ಭಟ್ಕಳ: ನ್ಯಾಯಾಲಯಗಳಲ್ಲಿ ಬಾಕಿ ಇರುವ ವಿವಿಧ ಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ, ಶೀಘ್ರ ಹಾಗೂ ಸ್ನೇಹಪೂರ್ಣವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ಜನವರಿ 2ರಿಂದ 90 ದಿನಗಳ ಕಾಲ “ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 2.0” ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದಂತೆ ಈ ಅಭಿಯಾನ ನಡೆಯಲಿದ್ದು, ಈ ಕುರಿತು ಭಟ್ಕಳ ತಾಲೂಕು ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಕಾಂತ ಕುರಣೆ ಮಾಹಿತಿ ನೀಡಿದ್ದಾರೆ.
ಅಭಿಯಾನದಡಿ ವೈವಾಹಿಕ ಹಾಗೂ ಕೌಟುಂಬಿಕ ವ್ಯಾಜ್ಯಗಳು, ಮೋಟಾರು ವಾಹನ ಅಪಘಾತ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ವಾಣಿಜ್ಯ ಮತ್ತು ಸೇವಾ ವ್ಯಾಜ್ಯಗಳು, ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಗ್ರಾಹಕ ವ್ಯಾಜ್ಯಗಳು, ಪಾಲುದಾರಿಕೆ ಹಾಗೂ ಭೂಸ್ವಾಧೀನ ಪ್ರಕರಣಗಳನ್ನು ರಾಜೀ ಸಂಧಾನ (ಮಧ್ಯಸ್ಥಿಕೆ) ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸಂಧಾನಕ್ಕೆ ಇಚ್ಛಿಸುವವರು ನ್ಯಾಯಾಲಯದ ಮೂಲಕ ತಮ್ಮ ಪ್ರಕರಣಗಳನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಸೂಚಿಸಬಹುದು. ನಂತರ ಉಭಯ ಪಕ್ಷಗಳನ್ನು ಕರೆಸಿ, ಭಟ್ಕಳ ತಾಲೂಕು ನ್ಯಾಯಾಲಯ ಸಮುಚ್ಚಯದಲ್ಲಿರುವ ತಾಲೂಕು ಕಾನೂನು ಸೇವಾ ಸಮಿತಿಯ ಆವರಣದ ಮಧ್ಯಸ್ಥಿಕೆ ಕೇಂದ್ರದಲ್ಲಿ ಸಂಧಾನ ಪ್ರಕ್ರಿಯೆ ನಡೆಸಲಾಗುತ್ತದೆ.
ಉಭಯ ಪಕ್ಷಗಳಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ತೀರ್ಮಾನವಾಗುವುದರಿಂದ ವಿವಾದವೂ ಬಗೆಹರಿಯುತ್ತದೆ, ಬಾಂಧವ್ಯವೂ ಉಳಿಯುತ್ತದೆ. ಕಡಿಮೆ ವೆಚ್ಚದಲ್ಲಿ ಶೀಘ್ರ ತೀರ್ಮಾನಕ್ಕೆ ಇದು ಉತ್ತಮ ಅವಕಾಶವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಭಟ್ಕಳ ತಾಲೂಕು ನ್ಯಾಯಾಲಯದಲ್ಲಿರುವ ತಾಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ