March 1, 2026

ಕುಮಾರ ಚಂದ್ರಶೇಖರನಾಥ ಮಹಾ ಸ್ವಾಮೀಜಿಗಳ ಸಂಸ್ಮರಣೆ ಹಾಗೂ ನಿಶ್ಚಲಾನಂದನಾಥ ಸ್ವಾಮೀಜಿಗಳ ಗುರುವಂದನಾ ಕಾರ್ಯಕ್ರಮ

ಚುಂಚಶ್ರೀಗಳು ಹಾಗೂ ನಾನು ಪ್ರೀತಿ ವಿಶ್ವಾಸ ಹಾಗೂ ಭಕ್ತಿಯಿಂದ ಸದೃಢ ಸಮಾಜ ಕಟ್ಟಲು ಮುಂದಾಗಿದ್ದೇವೆ.. ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠಗಳೆರಡೂ ವಿಶ್ವಮಾನವತೆಯ ಆಧಾರದಲ್ಲಿ, ಒಂದೇ ತತ್ವ ಸಿದ್ಧಾಂತದಲ್ಲಿ ಕೆಲಸ ಮಾಡುತ್ತಿವೆ. ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಭೈರವೈಕ್ಯ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳು ಹಾಗೂ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳಿಬ್ಬರೂ ನನಗೆ ಆಧ್ಯಾತ್ಮ ಗುರುಗಳಾಗಿದ್ದಾರೆ ಆದರೆ ನಾನು ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳಿಂದ ಸೇವಾ ದೀಕ್ಷೆ ಪಡೆದಿದ್ದೇನೆ ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಡಾ.ನಿಶ್ಚಲಾನಂದನಾಥ ಸ್ವಾಮೀಜಿಗಳು ಹೇಳಿದರು.

ಅವರು ಇಂದು ಕೃಷ್ಣರಾಜಪೇಟೆ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಕೃಷ್ಣರಾಜಪೇಟೆ ತಾಲೂಕಿನ ಸದ್ಭಕ್ತರು ಆಯೋಜಿಸಿದ್ದ ಕುಮಾರ ಚಂದ್ರಶೇಖರನಾಥ ಮಹಾ ಸ್ವಾಮೀಜಿಗಳ ಸಂಸ್ಮರಣೆ ಹಾಗೂ ನಿಶ್ಚಲಾನಂದನಾಥ ಸ್ವಾಮೀಜಿಗಳ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ನಾನು ಪೂರ್ವಾಶ್ರಮದಲ್ಲಿ ಕೃಷ್ಣರಾಜಪೇಟೆ ತಾಲೂಕಿನ ತಹಶೀಲ್ದಾರಾಗಿ ಪಾಂಡವಪುರ ಉಪ ವಿಭಾಗದ ಉಪ ವಿಭಾಗಾಧಿಕಾರಿಯಾಗಿ ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದೇನೆ. ನಾನು ಇನ್ನು ನಾಲ್ಕೈದು ವರ್ಷ ಸರ್ಕಾರಿ ಸೇವೆ ಮಾಡಿದ್ದರೆ, ಐಎಎಸ್ ಅಧಿಕಾರಿಯಾಗುತ್ತಿದ್ದೆ. ಆದರೆ ನಾನು ದೃಢವಾದ ಸಂಕಲ್ಪ ಮಾಡಿ ಅಧಿಕಾರವನ್ನು ತ್ಯಾಗ ಮಾಡಿ, ಶ್ರೀಸಾಮಾನ್ಯರು ಹಾಗೂ ಬಡಜನರಿಗೆ ಸಹಾಯ ಮಾಡಲು, ಜಾತಿ ಮತಗಳಿಂದ ಮುಕ್ತವಾದ ಆರೋಗ್ಯವಂತ ಸಮಾಜವನ್ನು ನಿರ್ಮಿಸಿ ನಾಗರೀಕರ ಸೇವೆ ಮಾಡಲು ಸನ್ಯಾಸತ್ವ ದೀಕ್ಷೆ ಪಡೆದು ಶ್ರೀ ಮಠವನ್ನು ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಿ, ನನ್ನ ಪೂಜ್ಯ ಗುರುಗಳಾದ ಬಾಲಗಂಗಾಧರ ನಾಥ ಸ್ವಾಮೀಜಿಗಳು ಈ ಮೊದಲೇ ನನಗೆ ಇಟ್ಟಿದ್ದ ನಿಶ್ಚಲಾನಂದನಾಥ ಸ್ವಾಮೀಜಿ ಎಂಬ ಹೆಸರಿನಲ್ಲಿಯೇ ಧೀಕ್ಷೆ ಪಡೆದುಕೊಂಡು ಸ್ವಾಮೀಜಿಯಾಗಿ ಕೆಲಸ ಮಾಡುತ್ತಿದ್ದೇನೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠಗಳೆರಡು ಕೇವಲ ಒಕ್ಕಲಿಗ ಜನಾಂಗಕ್ಕೆ ಮಾತ್ರ ಸೀಮಿತವಾಗಿರುವ ಮಠಗಳಲ್ಲ ಈ ಎರಡು ಮಠಗಳು ವಿಶ್ವಮಾನವ ಪ್ರಜ್ಞೆ ಹೊಂದಿರುವ ನಾಡಿನ ಶ್ರೇಷ್ಠ ಮಠಗಳಾಗಿವೆ . ನಾನು ಸನ್ಯಾ ಸತ್ವ ದೀಕ್ಷೆ ಸ್ವೀಕರಿಸುವ ಮುನ್ನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿಗಳಾದ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರನ್ನು ಭೇಟಿ ಮಾಡಿ ನನ್ನ ಸನ್ಯಾಸತ್ವ ದೀಕ್ಷಾ ಕಾರ್ಯಕ್ರಮಕ್ಕೆ ಬರಬೇಕೆಂದು ಆಹ್ವಾನಿಸಿದೆ ಕಾರ್ಯಕ್ರಮಕ್ಕೆ ಬರಲು ಸಮ್ಮತಿಸಿದ ನಿರ್ಮಲಾನಂದನಾಥರು ನಮ್ಮ ನಮ್ಮ ನಡುವೆ ಪೈಪೋಟಿ ನಡೆಸುವುದು ಬೇಡ ಪ್ರೀತಿ ವಿಶ್ವಾಸದಿಂದ ಸಮಾಜವನ್ನು ಕಟ್ಟೋಣ ಎಂದು ನಿರ್ಮಲಾನಂದನಾಥರು ಸೂಚಿಸಿದ ಮೇರೆಗೆ ನಾವಿಬ್ಬರು ನಾಡನ್ನು ಸದೃಢವಾಗಿ ಕಟ್ಟುವ ಸಂಕಲ್ಪ ಮಾಡಿ, ಪ್ರೀತಿ ವಿಶ್ವಾಸದಿಂದ, ನಂಬಿಕೆ ಹಾಗೂ ಭಕ್ತಿಯಿಂದ ಸಮಾಜವನ್ನು ಕಟ್ಟಲು ಹೊರಟಿದ್ದೇವೆ ಎಂದು ತಿಳಿಸಿದ ಶ್ರೀಗಳು ಕೃಷ್ಣರಾಜಪೇಟೆ ತಾಲೂಕಿನ ಸುಪುತ್ರರಾಗಿರುವ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಗಳು ನಾಡಿನ ಶ್ರೇಷ್ಠ ಸಂತರಾಗಿದ್ದು, ಅವರು ಕೃಷ್ಣರಾಜಪೇಟೆ ತಾಲೂಕಿನ ಹೆಮ್ಮೆಯಾಗಿದ್ದಾರೆ. ಅವರ ಶಿಷ್ಯನಾಗಿನಾನು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠವನ್ನು ಮುನ್ನಡೆಸುವ ಕಾಯಕದಲ್ಲಿ ನನ್ನನ್ನು ತೊಡಗಿಸಿಕೊಂಡು ಮುನ್ನಡೆಯುತ್ತಿದ್ದೇನೆ. ಗುರುಗಳ ಆಶಯದಂತೆ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಲು ಗುರುಗಳ ಜನ್ಮ ಭೂಮಿಯಲ್ಲಿ ಇಂದು ದೃಢವಾದ ಸಂಕಲ್ಪ ಮಾಡಿದ್ದೇನೆ. ನನ್ನ ಪೂಜ್ಯ ಗುರುಗಳ ಹುಟ್ಟೂರಿನಲ್ಲಿ ನಡೆಯುತ್ತಿರುವ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಸಂತೋಷ ತಂದಿದೆ. ಕೃಷ್ಣರಾಜಪೇಟೆ ಪಟ್ಟಣದ ಒಂದು ಮುಖ್ಯ ರಸ್ತೆಗೆ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರ ಹೆಸರಿಡುವ ಮೂಲಕ ಅವರ ಹೆಸರನ್ನು ತಾಲೂಕಿನಲ್ಲಿ ಚಿರಸ್ಥಾಯಿಯಾಗಿ ಉಳಿಸಬೇಕು ಎನ್ನುವುದು ನನ್ನ ಬಯಕೆಯಾಗಿದೆ. ಈ ದಿಕ್ಕಿನಲ್ಲಿ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು, ಶಾಸಕರು ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎನ್ನುವುದು ನನ್ನ ಆಸೆಯಾಗಿದೆ. ಹಾಗೆಯೇ ಪುರಸಭೆಯು ಒಂದು ಸುಸಜ್ಜಿತವಾದ ನಿವೇಶನವನ್ನು ನೀಡಿದರೆ ಗುರುಗಳ ಹೆಸರಿನಲ್ಲಿ ಒಂದು ಯೋಗ ಭವನವನ್ನು ನಿರ್ಮಿಸಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲು ಸಮಾಜಕ್ಕೆ ಸಮರ್ಪಣೆ ಮಾಡಲು ಸಂಕಲ್ಪ ಮಾಡಿದ್ದೇನೆ ಎಂದು ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊಫೆಸರ್ ಬಿ ಜಯಪ್ರಕಾಶ್ ಗೌಡ ಮಾತನಾಡಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠವು ಚೈತನ್ಯಶೀಲವಾಗಿದೆ. ಶ್ರಮಿಕ ವರ್ಗದ ಮಠವಾಗಿದ್ದು, ನಾಥ ಪರಂಪರೆಯ ಸಾಂಪ್ರದಾಯಗಳನ್ನು ನಾಡಿಗೆ ಸಂದೇಶವಾಗಿ ನೀಡುತ್ತಿದ್ದ ಕುಮಾರಸ್ವಾಮಿಗಳ ಶಿಷ್ಯರಾಗಿ ನಿಶ್ಚಲಾನಂದನಾಥ ಸ್ವಾಮೀಜಿಯವರು ಸರ್ವ ಜನರ ಸಮಾನತೆ ಹಾಗೂ ಅಭಿವೃದ್ಧಿಯನ್ನು ಗುರಿಯನ್ನಾಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಸ್ವಾಮೀಜಿಗಳಾಗುವ ಮುನ್ನ ಪೂರ್ವಾಶ್ರಮದಲ್ಲಿ ದಕ್ಷ ಅಧಿಕಾರಿಯಾಗಿದ್ದ ನಾಗರಾಜ್ ಬಡವರ ಆಧಾರಿಯಾಗಿದ್ದರು ಇಂದು ಸನ್ಯಾಸಿಯಾಗಿ ದೀಕ್ಷೆ ಪಡೆದು ಸಮಾಜ ಸುಧಾರಣೆಗೆ ಹೆಜ್ಜೆ ಇಟ್ಟಿರುವ ಶ್ರೀಗಳಿಗೆ ನಾಗರಿಕ ಸಮಾಜದ ಪ್ರತಿಯೊಬ್ಬರು ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್ ಟಿ ಮಂಜು ಮಾತನಾಡಿ ನಿಶ್ಚಲಾನಂದನಾಥ ಸ್ವಾಮೀಜಿಯವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ಜನ್ಮ ಪಡೆದಿದ್ದರು ಮಂಡ್ಯ ಜಿಲ್ಲೆಯು ಶ್ರೀಯುತರ ಕರ್ಮಭೂಮಿಯಾಗಿದೆ ಈ ಹಿಂದೆ ದಕ್ಷ ಆಡಳಿತಗಾರರಾಗಿದ್ದ ಶ್ರೀಗಳು ಇಂದು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಲು ಸಂಕಲ್ಪ ಮಾಡಿ ಹೆಜ್ಜೆ ಹಾಕಿದ್ದಾರೆ ಅವರ ಎಲ್ಲ ಸಮಾಜಮುಖಿ ಕೆಲಸಗಳಿಗೆ ಶ್ರೀಮಠದ ಭಕ್ತನಾಗಿ ನಾನು ಬೆಂಬಲಿಸುತ್ತೇನೆ ಎಂದು ಮಂಜು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಮಾಜಿ ಶಾಸಕ ಬಿ. ಪ್ರಕಾಶ್, ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಮೈಸೂರು ಲ್ಯಾಂಪ್ ಸಂಸ್ಥೆ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು, ಕರ್ನಾಟಕ ಕೈಗಾರಿಕಾ ಸಹಕಾರ ಮಹಾ ಮಂಡಲದ ಅಧ್ಯಕ್ಷ ಬಸ್ ಸಂತೋಷಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಡಾ.ಯೋಗೇಶ್ ಸಮಾಜ ಸೇವಕರಾದ ರಾಜೇನಹಳ್ಳಿ ರೇವಣ್ಣ, ವಿಜಯ್ ರಾಮೇಗೌಡ, ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಎಸ್.ಎಲ್. ಮೋಹನ್, ಡಾ.ಜಯಕೀರ್ತಿ, ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್, ತಹಶೀಲ್ದಾರ್ ಡಾ. ಅಶೋಕ್, ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್, ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ರೈತ ಮುಖಂಡ ಮಧುಗೆರೆ ರಾಜೇಗೌಡ, ರೈತ ನಾಯಕಿ ಕೆ. ಆರ್.ನಂದಿನಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕ ಡಾ. ಅಂಚಿ ಸಣ್ಣಸ್ವಾಮಿಗೌಡ, ಗುರುವಂದನಾ ಕಾರ್ಯಕ್ರಮ ಸಂಸ್ಮರಣ ಸಮಿತಿಯ ಸಂಚಾಲಕರಾದ ಕೆ.ಕಾಳೇಗೌಡ, ಬಳ್ಳೇಕೆರೆ ಮಂಜುನಾಥ್, ಬಿ ಸಿ ಎಸ್ ಕುಮಾರ್, ಪದ್ಮೇಶ್, ಬೇಲದಕೆರೆ ನಂಜಪ್ಪಗೌಡ, ಹರಿಚರಣತಿಲಕ್, ಪೂರ್ಣಚಂದ್ರ ತೇಜಸ್ವಿ, ನಾಯಕನಹಳ್ಳಿ ಬಿ.ನಂಜಪ್ಪ, ವಿಠಲಾಪುರ ಸುಬ್ಬೇಗೌಡ, ಸೇರಿದಂತೆ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಡಾ. ನಿಶ್ಚಲಾನಂದನಾಥ ಸ್ವಾಮೀಜಿಯವರನ್ನು ಬೆಳ್ಳಿ ಸಾರೋಟಿನಲ್ಲಿ ಕೂರಿಸಿ, ಜಾನಪದ ಕಲಾತಂಡಗಳ ವೈಭವದ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆತರಲಾಯಿತು. ಚನ್ನರಾಯಪಟ್ಟಣದ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ನೀಡಿದ ಕೋಲಾಟ ಪ್ರದರ್ಶನವು ಸಾರ್ವಜನಿಕರ ಗಮನ ಸೆಳೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ವರದಿ ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ. ಮಂಡ್ಯ.

About The Author

error: Content is protected !!