ಭಟ್ಕಳ: ನಮ್ಮ ಸನಾತನ ಸಂಸ್ಕೃತಿ ಮತ್ತು ಸಂಸ್ಕಾರಗಳು ತಾಯಿಯಂದಿರಿಂದಾಗಿ ಪೀಳಿಗೆಯಿಂದ ಪೀಳಿಗೆಗೆ ಹರಿದು ಬರುತ್ತಿದೆ.ತಾಯಿಯಂದಿರು ತಮ್ಮ ಮಕ್ಕಳಿಗೆ ಉಚಿತವಾದ ಆಹಾರ- ಆಚಾರ- ವಿಚಾರ- ಸಂಸ್ಕಾರಗಳನ್ನು ತಿಳಿಸಿಕೊಡುವುದರಿಂದ ಅದು ಶಾಶ್ವತವಾಗಿ ಉಳಿದುಕೊಂಡಿದೆ.ತಾಯಿ ಎಂದರೆ ಜ್ಯೋತಿ ಸ್ವರೂಪ.ತಾಯಿಯಂದಿರಿಗೆ ಗೌರವ ನೀಡಬೇಕು.ಹಣ ಮತ್ತು ಅಂತಸ್ತಿನಿಂದ ಸಮಾಧಾನ ಮತ್ತು ಸುಖವನ್ನು ಪಡೆಯಲು ಸಾಧ್ಯವಿಲ್ಲ. ನಮ್ಮ ಸಂಸ್ಕಾರಗಳು ಉತ್ತಮವಾಗಿದ್ದರೆ ಮಾತ್ರ ನಮ್ಮ ಸರ್ವಾಂಗೀಣ ವಿಕಾಸವಾಗುತ್ತದೆ ಎಂದು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಕ್ಷೇತ್ರ ಕರ್ಕಿ ದೈವಜ್ಞ ಮಠಾಧೀಶ ಪರಮಪೂಜ್ಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿಗಳವರು ಹೇಳಿದರು.
ಅವರು ‘ದೈವಜ್ಞ ದರ್ಶನ’ ಕಾರ್ಯಕ್ರಮದ ನಿಮಿತ್ತ ನಗರದ ಸೋನಾರಕೇರಿಯ ಶ್ರೀ ಗಣಪತಿ, ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ದೈವಜ್ಞ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ದೈವಜ್ಞ ಬ್ರಾಹ್ಮಣ ಸಮಾಜದ ಸರ್ವಾಂಗೀಣ ವಿಕಾಸ, ಸಮಾಜ ಸಂಘಟನೆ ಹಾಗೂ ಧಾರ್ಮಿಕ ಭಾವನೆಗಳ ಸಂವರ್ಧನೆಗಾಗಿ ನಾಲ್ಕು ದಶಕಗಳ ಹಿಂದೆ ಶ್ರೀಕ್ಷೇತ್ರ ಕರ್ಕಿಯಲ್ಲಿ ಸ್ಥಾಪಿಸಲಾದ ದೈವಜ್ಞ ಶ್ರೀ ಮಠವು ತನ್ನ ಕಾರ್ಯ ವ್ಯಾಪ್ತಿಯಲ್ಲಿ ಕರ್ತವ್ಯಗಳನ್ನು ಪೂರೈಸುತ್ತಾ ಮುಂದು ವರೆಯುತ್ತಿದ್ದು, ಇದೀಗ ದೇವರನ್ನು ತಿಳಿದು ದೈವಯಜ್ಞ ಮುಂತಾದವುಗಳನ್ನು ಆಚರಿಸುತ್ತಾ ದೈವಜ್ಞರೆಂದು ಖ್ಯಾತರಾದ ಸಮಾಜ ಬಾಂಧವರನ್ನು ಸಂದರ್ಶಿಸಲು ಹಾಗೂ ತಮ್ಮ ಉತ್ತರಾಧಿಕಾರಿಯಾದ ಪರಮಪೂಜ್ಯ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿಗಳವರನ್ನು ಪರಿಚಯಿಸಲು, ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರು ‘ದೈವಜ್ಞ ದರ್ಶನ’ ಎಂಬ ಕಾರ್ಯಕ್ರಮವನ್ನು ಕರ್ನಾಟಕದಾದ್ಯಂತ ಹಮ್ಮಿಕೊಂಡಿರುತ್ತಾರೆ.
ಧರ್ಮಸಭೆಯಲ್ಲಿ ಕಿರಿಯ ಶ್ರೀಗಳಾದ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿಗಳವರು ಆಶೀರ್ವಚನ ನೀಡಿ, ಸತ್ಯ ಪ್ರೀತಿ ವಿನಯಗಳಿಗೆ ಮಾತ್ರ ಜಗತ್ತಿನಲ್ಲಿ ಗೌರವಿದೆ. ನಾವು ಬಾಗಿ ಭಾಗ್ಯವಂತರಾಗಬೇಕು. ಅಹಂಕಾರವನ್ನು ಬಿಡಬೇಕು. ಅಹಂಕಾರವು ನಮ್ಮ ಪ್ರಗತಿಗೆ ದೊಡ್ಡ ಅಡ್ಡಿಯಾಗಿದೆ ಎಂದು ನುಡಿದರು.
ನಗರದ ಸಂಶುದ್ದೀನ್ ಸರ್ಕಲ್ ನಿಂದ ಸೋನಾರ ಕೇರಿಯಲ್ಲಿರುವ ದೈವಜ್ಞ ಸಭಾಭವನದವರೆಗೆ ಬೈಕ್ ರ್ಯಾಲಿ, ಮಹಿಳೆಯರ ನೃತ್ಯ ಭಜನೆ ಮತ್ತು ಶೋಭಾಯಾತ್ರೆಯ ಮೂಲಕ ಸ್ವಾಮೀಜಿದ್ವಯರನ್ನು ಬರಮಾಡಿಕೊಳ್ಳಲಾಯಿತು. ನಂತರ ನಡೆದ ಧರ್ಮ ಸಭೆಯಲ್ಲಿ ಶ್ರೀ ವೆಂಕಟೇಶ ಸಂಸ್ಥೆಯ ಅಧ್ಯಕ್ಷ ಸುಧಾಕರ್ ಪಾಂಡುರಂಗ ಶೇಟ್ ದಂಪತಿಗಳು ಸ್ವಾಮೀಜಿಯವರ ಪಾದ ಪೂಜೆಯನ್ನು ನೆರವೇರಿಸಿದರು. ದೈವಜ್ಞ ಸಮಾಜದ ವತಿಯಿಂದ ಗುರುಗಳಿಗೆ ಗುರುಕಾಣಿಕೆ ಅರ್ಪಿಸಲಾಯಿತು.ಮುರುಡೇಶ್ವರದ ರಾಮದಾಸ್ ಶೇಟ್ ಮತ್ತು ಜಿಲ್ಲಾ ದೈವಜ್ಞ ವಾಹಿನಿಯ ಅಧ್ಯಕ್ಷೆ ಶಕುಂತಲಾ ರಾಮದಾಸ ಶೇಟ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ನಿವೃತ್ತ ಬ್ಯಾಂಕ್ ಮ್ಯಾನೇಜರ್ ಗುರುನಾಥ ಕೊಲ್ಲೆ ಪ್ರಾಸ್ತವಿಕ ಮಾತುಗಳ ನ್ನಾಡಿದರು. ಸುನೀಲ ರತ್ನಾಕರ ಶೇಟ್ ಸ್ವಾಗತಿಸಿದರೆ, ಸಾಹಿತಿ ಶ್ರೀಧರ ಶೇಟ್ ಶಿರಾಲಿ ಕಾರ್ಯಕ್ರಮ ನಿರೂಪಿಸಿದರು.
ಸ್ವಾಮೀಜಿಗಳವರು ಸುಧಾಕರ್ ಶೇಟ್ ಭಟ್ಕಳ,ಸತ್ಯನಾರಾಯಣ ನರಸಿಂಹ ಶೇಟ್ ಶಿರಾಲಿ, ರಾಮದಾಸ ಶೇಟ್ ಮುರುಡೇಶ್ವರ ಮತ್ತು ಸಿಎ ಮಾಡಿದ ಭಟ್ಕಳದ ಪ್ರಥಮ ದೈವಜ್ಞ ಯುವತಿ ಅರ್ಚನಾ ಮಂಜುನಾಥ ಶೇಟ್ ಅವರನ್ನು ಸನ್ಮಾನಿಸಿದರು. ಜ್ಞಾನೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷೆ ಪರಿಮಳ ರಾಜಶೇಖರ ಶೇಟ್ ವಂದಿಸಿದರು.ಸಂದೀಪ್ ಕೊಲ್ಲೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸೌಮ್ಯ ಶೇಟ್, ಸುಮಿತ ಕೊಲ್ಲೆ, ಅನಿತಾ ಶೇಟ್, ಅನಸೂಯ ಶೇಟ್,ಪರಿಮಳಾ ಶೇಟ್ ಪ್ರಾರ್ಥನೆ ಹಾಡಿದರು. ದೀಪಾ ಕೊಲ್ಲೆ, ವಿನಯಾ ಶೇಟ್, ನರ್ಮದಾ ಶೇಟ್ ಸ್ವಾಗತ ಗೀತೆ ಪ್ರಸ್ತುತಪಡಿಸಿದರು.
ಆ ಬಳಿಕ ಗುರುಗಳಿಂದ ಫಲ ಮಂತ್ರಾಕ್ಷತೆ ವಿತರಣೆ ಮತ್ತು ಪ್ರಸಾದ ಭೋಜನ ವಿತರಣೆ ನಡೆಯಿತು.ನವ ದುರ್ಗೆಯರ ವೇಷಭೂಷಣಗಳನ್ನು ಹಾಕಿದ ಪುಟ್ಟ ಮಕ್ಕಳು ಮತ್ತು ಯಕ್ಷಗಾನ ನೃತ್ಯವನ್ನು ಮಾಡಿದ ಯುವತಿಯರು ಮೆರವಣಿಗೆಯಲ್ಲಿ ಗಮನ ಸೆಳೆದರು. ಭಟ್ಕಳ ತಾಲೂಕಿನ ಶಿರಾಲಿ, ಮುರುಡೇಶ್ವರ, ಬೈಲೂರು ಮತ್ತು ಗೊರ್ಟೆಯ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ