ರಾಜ್ಯದ ಅತಿ ಹೆಚ್ಚಿನ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಭಾಜನ ರಾಗಿರುವ, ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನವರಿ 10ರ ಶನಿವಾರ ವಿಜಯೋತ್ಸವ
ಕಾರ್ಯಕ್ರಮ ದೇವಾಲಯಗಳು ವಿಶೇಷ ಪೂಜೆ..
ಸಾಮಾಜಿಕ ನ್ಯಾಯದ ಹರಿಕಾರ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜು ಅರಸು ಅವರನ್ನು ಹೊರತುಪಡಿಸಿದರೆ ಅತಿ ಹೆಚ್ಚಿನ ಅವಧಿಗೆ ಮುಖ್ಯಮಂತ್ರಿಗಳಾಗಿ ದಕ್ಷತೆಯಿಂದ ಪ್ರಾಮಾಣಿಕ ಆಡಳಿತ ನೀಡಿರುವ ಅಹಿಂದ, ಶೋಷಿತ ವರ್ಗಗಳ ನಾಯಕರಾದ ಸಿದ್ದರಾಮಯ್ಯ ಅವರಿಗೆ ಶುಭ ಕೋರಿ ಇದೇ ಜನವರಿ 10ನೇ ತಾರೀಕು ಶನಿವಾರ ಕೆ.ಆರ್.ಪೇಟೆ ಪಟ್ಟಣದಲ್ಲಿ ತಾಲೂಕು ಕಾಂಗ್ರೆಸ್ ಸಮಿತಿಯ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್ ಹೇಳಿದರು. ಅವರು ಕೃಷ್ಣರಾಜಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಡಿ ದೇವರಾಜ ಅರಸು ಅವರು ಹೊಂದಿದ್ದ ದಾಖಲೆಯನ್ನು ಅಳಿಸಿ ಹಾಕಿ ಹೊಸ ದಾಖಲೆಯನ್ನು ನಿರ್ಮಾಣ ಮಾಡಿರುವ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಶುಭ ಕೋರಿ ಕೆ.ಆರ್.ಪೇಟೆ ಪಟ್ಟಣದ ಶ್ರೀ ಭ್ರಮರಾಂಭ ಚೆನ್ನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪಟ್ಟಣದ ಮೈಸೂರು ಚನ್ನರಾಯಪಟ್ಟಣ ರಸ್ತೆಯ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಪಟಾಕಿಗಳನ್ನು ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಲಾಗುವುದು. ನಂತರ ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಸಾಧುಗೋನಹಳ್ಳಿ ಬಳಿ ಇರುವ ಮಾತೃಭೂಮಿ ಉಚಿತ ಅನಾಥಾಶ್ರಮದಲ್ಲಿ ವಯೋವೃದ್ಧರು ಹಾಗೂ ಅನಾಥರಿಗೆ ವಿಶೇಷ ಊಟವನ್ನು ವಿತರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತಷ್ಟು ಜನಪರವಾದ ಆಡಳಿತ ನೀಡುವಂತೆ ಶಕ್ತಿ ನೀಡಲೆಂದು ನಾಡ ದೇವತೆ ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಲಾಗುವುದು ಎಂದು ತಿಳಿಸಿದ ಬಿ.ನಾಗೇಂದ್ರಕುಮಾರ್ ಸಿದ್ದರಾಮಯ್ಯನವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಶನಿವಾರದಂದು ನಡೆಯಲಿರುವ ಸಿದ್ದರಾಮಯ್ಯನವರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ನಾಗೇಂದ್ರಕುಮಾರ್ ಮನವಿ ಮಾಡಿದರು.
ಕೆಯುಐಡಿಎಫ್‍ಸಿ ಮಾಜಿ ಅಧ್ಯಕ್ಷರಾದ ಮತ್ತಿಘಟ್ಟ ಕೃಷ್ಣಮೂರ್ತಿ ಮಾತನಾಡಿ ಪಂಚ ಗ್ಯಾರಂಟಿಗಳನ್ನು ನೀಡುವ ಮೂಲಕ ಹಸಿವು ಮುಕ್ತ ಅಭಿವೃದ್ಧಿಯಿಂದ ಕೂಡಿರುವ ಕರ್ನಾಟಕ ರಾಜ್ಯವನ್ನು ನಿರ್ಮಾಣ ಮಾಡಿ ಇಡೀ ದೇಶವೇ ಮೆಚ್ಚುವಂತೆ ದಕ್ಷ ಪ್ರಾಮಾಣಿಕ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯ ಅವರು ಸತತವಾಗಿ ಮಂಡಿಸಿ 17ನೇ ಬಜೆಟ್ ಮಂಡನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚಿನ ಅವಧಿಯ ಆಡಳಿತ ನಡೆಸಿದ ಮುಖ್ಯಮಂತ್ರಿಗಳೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಡಿ. ದೇವರಾಜಅರಸು ಅವರ ದಾಖಲೆಯನ್ನು ಅಳಿಸಿಹಾಕಿ, ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಹೊಸ ಮನ್ವಂತರವನ್ನು ನಿರ್ಮಾಣ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಳಿದ ಅವಧಿಗೂ ಕೂಡ, ರಾಜ್ಯದ ಮುಖ್ಯಮಂತ್ರಿಗಳಾಗಿ ಆಡಳಿತ ನೀಡುವ ಮೂಲಕ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕೊಂಡೊಯ್ಯಲಿ ಎಂದು ಕೃಷ್ಣಮೂರ್ತಿ ಶುಭ ಹಾರೈಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ರಾಜಕೀಯ ಮುತ್ಸದ್ದಿಗಳಾದ ಎಲ್.ಪಿ.ನಂಜಪ್ಪ, ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮೂಡನಹಳ್ಳಿ ನಾಗೇಂದ್ರ, ತಾಲೂಕು ಪರಿಶಿಷ್ಟ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜಯ್ಯ, ಪುರಸಭೆ ಹಿರಿಯ ಸದಸ್ಯ ಡಿ.ಪ್ರೇಮಕುಮಾರ್, ಉದ್ಯಮಿ ಬಿ.ರಾಜಶೇಖರ್, ಮಂಡ್ಯ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಕಿಹೆಬ್ಬಾಳು ದಿವಾಕರ, ಮಹಿಳಾ ಕಾಂಗ್ರೆಸ್ ನಾಯಕರಾದ ಆದಿಹಳ್ಳಿ ಮೀನಾಕ್ಷಿ, ಸೌದಿ ಫಯಾಜ್ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

More Stories
ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಪ್ರಗತಿ ಉತ್ಸವ-2026
ಉಕ್ಕಡಗಾತ್ರಿಯ ಕರಿಬಸವ ಅಜ್ಜಯ್ಯನ ನೂತನ ದೇವಸ್ಥಾನ ಲೋಕಾರ್ಪಣೆ
ಶ್ರೀ ಪಂಚಭೂತೇಶ್ವರ ಸುಕ್ಷೇತ್ರದಲ್ಲಿ ನಡೆದ ಮಹಾಶಿವರಾತ್ರಿಯ ಅಮಾವಾಸ್ಯೆ ಜಾಗರಣೆ ಕಾರ್ಯಕ್ರಮ