March 2, 2026

ಸೊನಾರಕೇರಿಯಲ್ಲಿ ದೈವಜ್ಞ ಸಮಾಜದ ರಥೋತ್ಸವ ವೈಭವ

ಭಟ್ಕಳ:  ಭಟ್ಕಳ ನಗರದ ಸೊನಾರಕೇರಿಯ ದೈವಜ್ಞ ಸಮಾಜದ ಶ್ರೀ ಗಣಪತಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ವರ್ಧಂತಿ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮವು ಸಾವಿರಾರು ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ನಡೆಯಿತು.


ರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿವಿಧ ಧಾರ್ಮಿಕ ಹೋಮ–ಹವನಗಳು ಹಾಗೂ ವಿಶೇಷ ಪೂಜೆಗಳು ನೆರವೇರಿದವು. ಮಧ್ಯಾಹ್ನ 13.30ರ ಅಭಿಜಿತ ಮುಹೂರ್ತದಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ಸಮಾಜ ಬಾಂಧವರು ಸರದಿಯಲ್ಲಿ ನಿಂತು ರಥಕಾಣಿಕೆ ಅರ್ಪಿಸಿ ಪೂಜೆಯಲ್ಲಿ ಪಾಲ್ಗೊಂಡರು.


ರಥೋತ್ಸವದ ನಂತರ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ವೇಳೆಗೆ ಬೆಳ್ಳಿಯ ರಥೋತ್ಸವ ಭಕ್ತರ ಗಮನ ಸೆಳೆಯಿತು. ಸಾವಿರಾರು ಭಕ್ತರು ಭಕ್ತಿಭಾವದಿಂದ ಬೆಳ್ಳಿಯ ರಥವನ್ನು ಎಳೆದರು. ಭಟ್ಕಳ ತಾಲೂಕಿನಷ್ಟೇ ಅಲ್ಲದೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.


ರಥೋತ್ಸವದ ಬಳಿಕ ಮೃಗಯಾತ್ರೆ ಸಂವಾದ ಪೂಜೆ, ಮೃಗಬೇಟೆ ಪ್ರಯುಕ್ತ ಅಷ್ಟಾವದಾನದ ಸೇವೆ ಹಾಗೂ ಸಿಡಿಮದ್ದು ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ದೈವಜ್ಞ ಸಮಾಜದ ಪ್ರಮುಖರು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

About The Author

error: Content is protected !!