ಸ್ಥಳೀಯದಿಂದ ರಾಷ್ಟ್ರಮಟ್ಟಕ್ಕೆ ಬೆಳೆಯುತ್ತಿರುವ ಧನ್ವಂತರಿ ವಿಷ್ಣುಮೂರ್ತಿ ಕ್ಷೇತ್ರ
ಭಟ್ಕಳ: ಒಂದು ಕಾಲದಲ್ಲಿ ಊರಿನ ಭಕ್ತರೂ ಹೆಚ್ಚು ಬಾರದಿದ್ದ ಈ ದೇವಸ್ಥಾನ ಇಂದು ಅಪಾರ ಪ್ರಸಿದ್ಧಿ ಗಳಿಸಿದೆ. ಮುಂದಿನ ದಿನಗಳಲ್ಲಿ ಇದು ರಾಷ್ಟ್ರಮಟ್ಟದಲ್ಲಿ ತನ್ನ ಕೀರ್ತಿಯನ್ನು ಪಸರಿಸಲಿದೆ ಎಂದು ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಹೇಳಿದರು.
ಅವರು ಮಾರುಕೇರಿಯ ಹೂತ್ಕಳದಲ್ಲಿರುವ ಶ್ರೀ ಧನ್ವಂತರಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ಕೃತಕೋಟಿ ಶ್ರೀಧನ್ವಂತರಿ ಜಪ ಸಾಂಗತಾ ಹೋಮದ ಪೂರ್ಣಾಹುತಿಯ ನಂತರ ಆಯೋಜಿಸಲಾದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ಕ್ಷೇತ್ರದಲ್ಲಿ ನೆಲೆಸಿರುವ ಆದಿ ಧನ್ವಂತರಿ ದೇವರು ಸರ್ವರೋಗ ನಿವಾರಕನಾಗಿದ್ದು, ದೇಶದ ವಿವಿಧ ಭಾಗಗಳಿಂದ ಭಕ್ತರು ಈ ಕ್ಷೇತ್ರವನ್ನು ಹುಡುಕಿಕೊಂಡು ಬರುತ್ತಿದ್ದಾರೆ ಎಂದರು. ಕ್ಷೇತ್ರದ ಅರ್ಚಕರು ಅತ್ಯಂತ ಸಾತ್ವಿಕರಾಗಿದ್ದು, ಶ್ರೀ ದೇವರ ಆರಾಧನೆಯಲ್ಲಿ ತೋರಿಸುವ ಶ್ರದ್ಧೆ ಹಾಗೂ ನಿಷ್ಠೆ ಕ್ಷೇತ್ರದ ಮಹಿಮೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಅವರು ಹೇಳಿದರು.
ಕ್ಷೇತ್ರಗಳು ಬೆಳೆದರೆ ಸುತ್ತಮುತ್ತಲಿನ ಜನರಿಗೂ ಒಳಿತಾಗುತ್ತದೆ. ಇಲ್ಲಿ ಪ್ರಾರ್ಥನೆ ಸಲ್ಲಿಸಿದವರಿಗೆ ಅನುಭವವಾಗುವ ಲಾಭದಿಂದಲೇ ಕ್ಷೇತ್ರದ ಬೆಳವಣಿಗೆ ಸಾಧ್ಯವಾಗುತ್ತದೆ. ಇಂತಹ ಸತ್ಕಾರ್ಯಗಳಿಂದ ಕ್ಷೇತ್ರಕ್ಕೆ ಸಹಕಾರವೂ ದೊರಕುತ್ತದೆ ಎಂದರು. ಇಲ್ಲಿ ನಡೆದ ಹೋಮ–ಹವನಗಳು ಅತ್ಯಂತ ಶಾಸ್ತ್ರಸಮ್ಮತವಾಗಿ ನಡೆಯುತ್ತಿದ್ದು, ಶ್ರೀ ದೇವರು ಪ್ರಸನ್ನತೆಯಿಂದ ಸ್ವೀಕರಿಸಿದ್ದಾನೆ ಎಂಬುದು ವಾತಾವರಣದಿಂದಲೇ ಸ್ಪಷ್ಟವಾಗುತ್ತದೆ. ವೈದಿಕ ಪರಿಷತ್ ಮಾಡಿದ ಸೇವೆಯೂ ಶ್ಲಾಘನೀಯವಾಗಿದೆ ಎಂದು ಸ್ವಾಮೀಜಿ ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಯುರ್ವೇದ ವೈದ್ಯ, ಮಕ್ಕಿದೇವಸ್ಥಾನದ ಡಾ. ಬಾಲಚಂದ್ರ ಭಟ್ಟ ಅವರನ್ನು ಶ್ರೀ ದೇವರ ಪ್ರಸಾದದ ರೂಪದಲ್ಲಿ ಸ್ವಾಮೀಜಿ ಸನ್ಮಾನಿಸಿದರು. ನಂತರ ಮಾತನಾಡಿದ ಡಾ. ಬಾಲಚಂದ್ರ ಭಟ್ಟರು, ಆಯುರ್ವೇದದಲ್ಲಿ ಆರೋಗ್ಯದ ಮಹತ್ವ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಸರಳ ಮಾರ್ಗಗಳನ್ನು ವಿವರಿಸಿದರು.
ನಿವೃತ್ತ ಶಿಕ್ಷಕ ಹಾಗೂ ದೇವಿಮನೆ ಮೊಕ್ತೇಸರ ಉಮೇಶ ಹೆಗಡೆ ಸ್ವಾಗತಿಸಿದರು. ಗಣೇಶ ಹೆಬ್ಬಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ವಿನಾಯಕ ಭಟ್ಟ ತೆಕ್ಕಿನಗದ್ದೆ ಮತ್ತು ಅನಂತ ಹೆಬ್ಬಾರ್ ಕೋಣಾರ ನಿರೂಪಿಸಿದರು. ಶ್ರೀ ಧನ್ವಂತರಿ ಕ್ಷೇತ್ರದ ಅರ್ಚಕ ಶಂಕರ ಭಟ್ಟ ವಂದಿಸಿದರು.

More Stories
ಸದೃಢ ದೇಶ ನಿರ್ಮಾಣಕ್ಕೆ ಕುಟುಂಬವೇ ತಳಪಾಯ: ತಹಶೀಲ್ದಾರ್ ನಾಗೇಂದ್ರ ಕೋಲಶೆಟ್ಟಿ
ಗ್ರಾಮೀಣ ಭಾಗಕ್ಕೆ ಆಯುರ್ವೇದ ಸೇವೆ – ಧರ್ಮಸ್ಥಳ ಆಸ್ಪತ್ರೆಯ ಶ್ಲಾಘನೀಯ ಕಾರ್ಯ
ರಂಗಿನಕಟ್ಟೆಯ ಶತಮಾನ ಸಾಕ್ಷಿ ಅಶ್ವತ್ಥ ಮರಕ್ಕೆ ಸಂಪ್ರದಾಯಬದ್ಧ ವಿದಾಯ