March 2, 2026

ಸ್ಕೂಲ್ ಆಫ್ ಇಂಡಿಯಾ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ

ಕೆಆರ್ ಪೇಟೆ:  ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡಿ ಶ್ರೇಷ್ಠ ಸಾಧನೆ ಮಾಡಬೇಕು ಎಂದು ಉದ್ಯಮಿ ಖಾಲಿದ್ ಹುಸೇನ್ ಖಾನ್ ಹೇಳಿದರು. ಅವರು ಕೃಷ್ಣರಾಜಪೇಟೆ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಸ್ಕೂಲ್ ಆಫ್ ಇಂಡಿಯಾ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಹಾಗೂ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ಸತ್ಪ್ರಜೆಗಳಾದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದ ಸಂಸ್ಕಾರದ ಜೊತೆಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಹೆಜ್ಜೆ ಹಾಕಬೇಕು. ಸೇವಾ ಮನೋಭಾವನೆ ಹಾಗೂ ಪರೋಪಕಾರ ಗುಣಗಳು ಜೀವನದ ಉಸಿರಾಗಬೇಕು ಎಂದು ಮನವಿ ಮಾಡಿದ ಖಾಲಿದ್ ಹುಸೇನ್ ಖಾನ್ ಸ್ಕೂಲ್ ಆಫ್ ಇಂಡಿಯಾ ಶಾಲೆಯು ಅತ್ಯುತ್ತಮವಾದ ಶಾಲಾ ಪರಿಸರವನ್ನು ಹೊಂದಿದ್ದು ಗುಣಮಟ್ಟದ ಶಿಕ್ಷಣಕ್ಕೆ ತಾಲೂಕಿನಲ್ಲಿಯೇ ಹೆಸರು ವಾಸಿಯಾಗಿದೆ ಕಳೆದ ಐದು ವರ್ಷಗಳಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ನೀಡುವ ಮೂಲಕ ಪ್ರಗತಿಯ ದಿಕ್ಕಿನತ್ತ ಸಾಗುತ್ತಿದೆ ಎಂದು ಅಭಿಮಾನದಿಂದ ಹೇಳಿದರು.

ಬೆಂಗಳೂರಿನ ಐಎಂಪಿ ಪ್ರಿಂಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಆಡಳಿತಾಧಿಕಾರಿಗಳಾದ ಆಲನ್ ಕಾರ್ ವಾಲೋ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಅಂತರಾಷ್ಟ್ರೀಯ ಗುಣಮಟ್ಟದ ಶಾಲೆಯು ಇರುವುದು ಹೆಮ್ಮೆಯ ವಿಚಾರವಾಗಿದೆ. ಕೇಂದ್ರದ ಮಾಜಿ ಸಚಿವರು ಹಾಗೂ ಭಾರತ ಸರ್ಕಾರದ ರಾಜ್ಯಸಭಾ ಮಾಜಿ ಉಪ ಸಭಾಪತಿಗಳಾದ ಡಾ.ಕೆ. ರೆಹಮಾನ್ ಖಾನ್ ಅವರು ತಮ್ಮ ಹುಟ್ಟೂರಿನಲ್ಲಿ ಇಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿರುವುದು ಅವರಿಗೆ ತಮ್ಮ ಹುಟ್ಟೂರಿನ ಬಗೆಗೆ ಇರುವ ಪ್ರೀತಿಯ ಅಭಿಮಾನದ ಸಂಕೇತವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಡೆಲ್ಲಿ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಅನುಪಮಾ ರಾಮಚಂದ್ರ, ಬೆಂಗಳೂರಿನ ಸ್ಕೂಲ್ ಆಫ್ ಇಂಡಿಯಾ ಶಾಲೆಯ ಪ್ರಾಂಶುಪಾಲೆ ರಮಿತಾ ರಾಮಚಂದ್ರನ್, ಕೆ. ಆರ್.ಪೇಟೆ ಪಟ್ಟಣದ ಸ್ಕೂಲ್ ಆಫ್ ಇಂಡಿಯಾ ಶಾಲೆಯ ಪ್ರಾಂಶುಪಾಲೆ ಶೈನಿ ಮೇರಿ ಡಯಾಸ್ ಸೇರಿದಂತೆ ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಶಾಲೆಯ ಬೆಂಗಳೂರು ನಾರ್ತ್ ಮತ್ತು ಡಿಪಿಎಸ್ ಮೈಸೂರು ಶಾಲೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು . ಶಾಲಾ ಮಕ್ಕಳು ನೀಡಿದ ಭರತನಾಟ್ಯ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರು ಹಾಗೂ ಸಾರ್ವಜನಿಕರ ಗಮನ ಸೆಳೆದವು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!