August 31, 2025

ಧರ್ಮದ ಉಳಿವಿಗಾಗಿ ಧರ್ಮಯುದ್ಧ: ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ಖಂಡನೆ

ಭಟ್ಕಳ: ಧರ್ಮದ ಉಳಿವಿಗಾಗಿ ಧರ್ಮಯುದ್ಧ ಎಂಬ ಶೀರ್ಷಿಕೆಯಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಅಪಪ್ರಚಾರ ನಡೆಯುತ್ತಿರುವುದನ್ನು ಖಂಡಿಸಿ, ಬಿಜೆಪಿ ಮುಖಂಡರು ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳವು ಕೇವಲ ಕರ್ನಾಟಕದಲ್ಲೇ ಅಲ್ಲದೆ ದೇಶದಾದ್ಯಂತ ಕೋಟ್ಯಾಂತರ ಭಕ್ತಾಧಿಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು, ಪ್ರತಿದಿನ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಇಂತಹ ಧಾರ್ಮಿಕ ಭಾವನೆಯನ್ನು ಅವಮಾನಿಸುವ ಉದ್ದೇಶದಿಂದ ಕೆಲ ಕಿಡಿಗೇಡಿಗಳು ಹಾಗೂ ಎಡಚರರು ಸುಳ್ಳು ಅಪಪ್ರಚಾರ ನಡೆಸುತ್ತಿರುವುದಾಗಿ ಮನವಿಯಲ್ಲಿ ಆರೋಪಿಸಲಾಗಿದೆ.

ಅನಾಮಿಕ ವ್ಯಕ್ತಿಯೊಬ್ಬನ ಆಧಾರರಹಿತ ಆರೋಪದ ಆಧಾರದ ಮೇಲೆ ಸರ್ಕಾರ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಅನೇಕ ಕಡೆಗಳಲ್ಲಿ ಗುಂಡಿಗಳನ್ನು ತೋಡಿದರೂ, ಅದರ ಹಿಂದಿರುವ ದುಷ್ಕೃತ್ಯಗಾರರ ಕುರಿತು ಇನ್ನೂ ಸ್ಪಷ್ಟತೆ ನೀಡಿಲ್ಲವೆಂದು ಮನವಿದಾರರು ಪ್ರಶ್ನಿಸಿದರು. ಹೀಗಾಗಿ, ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

ರಾಜ್ಯಾದ್ಯಂತ ಈ ಕುರಿತು ಪ್ರತಿಭಟನೆಗಳು ಜೋರಾಗಿದ್ದು, ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳು ಹಿಂದೂ ಸಮುದಾಯದ ಭಕ್ತಿಭಾವನೆಗೆ ಧಕ್ಕೆ ತಂದು ಕ್ಷಮೆಯಾಚಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ, ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀ ನಾರಾಯಣ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ, ಮಾಜಿ ನಿಗಮ ಮಂಡಳಿ ಅಧ್ಯಕ್ಷ ಗೋವಿಂದ ನಾಯ್ಕ, ರಾಜ್ಯ ಹಿಂದುಳಿದ ಮೊರ್ಚ ಉಪಾಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ, ಶ್ರೀನಿವಾಸ ಹನುಮನ ನಗರ, ಕೇಶವ ನಾಯ್ಕ ಚೌತನಿ, ಯುವ ಮೋರ್ಚಾ ಅಧ್ಯಕ್ಷ ಸುನೀಲ ಕಾಮತ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

error: Content is protected !!