March 2, 2026

ಉದ್ಯೋಗ ಖಾತ್ರಿ ಯೋಜನೆಗೆ ಕತ್ತರಿ – ಬಡವರ ಹಕ್ಕು ಕಸಿಯುವ ಕೇಂದ್ರದ ಯತ್ನ

ಉಸ್ತುವಾರಿ ಸಚಿವ ಮಂಕಾಳ ವೈದ್ಯ ಆಕ್ರೋಶ

ಭಟ್ಕಳ: ಗ್ರಾಮೀಣ ಬಡವರ ಬದುಕಿನ ಆಸರೆಯಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲ ತತ್ವ ಹಾಗೂ ವ್ಯವಸ್ಥೆಯನ್ನೇ ಕೇಂದ್ರ ಸರ್ಕಾರ ಬದಲಾಯಿಸುವ ಮೂಲಕ ಬಡವರ ಹಕ್ಕುಗಳನ್ನು ಕಸಿಯಲು ಮುಂದಾಗಿದೆ ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ತೀವ್ರ ಆರೋಪ ಮಾಡಿದರು.


ಪಟ್ಟಣದ ಸಚಿವರ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಯೋಜನೆಯ ಬದಲಾವಣೆ ಕೇವಲ ಹೆಸರಿನ ಮಟ್ಟದಲ್ಲಿಲ್ಲ. ಇದರ ಸಂಪೂರ್ಣ ಸ್ವರೂಪವನ್ನೇ ಕೇಂದ್ರ ಸರ್ಕಾರ ಮರು ರೂಪಿಸಿದೆ. ಹಿಂದೆ ರಾಜ್ಯಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯುತ್ತಿದ್ದ ಯೋಜನೆ ಈಗ ದೆಹಲಿಯಿಂದ ನೇರವಾಗಿ ಆಯ್ಕೆ ಹಾಗೂ ನಿಯಂತ್ರಣಗೊಳ್ಳುತ್ತಿದೆ. ಇದರಿಂದ ಪಂಚಾಯಿತಿಗಳ ಅಧಿಕಾರ ಕಡಿತಗೊಂಡು, ಗ್ರಾಮೀಣ ಬಡವರಿಗೆ ಅನ್ಯಾಯವಾಗುತ್ತಿದೆ” ಎಂದು ಕಿಡಿಕಾರಿದರು.


ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಡವರಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ನೀಡುವ ಕಾನೂನಾತ್ಮಕ ಹಕ್ಕಾಗಿದ್ದು, ರೈತರ ಕೃಷಿ ಚಟುವಟಿಕೆಗಳು, ಜಲ ಸಂರಕ್ಷಣೆ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಜೀವಾಳವಾಗಿದೆ. ಆದರೆ ಇತ್ತೀಚಿನ ಬದಲಾವಣೆಗಳಿಂದ ಯೋಜನೆಯ ಮೂಲ ಉದ್ದೇಶವೇ ಮಸುಕಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.


“ರಾಜ್ಯದಲ್ಲಷ್ಟೇ ಅಲ್ಲ, ದೇಶದಾದ್ಯಂತ ಈ ಬದಲಾವಣೆಗಳಿಂದ ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದಲ್ಲೇ ಸುಮಾರು 1 ಕೋಟಿ 70 ಲಕ್ಷ ಮಹಿಳೆಯರು ಉದ್ಯೋಗ ಕಸಿಯುವ ಅಪಾಯ ಎದುರಿಸುತ್ತಿದ್ದಾರೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಇದು ದೊಡ್ಡ ಹೊಡೆತ. ಈ ಕ್ರಮವನ್ನು ಯಾವ ಕಾರಣಕ್ಕೂ ಒಪ್ಪಲಾಗದು,” ಎಂದು ಮಂಕಾಳ ವೈದ್ಯ ಹೇಳಿದರು.


ತೇಲಂಗಾಣದಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದ್ದರೆ, ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ನೀಡಬೇಕು. ಆದರೆ ಎಲ್ಲರಿಗೂ ಒಟ್ಟಾಗಿ ತೊಂದರೆ ಕೊಡುವುದು ಸರಿಯಲ್ಲ. ಬಡವರನ್ನು ಜೀತದಾಳುಗಳಂತೆ ಮಾಡಿ, ಅವರ ಶ್ರಮದ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದಲೇ ಈ ಬದಲಾವಣೆಗಳನ್ನು ತರಲಾಗುತ್ತಿದೆ ಎಂಬ ಅನುಮಾನವಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.


ಯೋಜನೆಯ ಹೆಸರಿನ ಬದಲಾವಣೆ ಹಾಗೂ ವ್ಯವಸ್ಥಾತ್ಮಕ ಪರಿವರ್ತನೆ ಕುರಿತ ಬಿಲ್ಲನ್ನು ಸಂಸತ್ತಿನಲ್ಲಿ ಸಮರ್ಪಕ ಚರ್ಚೆಗೆ ಅವಕಾಶ ನೀಡದೆ ಅಂಗೀಕರಿಸಿರುವುದು ಪ್ರಜಾಪ್ರಭುತ್ವದ ಮೂಲ ಮೌಲ್ಯಗಳಿಗೆ ವಿರುದ್ಧವಾಗಿದೆ. “ಜನಪರ ಯೋಜನೆಗಳ ಬಗ್ಗೆ ದೇಶದ ಜನಪ್ರತಿನಿಧಿಗಳಲ್ಲಿ ಸಮಗ್ರ ಚರ್ಚೆ ನಡೆಯಬೇಕಿತ್ತು. ಆದರೆ ಅದಕ್ಕೆ ಅವಕಾಶ ನೀಡದೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ,” ಎಂದು ಅವರು ಟೀಕಿಸಿದರು.
ಕಳೆದ 11 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಹಲವು ನೀತಿಗಳು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಮಾರುವ ದಿಕ್ಕಿನಲ್ಲಿ ಸಾಗುತ್ತಿವೆ. ಇದೇ ಧೋರಣೆ ಉದ್ಯೋಗ ಖಾತ್ರಿ ಯೋಜನೆಗೂ ಅನ್ವಯಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದರು.


ಸುದ್ದಿಗೋಷ್ಠಿಯಲ್ಲಿ ತಾಲೂಕು ಗ್ಯಾರಂಟಿ ಅಧ್ಯಕ್ಷ ರಾಜು ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಜಿವಿಸಿಸಿ ಜಾಲಿ ಅಧ್ಯಕ್ಷ ಮಂಜಪ್ಪ ನಾಯ್ಕ, ಇರ್ಷಾದ್, ರಮೇಶ್ ನಾಯ್ಕ, ಈಶ್ವರ ಮೊಗೇರ, ಜನತಾ ಸೊಸೈಟಿ ನಿರ್ದೇಶಕ ವೆಂಕಟ್ರಮಣ ಮೊಗೇರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಉದ್ಯೋಗ ಖಾತ್ರಿ ಯೋಜನೆಯ ಮೂಲ ಕಾನೂನು ಹಾಗೂ ಮೊದಲಿನ ವ್ಯವಸ್ಥೆಯನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರವನ್ನು ಅವರು ಒತ್ತಾಯಿಸಿದರು.

About The Author

error: Content is protected !!