ಮಂಗಳ ವಾದ್ಯವಾದನ ಕಲೆ ಮತ್ತು ಚರ್ಮ ವಾದ್ಯ ಕಟ್ಟುವ ಕೌಶಲವನ್ನು ಸಮಾಜ ಪ್ರೋತ್ಸಾಹಿಸಿ ಉಳಿಸಬೇಕು: ಬಿ.ಗಣಪತಿ
ಕರ್ಕಿ[ಹೊನ್ನಾವರ]- ಜನವರಿ: ೧೬: ಉತ್ತರ ಕನ್ನಡದ ಸಾಂಸ್ಕೃತಿಕ ಪರಂಪರೆಯಲ್ಲಿ ವಿಶಿಷ್ಟವಾದುದು ಇಲ್ಲಿಯ ಭಂಡಾರಿ ಅಥವಾ ದೇವಾಡಿಗ ಸಮುದಾಯವರು ತಲೆಮಾರುಗಳಿಂದ ನುಡಿಸುತ್ತಾ ಬಂದ ಮಂಗಳವಾದ್ಯ ವಾದನ. ಇಂದು ಆಧುನಿಕತೆಯ ಧಾವಂತದಲ್ಲಿ ನಶಿಸುತ್ತಿರುವ ಈ ಕಲೆಯನ್ನು ಉಳಿಸಿ ಬೆಳೆಸಬೇಕಾದುದು ಕೇವಲ ದೇವಾಡಿಗ ಸಮುದಾಯದ ಕೆಲಸವಲ್ಲ ಅದು ಇಡಿಯ ವಿಶಾಲವಾದ ಸಮುದಾಯದ ಹೊಣೆಗಾರಿಕೆ ಎಂದು ಹಿರಿಯ ಪತ್ರಕರ್ತ ಬಿ.ಗಣಪತಿಯವರು ನುಡಿದರು. ಅವರು ಇಂದು ಕರ್ಕಿಯಲ್ಲಿ ದಿವಂಗತ ಪ್ರಭಾಕರ ಭಂಡಾರಿಯವರ ನುಡಿನಮನ ಕಾರ್ಯಕ್ರಮದಲ್ಲಿ ಅಗಲಿದ ಪ್ರಭಾಕರ ಭಂಡಾರಿಯವರಿಗೆ ನುಡಿ ನಮನ ಸಲ್ಲಿಸಿ ಮಾತನಾಡಿದರು. ಮುಂದುವರಿದು ಗಣಪತಿಯವರು ಪ್ರಭಾಕರ ಭಂಡಾರಿವರು ಯಕ್ಷಗಾನದ ಶ್ರೇಷ್ಠ ಮದ್ದಳೆಗಾರರಷ್ಟೇ ಅಲ್ಲ ಒಳ್ಳೆಯ ಶ್ರುತಿ ಮೌರಿಯನ್ನು ನುಡಿಸುವವರೂ ಕೂಡ ಆಗಿದ್ದರು. ಚರ್ಮ ವಾದ್ಯವನ್ನು ಕಟ್ಟುವ ಕೌಶಲವು ಇಂದಿನ ವ್ಯಾಪಾರೀಕೃತ ವ್ಯವಸ್ಥೆಯಲ್ಲಿ ನಶಿಸುತ್ತಿದೆ. ಇದನ್ನೆಲ್ಲ ಸಾಂಸ್ಕೃತಿಕ ಕಾಳಜಿಯುಳ್ಳ ಎಲ್ಲರೂ ಸೇರಿ ಪ್ರೋತ್ಸಾಹಿಸಿ ಉಳಿಸಬೇಕು ಎಂದು ನುಡಿದರು.

ಇತ್ತೀಚೆಗೆ ನಿಧನರಾದ ಕರ್ಕಿಯ ಪ್ರಸಿದ್ಧ ಯಕ್ಷಗಾನದ ಮದ್ದಳೆಗಾರ ಪ್ರಭಾಕರ ಭಂಡಾರಿಯವರಿಗೆ ನುಡಿನಮನ ಕಾರ್ಯಕ್ರಮ ಇಂದು ಸಂಜೆ ಕರ್ಕಿಯ ಶ್ರೀ ಚನ್ನಕೇಶವ ಪ್ರೌಢಶಾಲೆಯ ಸಭಾಭವನದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ದಿವಂಗತ ಪ್ರಭಾಕರ ಭಂಡಾರಿಯವರ ವೈಕುಂಠ ಸಮಾರಾಧನೆಯ ನಿಮಿತ್ತಾ ಅವರ ಅಭಿಮಾನಿಗಳು ಮತ್ತು ಕುಟುಂಬದವರು ಆಯೋಜಿಸಿದ ಈ ನುಡಿನಮನ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿ ತಮ್ಮ ನುಡಿ ನಮನವನ್ನು ಸಲ್ಲಿಸಿದರು.
ಮೊದಲಿಗೆ ಫಣೀಂದ್ರ ಹೆಗಡೆ ಕೆಪ್ಪೆಕರೆ, ಸುಬ್ರಹ್ಮಣ್ಯ ಭಟ್ಟ ಬಾಡ ಹಾಗೂ ಗಣೇಶ ಭಂಡಾರಿ ಹೊಸಾಕುಳಿಯವರ ಚಂಡೆವಾದನದಲ್ಲಿ ಯಕ್ಷಗಾನದ ಗಣಪತಿ ಪೂಜೆಯೊಂದಿಗೆ ನುಡಿನಮನ ಪ್ರಾರಂಭವಾಯಿತು. ಯಕ್ಷರಂಗ ಪತ್ರಿಕೆಯ ಸಂಪಾದ ಕಡತೋಕಾ ಗೋಪಾಲಕೃಷ್ಣ ಭಾಗವತರು ಪ್ರಾಸ್ತಾವಿಕ ಮಾತುಗಳೊಂದಿಗೆ ನುಡಿನಮ ಸಲ್ಲಿಸಿದರು. ಪ್ರಭಾಕರ ಭಂಡಾರಿಯವರ ಜೊತೆಗೆ, ಇತ್ತೀಚೆಗೆ ನಿಧನರಾದ ಕಡತೋಕಾ ಲಕ್ಷ್ಮಿನಾರಾಯಣ ಭಾಗವತ, ಪ್ರಸಂಗಕರ್ತ ದಿ.ಕಂದಾವರ ರಘುರಾಮ ಶೆಟ್ಟಿ ಈ ಇಬ್ಬರಿಗೂ ಒಂದು ನಿಮಿಷದ ಮೌನಾಚರಣೆಯ ಮೂಲಕ ಗೌರವ ಸಮರ್ಪಿಸಲಾಯಿತು.
ನಾಗರಿಕ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್, ಕರ್ಕಿ ಪರಂಪರೆಯ ಹಿರಿಯ ವೇಷಧಾರಿ ಸತ್ಯನಾರಾಯಣ ಹಾಸ್ಯಗಾರ, ಅರ್ಥಧಾರಿ ಮತ್ತು ಅಂಕಣಕಾರ ನಾರಾಯಣ ಯಾಜಿ ಸಾಲೆಬೈಲು, ನ್ಯಾಯವಾದಿ ಸತೀಶ ಭಟ್ಟ ಉಳಗೆರೆ, ಎಸ್.ಎನ್.ಹೆಗಡೆ ಕಿನ್ನೀರು, ಉದ್ಯಮಿ ಎನ್.ಆರ್.ಹೆಗಡೆ ರಾಘೋಣ, ಶ್ರೀಮತಿ ಯಮುನಾ ಗಾಂಕರ್, ಗಣೇಶ ಭಂಡಾರಿ ಬೋಳಗೆರೆ, ತಬಲಾವಾದಕ ಗೋಪಾಲಕೃಷ್ಣ ಹೆಗಡೆ ಕಲಭಾಗ ಮೊದಲಾದ ಗಣ್ಯರು ನುಡಿನಮನ ಸಲ್ಲಿಸಿ ಪ್ರಭಾಕರ ಭಂಡಾರಿಯವರ ಗುಣಗಾನ ಮಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿರಲು ಅನಾನುಕೂಲವಿದ್ದ ಆನಂದ ಹಾಸ್ಯಗಾರ ಕರ್ಕಿ[ಅಮೇರಿಕಾ], ಕೆರೆಮನೆ ಶಿವಾನಂದ ಹೆಗಡೆ, ಮದ್ದಳೆಗಾರ ಎ.ಪಿ.ಪಾಠಕ್, ಡಾ.ಜಿ.ಕೆ.ಹೆಗಡೆ ಹರಿಕೇರಿ ಇವರ ನುಡಿಸಂದೇಶವನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಲಾಯಿತು.
ಪಿ.ಕೆ.ಹೆಗಡೆ ಹರಿಕೇರಿ ಅವರು ವಿಡಿಯೋ ಮುದ್ರಿಸಿ ಸಹಕರಿಸಿದರು.ಅಗಲಿದ ಪ್ರಭಾಕರ ಭಂಡಾರಿಯವರ ಕುಂಟುಂಬಸ್ಥರಲ್ಲದೇ ಪ್ರಾಭಾಕರ ಭಂಡಾರಿಯವರ ನೂರಾರು ಜನ ಅಭಿಮಾನಿಗಳು ನುಡಿನಮನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ