ಯಕ್ಷಗಾನ ಹಿಮ್ಮೇಳದ ಪ್ರಸಿದ್ಧ ಕಲಾವಿದ, ಮದ್ದಳೆ ಮಾಂತ್ರಿಕ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕರ್ಕಿ ಪ್ರಭಾಕರ ಭಂಡಾರಿಯವರು ಅಗಲಿರುವುದು ಉತ್ತರ ಕನ್ನಡ ಜಿಲ್ಲೆಯ ಮಾತ್ರವಲ್ಲ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ. ಇವರು ಮೂರ್ತಿ ಕಲಾವಿದರಾಗಿಯೂ ಖ್ಯಾತಿ ಗಳಿಸಿದ್ದರು. ಭಾಗವತರ ಹಾಡಿಗೆ ಅನುಗುಣವಾಗಿ ಮದ್ದಳೆ ನುಡಿಸುವಲ್ಲಿ ಇವರು ನೈಪುಣ್ಯತೆ ಸಾಧಿಸಿದ್ದರು. ದೇಶದ ಬಹುತೇಕ ಎಲ್ಲ ರಾಜ್ಯಗಳನ್ನೂ ಸುತ್ತಾಡಿದ್ದಾರೆ. ಜೊತೆಗೆ ಬೆಹರಿನ್, ಇಂಗ್ಲೆಂಡ್, ಬಾಂಗ್ಲಾ ದೇಶ, ನೇಪಾಳ ಮೊದಲಾದ ವಿದೇಶಗಳ ಸಂಚಾರ ಮಾಡಿ ಅಲ್ಲಿ ಮದ್ದಳೆಯ ನಾದವನ್ನು ಬಿತ್ತರಿಸಿದ ಮೊದಲ ಪ್ರಮುಖ ವ್ಯಕ್ತಿಯೂ ಹೌದು.
ಸಾಹಿತ್ಯ ಸಾಂಸ್ಕೃತಿ ಸಂಘಟನೆಗಳ ಜೊತೆಗೆ ಆಪ್ತವಾಗಿದ್ದರು. ಪ್ರಭಾಕರ ಭಂಡಾರಿಯವರದ್ದು ಅಪರೂಪದ ಪ್ರತಿಭೆ.
ಪಾಂಡುರಂಗ ಭಂಡಾರಿ, ಹೊನ್ನಮ್ಮರ ಮಗನಾಗಿ ೧೯೪೦ ರಲ್ಲಿ ಜನಿಸಿದ ಪ್ರಭಾಕರ ಭಂಡಾರಿಯವರು ಕಲಿತಿರುವುದು ನಾಲ್ಕನೇ ತರಗತಿಯಾದರೂ ಯಕ್ಷಗಾನ ರಂಗಭೂಮಿಯಲ್ಲಿ ಇವರನ್ನು ಮೀರಿಸುವವರಿಲ್ಲ.
ಆರಂಭದಲ್ಲಿ ಕುಮಟಾದ ರಾಮನಾಥ ಯಕ್ಷಗಾನ ಮಂಡಳಿಯಿಂದ ತೊಡಗಿ, ಗುಂಡಬಾಳಾ, ಅಮೃತೇಶ್ವರಿ ಮೇಳ, ಸಾಲಿಗ್ರಾಮ ಮೇಳ, ಇಡಗುಂಜಿ ಮೇಳ ಹೀಗೆ ದುಡಿದರು. ಖ್ಯಾತ ಭಾಗವತರುಗಳಾದ ಜನಾರ್ಧನ ಹೆಬ್ಬಾರ, ನಾವುಡರು, ಉಪ್ಪೂರು ನೆಬ್ಬೂರು, ಕಡತೋಕಾ ಮಂಜುನಾಥ, ಸುಬ್ರಹ್ಮಣ್ಯ ಧಾರೇಶ್ವರ, ಹೊಸ್ತೋಟ ಭಾಗವತರುಗಳ ಜೊತೆಗೆ ಧ್ವನಿ ಸಾಂಗತ್ಯದಲ್ಲೇ ಮಾತಾಡಿದವರು.
ಅಂದಿನ ಶ್ರೇಷ್ಟ ಕಲಾವಿದರಾದ ತಿಮ್ಮಪ್ಪ ನಾಯ್ಕ ಹಾಗೂ ಕಿನ್ನೂರು ನಾರಾಯಣ ಹೆಗಡೆ, ಪ್ರಭಾವದಿಂದಾಗಿ ಚಂಡೆವಾದನದಿಂದ ಮದ್ದಲೆವಾದನದತ್ತ ಹೊರಳಿದ್ದು ಇತಿಹಾಸ.
ಚಂಡೆ ವಾದನ, ತಾಸ್ಮಾರು, ಡೋಳು, ಶಹನಾಯಿ ವಾದ್ಯಗಳಲ್ಲಿ ಪರಿಣತಿ ಇದ್ದರೂ ಕೂಡ, ಸ್ಪಷ್ಟ ವಾದನ, ಸ್ಪುಟವಾದ ಪೆಟ್ಟು ಮತ್ತು ಮೆದುವಾದ ಹೊರಳಿಕೆಯಿಂದಾಗಿ ಮೃದಂಗ ವಾದನದಲ್ಲಿ ಕಲಾತ್ಮಕ ಉತ್ತುಂಗ ತಲುಪಿದ ಪ್ರತಿಭಾಸಂಪನ್ನರೆಂದು ಇವರನ್ನು ಅನೇಕ ಸಂಘ ಸಂಸ್ಥೆಗಳು ಗುರ್ತಿಸಿ ಪ್ರಶಸ್ತಿ ನೀಡಿವೆ. ಮುಖ್ಯವಾಗಿ ೨೦೦೨ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಕಲಾರಂಗ ಸುವರ್ಣ ಪುರಸ್ಕಾರ, ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿ ಹೀಗೆ ಸಂದಿವೆ.
ಯಮುನಾ ಗಾಂವ್ಕರ್
ಸಿಪಿಐಎಂ
ಜಿಲ್ಲಾ ಕಾರ್ಯದರ್ಶಿ

More Stories
ಕಾರವಾರದಲ್ಲಿ ಜೈಲು ಸಿಬ್ಬಂದಿ ಮೇಲೆ ಕೈದಿಗಳ ಹಲ್ಲೆ | ಮಾದಕ ವಸ್ತುಗಾಗಿ ಬೇಡಿಕೆ.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ
ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನ ಬೆಳ್ಳಿ ಹಬ್ಬದ ಸಂಭ್ರಮ