ಮಾತುಕತೆ ನಡೆಸಿದರು. “ವಿರೋಧ ಪಕ್ಷದವರು ಹಾಗೂ ಕೆಲ ಕಿಡಿಗೇಡಿಗಳು ಸುಳ್ಳುಪ್ರಚಾರದ ಮೂಲಕ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದ್ದರು. ಆದರೆ ಯಾವುದೇ ಕಾರಣಕ್ಕೂ ಹಳೆ ಮೀನು ಮಾರುಕಟ್ಟೆಯನ್ನು ಸ್ಥಳಾಂತರ ಮಾಡುವುದಿಲ್ಲ, ಅದು ಈಗಿರುವ ಸ್ಥಳದಲ್ಲಿಯೇ ಮುಂದುವರಿಯಲಿದೆ” ಎಂದು ಸಚಿವರು ಸ್ಪಷ್ಟನೆ ನೀಡಿದರು.
ಅವರು ಮುಂದುವರೆದು, “ಪಟ್ಟಣದ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಹಾಗೂ ಬದಲಾಗುತ್ತಿರುವ ಪರಿಸ್ಥಿತಿಗೆ ತಕ್ಕಂತೆ ಮತ್ತೊಂದು ಹೊಸ ಮೀನು ಮಾರುಕಟ್ಟೆಯನ್ನು ನಿರ್ಮಿಸುತ್ತೇವೆ. ಮೀನುಗಾರರ ಕಷ್ಟ-ಕಾರ್ಪಣ್ಯ ನನಗೆ ಚೆನ್ನಾಗಿ ತಿಳಿದಿದೆ. ಅವರಿಗೆ ತೊಂದರೆ ಉಂಟಾಗುವ ಯಾವ ನಿರ್ಧಾರಕ್ಕೂ ಬೆಂಬಲ ನೀಡುವುದಿಲ್ಲ. ಯಾವಾಗಲೂ ಮೀನುಗಾರರ ಜೊತೆ ನಿಂತು ಸಹಕರಿಸುತ್ತೇನೆ” ಎಂದರು. ಸಚಿವರು ಹಳೆಯ ಮಾರುಕಟ್ಟೆಯ ಅಭಿವೃದ್ಧಿಗೆ ಸರ್ಕಾರದಿಂದ ವಿಶೇಷ ಅನುದಾನ ತರಲಾಗುವುದು, ಹೈಟೆಕ್ ಮಾರುಕಟ್ಟೆ ನಿರ್ಮಾಣದ ನೀಲನಕ್ಷೆ ತಯಾರಿಸುವಾಗ ಮೀನುಗಾರರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದೂ ಭರವಸೆ ನೀಡಿದರು.
“ಸಂತೆ ಮಾರುಕಟ್ಟೆಯಲ್ಲಿ ಹೊಸ ಮೀನು ಮಾರುಕಟ್ಟೆ ನಿರ್ಮಿಸಿ ಐದು ವರ್ಷ ಕಳೆದರೂ ಅಲ್ಲಿ ಹೋಗಲು ಯಾರಿಗೂ ಒತ್ತಡ ಇಲ್ಲ. ಹಳೆಯ ಮಾರುಕಟ್ಟೆಯಲ್ಲೇ ನೀವು ಮುಂದುವರಿಯಬಹುದು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ” ಎಂದು ಸಚಿವರು ವಿನಂತಿಸಿದರು. ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ವದಂತಿಗಳಿಗೆ ತೆರೆ ಎಳೆದ ಸಚಿವರಿಗೆ, ಮೀನುಗಾರ ಮಹಿಳೆಯರು ಜೈಕಾರ ಹಾಕಿ ಹರ್ಷೋದ್ಗಾರ ವ್ಯಕ್ತಪಡಿಸಿದರು. ಮೀನುಗಾರ ಮುಖಂಡ ಖಾಜಾ ಹಾಗೂ ಇತರರು ಹಾಜರಿದ್ದರು.
More Stories
“ವಿಶ್ವ ಜನಸಂಖ್ಯಾ ದಿನಾಚರಣೆ” ಮತ್ತು “ವಿಶ್ವ ಸ್ಕಿಜೋಪ್ರೇನಿಯಾ ದಿನ” ದ ಜನಜಾಗೃತಿ ಕಾರ್ಯಕ್ರಮ
ಶ್ರೀ ಭಾರತಿ ಕವಲಕ್ಕಿ ಯ ವಿದ್ಯಾರ್ಥಿಯ ಸಾಧನೆ
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಆರ್ ಎನ್ ಎಸ್ ಸಾಧನೆ