ಭಟ್ಕಳ: ವಿದ್ಯಾರ್ಥಿಗಳಲ್ಲಿ ವ್ಯಾಪಾರ ಮನೋಭಾವನೆ ಬೆಳೆಸುವ ಜೊತೆಗೆ ವ್ಯವಹಾರಿಕ ಜೀವನ ನಿರ್ವಹಣೆಯ ಮಹತ್ವ ತಿಳಿಸುವ ಉದ್ದೇಶದಿಂದ ಭಟ್ಕಳ ತಾಲೂಕಿನ ಬೈಲೂರು ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ‘ಮಕ್ಕಳ ಸಂತೆ’ ಕಾರ್ಯಕ್ರಮವನ್ನು ಸಂಭ್ರಮದಿಂದ ನಡೆಸಲಾಯಿತು.
ಶಾಲಾ ಮೈದಾನದಲ್ಲಿ ನಡೆದ ಮಕ್ಕಳ ಸಂತೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ ಚಾಲನೆ ನೀಡಿದರು. ಮಕ್ಕಳಿಗೆ ಲೆಕ್ಕಾಚಾರ, ವ್ಯವಹಾರಿಕ ಜ್ಞಾನ ಹಾಗೂ ಗ್ರಾಹಕರೊಂದಿಗೆ ವ್ಯವಹರಿಸುವ ಕೌಶಲ್ಯ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಅವರು ಹೇಳಿದರು.
ಓದು–ಆಟ–ಪಾಠಕ್ಕೆ ಮೀಸಲಾಗಿದ್ದ ಶಾಲಾ ಆವರಣವೇ ಸಂತೆ ರೂಪ ಪಡೆದು, ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದ ತಾಜಾ ತರಕಾರಿಗಳು, ಹೂವು, ಸೊಪ್ಪು, ಹಣ್ಣು–ಹಂಪಲು ಹಾಗೂ ವಿವಿಧ ತಿಂಡಿ–ತಿನಿಸುಗಳು ಗಮನ ಸೆಳೆದವು. ಮಕ್ಕಳ ಸಂತೆ ಯಲ್ಲಿ ವಿದ್ಯಾರ್ಥಿಗಳು ಒಟ್ಟು 80 ಮಳಿಗೆಗಳನ್ನು ತೆರೆದು, ತಿಂಡಿ–ತಿನಿಸುಗಳು, ಶರಬತ್ತು ಹಾಗೂ ಮಜ್ಜಿಗೆಯಂತಹ ತಂಪು ಪಾನೀಯಗಳನ್ನು ಮಾರಾಟ ಮಾಡಿದರು.
ಶಿಕ್ಷಕರು ಹಾಗೂ ಪೋಷಕರೇ ಗ್ರಾಹಕರಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಂದ ವಸ್ತುಗಳನ್ನು ಖರೀದಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ವ್ಯಾಪಾರ ನಡೆಸಿ, ಗ್ರಾಹಕರನ್ನು ಆಕರ್ಷಿಸುವ ಮಾತು–ಮಾತುಕತೆ ಹಾಗೂ ಲೆಕ್ಕಾಚಾರ ಕೌಶಲ್ಯ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ರಾಮ ನಾಯ್ಕ, ಸಂಪನ್ಮೂಲ ಅಧಿಕಾರಿ ಪೂರ್ಣಿಮಾ ಮೊಗೇರ, ಇಸಿಒ ಅಶೋಕ ಆಚಾರಿ, ಬಿಆರ್‌ಪಿ ಶೇಖ್, ಬೈಲೂರು ಸಿಆರ್‌ಪಿ ವಿಜಯಾ ಬಾಳ್ಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಕಾರ್ಯದರ್ಶಿ ರಫೀಕ್, ಪ್ರೌಢ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ಗೌಡ ಸೇರಿದಂತೆ ಸ್ಥಳೀಯರು, ಪಂಚಾಯತ್ ಸದಸ್ಯರು, ಪಾಲಕರು ಹಾಗೂ ಕೆಪಿಎಸ್ ಬೈಲೂರಿನ ಶಿಕ್ಷಕರು–ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕ ಧರ್ಮ ನಾಯ್ಕ ಸ್ವಾಗತಿಸಿ, ಮುಖ್ಯ ಶಿಕ್ಷಕರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಕುಸುಮ ಕಾರ್ಯಕ್ರಮ ನಿರೂಪಿಸಿದರು.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ