September 4, 2025

ಸೆ.3 ರಿಂದ 13 ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್ ಪೈಗಂಬರ್ ಸೀರತ್ ಅಭಿಯಾನ

ಭಟ್ಕಳ : ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯು ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್ (ಸ) ಎಂಬ ವಿಷಯದಡಿ ಸೆಪ್ಟೆಂಬರ್ 3 ರಿಂದ 13, 2025 ರವರೆಗೆ ಸೀರತ್ ಅಭಿಯಾನವನ್ನು ಆಯೋಜಿಸಿದ್ದು ಈ ಅಭಿಯಾನವು ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಮತ್ತು ತತ್ವಗಳಿಂದ ಪ್ರೇರಿತವಾಗಿ ಸಾಮಾಜಿಕ ನ್ಯಾಯ, ಸಮಾನತೆ, ಕರುಣೆ, ಮತ್ತು ಮಾನವೀಯತೆಯ ಸಂದೇಶವನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪಿಸುವ ಗುರಿಯನ್ನು ಹೊಂದಿದೆ ಎಂದು ಅಭಿಯಾನದ ಸಂಚಾಲಕ ಮುಹಮ್ಮದ್ ರಝಾ ಮಾನ್ವಿ ತಿಳಿಸಿದ್ದಾರೆ.

ಅವರು ಸೋಮವಾರ ಸಂಜೆ ಸಾಗರ್ ರಸ್ತೆಯ ಹೋಟೆಲ್ ಪಪ್ಪಾಸ್ ಪಾರ್ಟಿ ಹಾಲ್ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಸೀರತ್ ಅಭಿಯಾನದ ಕುರಿತು ಮಾಹಿತಿ ನೀಡಿದರು. ಪ್ರವಾದಿಯವರ ಜೀವನವು ನ್ಯಾಯದ ಸ್ಥಾಪನೆಗೆ ಶಾಶ್ವತ ಉದಾಹರಣೆಯಾಗಿದೆ. ನೀವು ನ್ಯಾಯದಲ್ಲಿ ದೃಢವಾಗಿರಿ, ಅದು ನಿಮ್ಮ ವಿರುದ್ಧವಾಗಲಿ ಅಥವಾ ನಿಮ್ಮ ಕುಟುಂಬದವರ ವಿರುದ್ಧವಾಗಲಿ, ಸತ್ಯವನ್ನೇ ಹೇಳಿ. ಎಂಬ ಸಂದೇಶವನ್ನು ಜನರಿಗೆ ತಿಳಿಸುವುದು ಈ ಅಭಿಯಾನದ ಮುಖ್ಯ ಧ್ಯೇಯ. ಶೋಷಣೆ, ಭೇದಭಾವ, ಮತ್ತು ಅನ್ಯಾಯವಿರುವ ಇಂದಿನ ಕಾಲದಲ್ಲಿ, ಪ್ರವಾದಿಯವರ ಜೀವನದಿಂದ ಪ್ರೇರಣೆ ಪಡೆದು ದುರ್ಬಲರ ಹಕ್ಕುಗಳನ್ನು ಕಾಪಾಡಲು, ಸಮಾನತೆಯನ್ನು ಖಾತ್ರಿಪಡಿಸಲು ಮತ್ತು ಸಾಮಾಜಿಕ ಸಾಮರಸ್ಯವನ್ನು ಬೆಳೆಸಲು ಈ ಅಭಿಯಾನ ಸಹಕಾರಿಯಾಗಲಿದೆ ಎಂದರು.

ಸೀರತ್ ಅಭಿಯಾನ 2025 ಅಂಗವಾಗಿ ಭಟ್ಕಳದಲ್ಲಿ ಸ್ಥಳೀಯ ಜಮಾಅತ್‌ಗಳು, ಸಂಸ್ಥೆಗಳು, ಮತ್ತು ಕ್ರೀಡಾ ಕೇಂದ್ರಗಳೊAದಿಗೆ ಸೀರತ್ ಪರಿಚಯ ಕಾರ್ಯಕ್ರಮ. ವಿಚಾರಗೋಷ್ಟಿ ಹಾಗೂ ಪ್ರವಾದಿ ಮುಹಮ್ಮದ್ (ಸ)ರನ್ನು ಅರಿಯಿರಿ ಮತ್ತು ಭಾರತೀಯ ಸಮಾಜದಲ್ಲಿ ಪ್ರವಾದಿ ಮುಹಮ್ಮದ್ (ಸ) ರ ಆದರ್ಶದ ಔಚಿತ್ಯ ಕೃತಿ ಬಿಡುಗಡೆ, ಜಿಲ್ಲಾ ಮಟ್ಟದ ಸ್ಪರ್ಧೆ, ಚಿಂತಕರು ಮತ್ತು ಬುದ್ಧಿಜೀವಿಗಳೊಂದಿಗೆ ಚರ್ಚೆ, ಮಹಿಳೆಯರ ವಿಶೇಷ ಸಭೆಗಳು, ಸ್ಥಳೀಯ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರಿAದ ಸೀರತ್ ಕುರಿತ ವೀಡಿಯೊಗಳ ಪ್ರಚಾರ, ಆಸ್ಪತ್ರೆ ಭೇಟಿ, ನೆರೆಹೊರೆ ಸ್ವಚ್ಛತೆ, ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯದ್ಯ ಎಸ್.ಎಂ.ಝುಬೇರ್ ಅಭಿಯಾನದ ಲೋಗೊ ಬಿಡುಗಡೆಗೊಳಿಸಿ, ಈ ಅಭಿಯಾನವು ಕೇವಲ ಮುಸ್ಲಿಮರಿಗೆ ಮಾತ್ರವಲ್ಲ, ಎಲ್ಲ ಧರ್ಮ, ಜಾತಿ, ಮತ್ತು ಸಮುದಾಯದ ಜನರಿಗೆ ತೆರೆದಿದೆ. ಇದು ನ್ಯಾಯ, ಕರುಣೆ, ಮತ್ತು ಸಾಮರಸ್ಯದ ಚಳವಳಿಯಾಗಿದ್ದು, ಭಟ್ಕಳದ ಜನತೆ ಒಗ್ಗಟ್ಟಿನಿಂದ ಭಾಗವಹಿಸಲು ಆಹ್ವಾನಿಸುತ್ತೇವೆ ಎಂದು ಕರೆ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳದ ಹಿರಿಯ ಮುಖಂಡ ಸೈಯ್ಯದ್ ಶಕೀಲ್ ಎಸ್.ಎಂ., ಮಾಜಿ ಅಧ್ಯಕ್ಷ ಮುಜಾಹಿದ್ ಮುಸ್ತಫಾ,ಮುಖಂಡರಾದ ಮೌಲಾನ ಝಿಯಾವುರ್ರಹ್ಮಾನ್ ನದ್ವಿ, ಉಪಸ್ಥಿತರಿದ್ದರು.

About The Author

error: Content is protected !!