ಭಟ್ಕಳ: ಸಾರ್ವಜನಿಕ ಸೇವೆಗಳನ್ನು ಇನ್ನಷ್ಟು ಸರಳ, ಪಾರದರ್ಶಕ ಹಾಗೂ ತ್ವರಿತಗೊಳಿಸುವ ಉದ್ದೇಶದಿಂದ ಭಟ್ಕಳ ತಾಲೂಕು ಆಡಳಿತ ಸೌಧದಲ್ಲಿ ಇ-ಸ್ಟ್ಯಾಂಪ್ ಹಾಗೂ ಡಿಜಿಟಲ್ ನೋಂದಣಿ ವ್ಯವಸ್ಥೆ ಕುರಿತ ಕಾರ್ಯಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಇಂಜಿನಿಯರ್ ಹಜರತ್ ಅಲಿ ಅವರು ಇ-ಸ್ಟ್ಯಾಂಪ್ ಹಾಗೂ ಡಿಜಿಟಲ್ ನೋಂದಣಿ ವ್ಯವಸ್ಥೆಯ ಕಾರ್ಯವಿಧಾನ ಕುರಿತು ವಿವರವಾದ ಮಾಹಿತಿ ನೀಡಿದರು. ಹೊಸ ವ್ಯವಸ್ಥೆಯಡಿ ಸ್ಟ್ಯಾಂಪ್ ಪೇಪರ್ ಖರೀದಿ, ನೋಂದಣಿ ಪ್ರಕ್ರಿಯೆ ಹಾಗೂ ದಾಖಲೆಗಳ ಸಂರಕ್ಷಣೆ ಸಂಪೂರ್ಣವಾಗಿ ಡಿಜಿಟಲ್ ಮಾಧ್ಯಮದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು. ಇದರಿಂದ ನಕಲಿ ಸ್ಟ್ಯಾಂಪ್ಗಳ ಬಳಕೆ, ಮಧ್ಯವರ್ತಿಗಳ ಅಕ್ರಮ ಹಸ್ತಕ್ಷೇಪ ಹಾಗೂ ಅನಗತ್ಯ ವಿಳಂಬಕ್ಕೆ ಕಡಿವಾಣ ಬೀಳಲಿದ್ದು, ಸಾರ್ವಜನಿಕರಿಗೆ ಕಡಿಮೆ ಸಮಯದಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ವಿಶ್ವಾಸಾರ್ಹ ಸೇವೆ ದೊರೆಯಲಿದೆ ಎಂದರು.
ಇ-ಸ್ಟ್ಯಾಂಪ್ ವ್ಯವಸ್ಥೆಯ ಪ್ರಮುಖ ಲಾಭಗಳ ಬಗ್ಗೆ ಮಾತನಾಡಿದ ಅವರು, ಸ್ಟ್ಯಾಂಪ್ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ ತಕ್ಷಣವೇ ಮಾನ್ಯತೆ ಪಡೆದ ಡಿಜಿಟಲ್ ಸ್ಟ್ಯಾಂಪ್ ಪಡೆಯಬಹುದಾಗಿದೆ. ಇದರಿಂದ ಸ್ಟ್ಯಾಂಪ್ ಪೇಪರ್ ಕೊರತೆ, ಕಪ್ಪು ಮಾರುಕಟ್ಟೆ ಹಾಗೂ ವಂಚನೆಗಳಿಗೆ ಅಂತ್ಯವಾಗಲಿದೆ. ಜೊತೆಗೆ ಡಿಜಿಟಲ್ ನೋಂದಣಿ ವ್ಯವಸ್ಥೆಯಿಂದ ದಾಖಲೆಗಳ ಭದ್ರತೆ ಹೆಚ್ಚಾಗಲಿದ್ದು, ಅಗತ್ಯವಿದ್ದಾಗ ಯಾವುದೇ ಸಮಯದಲ್ಲೂ ಪರಿಶೀಲನೆ ಹಾಗೂ ಮರುಪ್ರತಿಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಸರ್ಕಾರದ ಡಿಜಿಟಲೀಕರಣದ ಆಶಯದಂತೆ ಮುಂದಿನ ದಿನಗಳಲ್ಲಿ ಎಲ್ಲಾ ನೋಂದಣಿ ಸಂಬಂಧಿತ ಸೇವೆಗಳು ಸಂಪೂರ್ಣ ಡಿಜಿಟಲ್ ಆಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಭಟ್ಕಳ ಉಪನೊಂದಣಾಧಿಕಾರಿ ಫಾರುಖ್ ಅವರು ಉಪಸ್ಥಿತರಿದ್ದು, ನಾಗರಿಕರಿಗೆ ಈ ವ್ಯವಸ್ಥೆಯಿಂದ ದೊರೆಯುವ ಲಾಭಗಳ ಬಗ್ಗೆ ಮಾಹಿತಿ ನೀಡಿದರು. ಸ್ಟ್ಯಾಂಪ್ ಪೇಪರ್ಗಾಗಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲದೆ, ಆನ್ಲೈನ್ ಮೂಲಕ ಶುಲ್ಕ ಪಾವತಿಸಿ ತಕ್ಷಣವೇ ಮಾನ್ಯ ಇ-ಸ್ಟ್ಯಾಂಪ್ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಕಾರ್ಯಾಗಾರದಲ್ಲಿ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ಗ್ರಾಮ್ ಒನ್, ಬಾಪೂಜಿ ಸೇವಾ ಕೇಂದ್ರಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ