March 2, 2026

ಭಜನೆ–ಸತ್ಸಂಗದಿಂದ ಮನಶ್ಶುದ್ಧಿ; ಭಗವಂತನ ಸ್ಮರಣೆವೇ ನಿಜವಾದ ಧ್ಯಾನ – ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಭಟ್ಕಳ:ಭಗವಂತನ ಹತ್ತಿರ ಸೇರುವುದಕ್ಕೆ ಕುಬ್ಜ ಮನಸ್ಸುಗಳನ್ನು ಶುದ್ಧಪಡಿಸಿಕೊಳ್ಳುವುದು ಅಗತ್ಯವಾಗಿದ್ದು, ಅದಕ್ಕೆ ಭಜನೆ ಮತ್ತು ಸತ್ಸಂಗ ಮಹತ್ವದ ಸಹಕಾರಿಯಾಗುತ್ತವೆ ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಆಸರಕೇರಿಯ ಗುರುಮಠದಲ್ಲಿ ನಡೆದ ಪಾಲಕಿ ಉತ್ಸವದ ಧರ್ಮಸಭೆಯಲ್ಲಿ ಭಾಗವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ನಮ್ಮ ಮನಸ್ಸು ಮತ್ತು ಬುದ್ಧಿಯನ್ನು ನಿರಂತರವಾಗಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ಧ್ಯಾನವೆಂದರೆ ಕಸರತ್ತು ಅಲ್ಲ; ಏಕಾಗ್ರತೆಯಿಂದ ಭಗವಂತನನ್ನು ಸ್ಮರಿಸುವುದೇ ನಿಜವಾದ ಧ್ಯಾನ ಎಂದು ಅವರು ತಿಳಿಸಿದರು.


ಸ್ವಾಮೀಜಿ, ಮಠಗಳೆಂದರೆ ಸಾಲ ನೀಡುವ ಸಂಘಗಳೆಂಬ ತಪ್ಪುಕಲ್ಪನೆ ಜನರಲ್ಲಿ ಇದೆ ಎಂದು ವಿಷಾದ ವ್ಯಕ್ತಪಡಿಸಿ, ಗುರುಮಠಗಳು ಧರ್ಮಪ್ರಚಾರಕ್ಕೆ ಮೀಸಲಾಗಿರುವ ಪವಿತ್ರ ಕೇಂದ್ರಗಳಾಗಿದ್ದು, ಅವುಗಳನ್ನು ಅನ್ಯಭಾವದಿಂದ ನೋಡುವುದು ಸೂಕ್ತವಲ್ಲ ಎಂದು ಕಿವಿಮಾತು ಹೇಳಿದರು.


ಗುರುಮಠದ ಅಧ್ಯಕ್ಷ ಅರುಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಡಿ.ಎಲ್. ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ನಾರಾಯಣ ನಾಯ್ಕ ಹಾಗೂ ಗಂಗಾಧರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಸದಸ್ಯ ಕೆ.ಆರ್. ನಾಯ್ಕ ವಂದಿಸಿದರು.

About The Author

error: Content is protected !!