January 14, 2026

ಪುಷ್ಪಾಂಜಲಿ ನಾಟ್ಯ ಕೇಂದ್ರ ದಿಂದ`ನೃತ್ಯೋತ್ಸವ’ ಕಾರ್ಯಕ್ರಮ

ಹೊನ್ನಾವರ: ವಿದ್ಯಾರ್ಥಿಗಳು ಶಾಲೆಯ ಪಠ್ಯದ ಜೊತೆಗೆ ಒಂದು ಕಲಾಪ್ರಕಾರವನ್ನು ಆಯ್ದುಕೊಂಡು ಸಾಧನೆ ಮಾಡಿದರೆ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯ ಎಂದು ಪತ್ರಕರ್ತ ಎಚ್.ಎಂ.ಮಾರುತಿ ಹೇಳಿದರು.


ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ಪುಷ್ಪಾಂಜಲಿ ನಾಟ್ಯ ಕೇಂದ್ರ ಆಯೋಜಿಸಿದ `ನೃತ್ಯೋತ್ಸವ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ನೃತ್ಯಗುರು ವಿದುಷಿ ಪ್ರಮಿಳಾ ಮತ್ತು ಎಲ್.ಜಿ.ಭಟ್ ದಂಪತಿ ಪುಷ್ಪಾಂಜಲಿ ನಾಟ್ಯ ಕೇಂದ್ರದ ಮೂಲಕ ಮಕ್ಕಳಲ್ಲಿ ಭರತನಾಟ್ಯದ ಕುರಿತು ಆಸಕ್ತಿ ಮೂಡಿಸಿ ತರಬೇತಿ ನೀಡುತ್ತಿದ್ದಾರೆ. ನೃತ್ಯವು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗುವ ಜೊತೆಗೆ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಭಾರತೀಯ ಕಲಾ ಪರಂಪರೆಯಲ್ಲಿ ಭರತನಾಟ್ಯವು ಮಹತ್ವವಾದ ಸ್ಥಾನವನ್ನು ಪಡೆದಿದೆ ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ಡಾ. ಮಂಜುಳಾ ಯುವರಾಜ ಮಾತನಾಡಿ ಯುವಜನರು ಜಂಕ್ ಫುಡ್‌ನಿಂದ ದೂರ ಉಳಿದು ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ಸೇವಿಸಬೇಕು. ಮಕ್ಕಳು ಮೊಬೈಲ್ ಫೋನ್ ಬಳಸುವುದನ್ನು ಕಡಿಮೆ ಮಾಡಿ ಭರತನಾಟ್ಯದಂತಹ ಕಲಾ ಪ್ರಕಾರವನ್ನು ಆಯ್ದುಕೊಳ್ಳಬೇಕು. ಭರತನಾಟ್ಯವು ಹೆಮ್ಮೆಯ ಪರಂಪರೆ. ಈ ಕಲೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ಕೊಡುವ ಕೆಲಸ ನಡೆಯುತ್ತಿದೆ. ಎಂದರು.


ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡಿ ಭರತನಾಟ್ಯವು ರಾಗ, ತಾಳ, ಲಯ, ಭಕ್ತಿ, ಏಕಾಗ್ರತೆಯನ್ನು ಹೊಂದಿರುವ ಕಲೆಯಾಗಿದೆ. ಶಿಕ್ಷಕಿಯಾಗಿ, ಸಿಆರ್‌ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಮಿಳಾ ಅವರು ನಾಟ್ಯಕೇಂದ್ರವನ್ನು ಹುಟ್ಟುಹಾಕಿದ್ದಾರೆ. ತಾಲೂಕಿನ ಮಕ್ಕಳು ಭರತನಾಟ್ಯವನ್ನು ಕಲಿಯಬೇಕು ಎಂಬ ತುಡಿತದೊಂದಿಗೆ ಮಕ್ಕಳಿಗೆ ವಿದ್ಯೆಯನ್ನು ಧಾರೆ ಎರೆಯುತ್ತಿದ್ದಾರೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯೂ ಎಜ್ಯುಕೇಷನ್ ಸೊಸೈಟಿ ಅಧ್ಯಕ್ಷ ರಘುನಾಥ ಪೈ ಮಾತನಾಡಿ, ಇತ್ತೀಚೆಗೆ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಭರತನಾಟ್ಯ ಕಲೆಯನ್ನು ಆಯ್ದುಕೊಂಡು ಸಾಧನೆ ಮಾಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದರು.


ಪುಷ್ಪಾಂಜಲಿ ನಾಟ್ಯ ಕೇಂದ್ರದ ಸಂಚಾಲಕ ಎಲ್.ಜಿ.ಭಟ್ ಸ್ವಾಗತಿಸಿದರು. ಸುನೀಲ ಶೇಟ್ ವಂದಿಸಿದರು. ಭಾರತಿ ನಾಯ್ಕ, ಅನಿತಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ವಿದುಷಿ ಪ್ರಮಿಳಾ ಕೆ.ಎಸ್. ಅವರ ನೃತ್ಯ ಸಂಯೋಜನೆ ಮತ್ತು ನಿರ್ದೇಶನದಲ್ಲಿ ಭರತನಾಟ್ಯ ಪ್ರದರ್ಶನ ಜನಮನ ಸೆಳೆಯಿತು.

About The Author

error: Content is protected !!