ಭಟ್ಕಳ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯ ಹಿನ್ನಲೆಯಲ್ಲಿ ಪಟ್ಟಣದ ಹೃದಯ ಭಾಗವಾದ ರಂಗಿನಕಟ್ಟೆಯಲ್ಲಿ ನಿಂತಿರುವ ಶತಮಾನ ಪೊರೈಸಿದ ಪುರಾತನ ಅಶ್ವತ್ಥ ಮರಕ್ಕೆ ತಾಲೂಕು ಆಡಳಿತ, ಹೆದ್ದಾರಿ ಕಾಮಗಾರಿ ಇಲಾಖೆ ವತಿಯಿಂದ ಧಾರ್ಮಿಕ ವಿಧಿವಿದಾನಗಳ ಅನುಸಾರ ಹೋಮ ಹವನ ನಡೆಸಿ ಪೂಜೆ ಸಲ್ಲಿಸಲಾಯಿತು.
ಹೆದ್ದಾರಿ ಅಗಲೀಕರಣ ಯೋಜನೆಯ ಭಾಗವಾಗಿ ಈ ಪ್ರದೇಶದ ಜಮೀನು ವಶಕ್ಕೆ ಪಡೆದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಾರ್ವಜನಿಕರ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಂಪ್ರದಾಯಕ್ಕೆ ಗೌರವ ಸೂಚಿಸುವ ಉದ್ದೇಶದಿಂದ ಮಂಗಳವಾರ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದೆ. ಜ. ೧೬ರಂದು ಅಧಿಕೃತವಾಗಿ ಅಶ್ವತ್ಥ ಮರ ತೆರವು ಕಾರ್ಯಕ್ರಮ ನಡೆಯಲಿದೆ ಎಂದು ತಹಶೀಲ್ದಾರ ತಿಳಿಸಿದ್ದಾರೆ.
ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಸಂಸ್ಥೆಯ ಅಧಿಕಾರಿಗಳು, ಸ್ಥಳೀಯರು ಹಾಗೂ ಕಾರ್ಮಿಕರ ಸಮ್ಮುಖದಲ್ಲಿ ನಡೆದ ಈ ಪೂಜೆ ಕಾರ್ಯಕ್ರಮದಲ್ಲಿ ಅಶ್ವತ್ಥ ಮರವನ್ನು ದೇವರಂತೆ ಪೂಜಿಸಿ, ಶಾಂತಿಪಾಠ, ನೈವೇದ್ಯ ಸಮರ್ಪಣೆ ಸೇರಿದಂತೆ ವಿಧಿವಿಧಾನಗಳು ನೆರವೇರಿಸಲಾಯಿತು. ಪುರಾತನ ಅಶ್ವಥ ಮರ ತೆರವೂ ಸ್ಥಳೀಯರಲ್ಲಿ ತೀವ್ರ ಭಾವನಾತ್ಮಕ ಪ್ರತಿಕ್ರಿಯೆ ಹುಟ್ಟುಹಾಕಿದೆ. ರಂಗಿನಕಟ್ಟೆಯ ಈ ಅಶ್ವತ್ಥ ಮರ ಕೇವಲ ಒಂದು ವೃಕ್ಷವಾಗಿರದೆ, ಭಟ್ಕಳ ಪಟ್ಟಣದ ಇತಿಹಾಸದ ಸಾಕ್ಷಿಯಾಗಿ ನಿಂತಿದೆ. ಅದರ ತೆರವು ಪಟ್ಟಣದ ಒಂದು ಯುಗ ಅಂತ್ಯವಾಗುವAತೆ ಕಾಣುತ್ತಿದೆ ಎಂಬ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಹೆದ್ದಾರಿ ವಿಸ್ತರಣೆ ಕಾಮಗಾರಿ ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವಾದರೂ, ಪುರಾತನ ಮರದ ತೆರವು ಜನಮನದಲ್ಲಿ ನೋವು ಮೂಡಿಸುತ್ತಿದೆ ಎಂದು ಸ್ಥಳೀಯ ಲಕ್ಷ್ಮೀ ನಾರಾಯಣ ಪೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಸಾಧ್ಯವಾದಲ್ಲಿ ಹೊಸ ಮರಗಳನ್ನು ನೆಡುವ ಯೋಜನೆಯನ್ನೂ ಪರಿಗಣಿಸಲಾಗುತ್ತಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಇತಿಹಾಸದ ಪುಟಗಳಿಗೆ ಸೇರಲಿರುವ ರಂಗಿನಕಟ್ಟೆಯ ಅಶ್ವತ್ಥ ಮರದ ತೆರವು, ಭಟ್ಕಳದ ಜನತೆಗೆ ಅಭಿವೃದ್ಧಿ ಮತ್ತು ಸಂಸ್ಕೃತಿ ನಡುವಿನ ಸಂಘರ್ಷವನ್ನು ಮತ್ತೆ ನೆನಪಿಸುವಂತಾಗಿದೆ.

More Stories
ಸದೃಢ ದೇಶ ನಿರ್ಮಾಣಕ್ಕೆ ಕುಟುಂಬವೇ ತಳಪಾಯ: ತಹಶೀಲ್ದಾರ್ ನಾಗೇಂದ್ರ ಕೋಲಶೆಟ್ಟಿ
ಗ್ರಾಮೀಣ ಭಾಗಕ್ಕೆ ಆಯುರ್ವೇದ ಸೇವೆ – ಧರ್ಮಸ್ಥಳ ಆಸ್ಪತ್ರೆಯ ಶ್ಲಾಘನೀಯ ಕಾರ್ಯ
ಅಘನಾಶಿನಿ–ಬೇಡ್ತಿ ನದಿಗೆ ಧಕ್ಕೆ ತರುವ ಯೋಜನೆಗಳಿಗೆ ತೀವ್ರ ವಿರೋಧ ಬಿಜೆಪಿ ಎಚ್ಚರಿಕೆ