January 14, 2026

ಅಘನಾಶಿನಿ–ಬೇಡ್ತಿ ನದಿಗೆ ಧಕ್ಕೆ ತರುವ ಯೋಜನೆಗಳಿಗೆ ತೀವ್ರ ವಿರೋಧ ಬಿಜೆಪಿ ಎಚ್ಚರಿಕೆ

ಭಟ್ಕಳ: ಜಿಲ್ಲೆಯ ಜೀವನಾಡಿಗಳಾಗಿರುವ ಅಘನಾಶಿನಿ ನದಿ ಹಾಗೂ ಬೇಡ್ತಿ ನದಿಗಳ ಮೇಲೆ ಪರಿಣಾಮ ಬೀರುವ, ಶರವಾತಿ ಪಂಪ್ಡ್ ಸ್ಟೋರೇಜ್ ಯೋಜನೆಯಂತಹ ಜನವಿರೋಧಿ ಯೋಜನೆಗಳನ್ನು ಜಿಲ್ಲೆಯ ಜನರು ಮೌನವಾಗಿ ಸಹಿಸುವ ಪ್ರಶ್ನೆಯೇ ಇಲ್ಲ. ಇಂತಹ ಯೋಜನೆಗಳು ಬಂದಾಗ ಅವುಗಳ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯ ಎಂದು ಮಾಜಿ ಸಚಿವ ಶಿವಾನಂದ ನಾಯ್ಕ ಎಚ್ಚರಿಸಿದರು.
ಪಟ್ಟಣದ ಭಾರತೀಯ ಜನತಾ ಪಕ್ಷ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪರ ಕೆಲಸಗಳಿಗೆ ಸದಾ ಸ್ವಾಗತವಿದೆ. ಆದರೆ ಜನರ ಬದುಕಿಗೆ ಕುತ್ತು ತರುವ, ಪರಿಸರ ಹಾಗೂ ಸಂಸ್ಕೃತಿಗೆ ಧಕ್ಕೆ ತರುವ ಯೋಜನೆಗಳಿಗೆ ವಿರೋಧಿಸುವುದು ನಮ್ಮ ಕರ್ತವ್ಯ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದರೆ, ರಾಜ್ಯ ಸರ್ಕಾರ ಭ್ರಷ್ಟಾಚಾರದ ಕಂದಕದಲ್ಲಿ ಮುಳುಗಿ ಜನರ ವಿಶ್ವಾಸ ಕಳೆದುಕೊಂಡಿದೆ. ಜಿಲ್ಲೆಯ ಉಸ್ತುವಾರಿ ಸಚಿವರು ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ತೀವ್ರ ಟೀಕೆ ನಡೆಸಿದರು.


ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, ಅಘನಾಶಿನಿ–ಬೇಡ್ತಿ ನದಿ ತಿರುವು ವಿಚಾರದಲ್ಲಿ ಸಂಸದರ ಕುರಿತು ಸಚಿವ ಮಂಕಾಳ ವೈದ್ಯ ನೀಡಿರುವ ಹೇಳಿಕೆ ಬಾಲಿಶತನದ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಸರ್ಕಾರ ಯೋಜನೆಗಳನ್ನು ಜಾರಿಗೆ ತರುವಾಗ ಅದು ಜನವಿರೋಧಿಯಾಗಿದ್ದರೆ ವಿರೋಧಿಸಲೇಬೇಕು. ಸಚಿವರು ಅಭಿವೃದ್ಧಿಯ ಹೆಸರಿನಲ್ಲಿ ಒಂದೂ ಸಾಧನೆ ಮಾಡಿಲ್ಲ; ಜನರ ಹಿತ ಕಾಪಾಡಬೇಕಾದವರು ಅರಿತು ಮಾತನಾಡಬೇಕು ಎಂದು ಕಿಡಿಕಾರಿದರು.


ಭಟ್ಕಳ ಮಂಡಲ ಅಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ ಮಾತನಾಡಿ, ವಿ.ಬಿ. ಜಿರಾಮಜಿ ಕುರಿತು ನೀಡಿರುವ ಹೇಳಿಕೆ ಅಸಂಬದ್ಧ ಹಾಗೂ ಹೊಣೆಗಾರಿಕೆಯಿಲ್ಲದದ್ದು ಎಂದು ಖಂಡಿಸಿದರು. ಸಭೆಯಲ್ಲಿ ಮಾಜಿ ನಿಗಮ ಮಂಡಲದ ಅಧ್ಯಕ್ಷ ಗೋವಿಂದ ನಾಯ್ಕ, ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ಶಿವಾನಿ ಶಾಂತರಾಮ, ಮಂಕಿ ಮಂಡಲ ಅಧ್ಯಕ್ಷ ಮಂಜುನಾಥ ನಾಯ್ಕ, ರಾಜ್ಯ ಹಿಂದುಳಿದ ವರ್ಗಗಳ ಪ್ರತಿನಿಧಿ ರವಿ ನಾಯ್ಕ, ಮುಖಂಡರಾದ ಭಾಸ್ಕರ ಮೊಗೇರ ಮತ್ತು ರಾಜೇಶ ನಾಯ್ಕ ಹಾಜರಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ನಿರೂಪಿಸಿದರು.

About The Author

error: Content is protected !!