ಭಟ್ಕಳ: ವಿಶ್ವದ ಮೂಲೆ ಮೂಲೆಗಳಲ್ಲಿರುವ ಕನ್ನಡಿಗರು ಸೇರಿದಂತೆ 6000 ಕವಿಗಳು ಭಾಗವಹಿಸಿದ್ದ ಅಂತರಾಷ್ಟ್ರೀಯ ಮಟ್ಟದ ಕವನ ಸ್ಪರ್ಧೆಯಲ್ಲಿ ನಾಡಿನ ಹೆಸರಾಂತ ಕವಿ ಶ್ರೀಧರ ಶೇಟ್ ಶಿರಾಲಿಯವರು ದ್ವಿತೀಯ ಸ್ಥಾನ ಗಳಿಸಿ ಅಮೋಘ ಸಾಧನೆ ಮಾಡಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಸಪ್ನಾ ಬುಕ್ ಸ್ಟಾಲ್ ಮತ್ತು ಇಂಡಿಯನ್ ಪೊಯೆಟ್ರಿ ಸೊಸೈಟಿ ಯವರು ‘ಕನ್ನಡ ಕಾವ್ಯೋತ್ಸವ'( ಸಂಚಿಕೆ-2) ಕವನ ಸ್ಪರ್ಧೆಯನ್ನು ಆಯೋಜಿಸಿದ್ದರು. ಈ ಸ್ಪರ್ಧೆಗೆ ಕಳುಹಿಸಲ್ಪಟ್ಟ 6000 ಕವನಗಳಲ್ಲಿ ಶ್ರೀಧರ ಶೇಟ್ ಶಿರಾಲಿಯವರ ‘ಬಸ್ ಸ್ಟ್ಯಾಂಡ್ ಮತ್ತು ಅವಳು’ದ್ವಿತೀಯ ಸ್ಥಾನ ಗಳಿಸಿದೆ. ಈ ಸ್ಪರ್ಧೆಯ ವಿಶೇಷತೆ ಮತ್ತು ಸವಾಲು ಎಂದರೆ ಕವಿಯಾದವನು ಕೇವಲ ಹದಿನೈದು ಸಾಲಗಳಲ್ಲಿ ತನ್ನ ಭಾವನೆಗಳನ್ನು ಕಾವ್ಯರೂಪದಲ್ಲಿ ಅಭಿವ್ಯಕ್ತಿಪಡಿಸಬೇಕು.
ಈಗಾಗಲೇ ನಾಡಿನಾದ್ಯಂತ ತಮ್ಮ ಪ್ರಬುದ್ಧ ಕವನಗಳಿಗಾಗಿ ಶ್ರೀಧರ ಶೇಟ್ ಶಿರಾಲಿಯವರು ಹಲವಾರು ಪ್ರಶಸ್ತಿ ಮತ್ತು ಬಹುಮಾನಗಳನ್ನು ಗಳಿಸಿದ್ದಾರೆ. ಇದೇ ಕವನವು ‘ಕರಾವಳಿ ಮುಂಜಾವು’ ದಿನಪತ್ರಿಕೆ ಏರ್ಪಡಿಸುವ ‘ದೀಪಾವಳಿ ವಿಶೇಷಾಂಕ’ದ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಬೆಂಗಳೂರಿನ ಸಂಕ್ರಮಣ ಪ್ರಕಾಶನದವರು ಏರ್ಪಡಿಸುವ ಸಂಕ್ರಮಣ ಕಾವ್ಯ ಸ್ಪರ್ಧೆಯಲ್ಲಿ ಇವರ ‘ನಮ್ಮವರು’ ಮತ್ತು ‘ಹಸಿವು ಸಾಯುವುದಿಲ್ಲ’ ಎಂಬ ಕವನಗಳು ಕ್ರಮವಾಗಿ ಎರಡು ಬಾರಿ ‘ಸಂಕ್ರಮಣ ಕಾವ್ಯ ಪ್ರಶಸ್ತಿ’ಯನ್ನು ಪಡೆದುಕೊಂದಡಿವೆ.

ಇವರ ‘ಬೇಲಿಯ ಹೂವು’ಎಂಬ ಪ್ರಸಿದ್ಧ ಮಕ್ಕಳ ಕವನವು ಐಸಿಎಸ್ಸಿ ಪಠ್ಯಕ್ರಮದ ಐದನೇ ತರಗತಿಯ ‘ಕನ್ನಡ ಚಂದನ’ ಪಠ್ಯಪುಸ್ತಕದಲ್ಲಿ ಅಳವಡಿಸಲ್ಪಟ್ಟಿದೆ. ಕಾರವಾರ ಆಕಾಶವಾಣಿ ಮತ್ತು ಬೆಂಗಳೂರಿನ ‘ಚಂದನ ವಾಹಿನಿ’ಯಲ್ಲಿ ಇವರ ಕವನಗಳು ಬಿತ್ತರಗೊಂಡಿವೆ. ಭಟ್ಕಳ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿರುವ ಇವರ ಹಲವಾರು ಕವನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಭಟ್ಕಳದ ಜಾಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಅಧ್ಯಾಪಕರಾಗಿರುವ ಇವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ‘ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ’ ಕರ್ನಾಟಕ ಸರ್ಕಾರವು ಗೌರವಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಮಾಸ್ಕೇರಿ ಸಾಹಿತ್ಯಾರಾಧನಾ ವೇದಿಕೆ ಮತ್ತು ಸಾಹಿತ್ಯ ಸಂಚಯ ಶಿರಸಿ ಇವರು ‘ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದ್ದಾರೆ. ಇವರು ಏಳಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ಕನ್ನಡ ಸರಸ್ವತ ಲೋಕಕ್ಕೆ ನೀಡಿದ್ದಾರೆ.
ಇವರ ಈ ಸಾಧನೆಗೆ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆ, ಗೌರವ ಕಾರ್ಯದರ್ಶಿ ಪಿ. ಆರ್. ನಾಯ್ಕ, ಭಟ್ಕಳ ತಾಲೂಕ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಸೇರಿದಂತೆ ನಾಡಿನ ಹಿರಿಯ ಸಾಹಿತಿಗಳು ಮತ್ತು ಸಂಘ ಸಂಸ್ಥೆಗಳ ಮುಖ್ಯಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ