ಹೊನ್ನಾವರ: ಜನರ ಬದುಕಿನೊಂದಿಗೆ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಆಡಳಿತ ನೀಡುತ್ತಿದೆ. ಆದರೆ ಜನರ ಭಾವನೆ ನಡುವೆ ಬಿಜೆಪಿ ಕೆಲಸ ಮಾಡುತ್ತಿದೆ ಎಂದು ರಾಜ್ಯದ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಎಚ್.ಎಂ.ರೇವಣ್ಣ ಬಿಜೆಪಿಯವರಿಗೆ ತಿರುಗೇಟು ನೀಡಿದರು.
ಕೆಳಗಿನೂರಿನ ಒಕ್ಕಲಿಗ ಶಾಖಾ ಮಠದಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾಹಿತಿ ನೀಡಿ ಗ್ಯಾರಂಟಿ ಯೋಜನೆಗೆ ಬಿಟ್ಟಿ ಭಾಗ್ಯ ಎನ್ನಲಾಗುತ್ತಿದೆ. ಸರ್ಕಾರದಿಂದ ಸಿಗುವ ಸೌಲಭ್ಯ ನಮ್ಮ ಹಕ್ಕು, ಅದು ನಮಗೆ ತಲುಪಿದೆ. ರಾಜ್ಯದಲ್ಲಿ ಜನರಿಂದ ರಚನೆಯಾದ ಸರ್ಕಾರ ಜನರಿಗಾಗಿ ಸಹಾಯ ಮಾಡಿಸುವ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಲು ಚುನಾವಣೆ ಪೂರ್ವದಲ್ಲಿ ನಿರ್ಧರಿಸಿದಂತೆ ಅಧಿಕಾರಕ್ಕೆ ಬಂದ ಬಳಿಕ ಮೊದಲ ಸಚಿವ ಸಂಪುಟದಲ್ಲಿ ಯೋಜನೆ ಜಾರಿ ಮಾಡಿದೆ. ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 17.73 ಕೋಟಿ ಬಾರಿ ಉಚಿತ ಪ್ರಯಾಣದ ಮೂಲಕ ಲಾಭ ಪಡೆದಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ 3.37 ಲಕ್ಷ ಫಲಾನುಭವಿಗಳ ಖಾತೆಗೆ ಈವರೆಗೆ 1493 ಕೋಟಿ ಪಾವತಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 510.98 ಕೋಟಿ ಮೊತ್ತದ ವಿದ್ಯುತ್ ಶುಲ್ಕ ವಿನಾಯತಿಯನ್ನು ಜನರು ಪಡೆದುಕೊಂಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ನೇರ ನಗದು ಪಾವತಿ ಮೂಲಕ 298.89 ಕೋಟಿ ಪಾವತಿಸಲಾಗಿದ್ದು, ಯುವನಿಧಿ ಯೋಜನೆಯಡಿ 8303 ಮಂದಿ ಯುವ ಜನರು 17.80 ಕೋಟಿ ಲಾಭ ಪಡೆದಿದ್ದಾರೆ ಎಂದರು.
ದಿ.ಡಿ.ದೇವರಾಜ ಅರಸುರವರ ಅವಧಿಯ ಯೋಜನೆ ಪರಿವರ್ತನೆಯಾಗಿ ಅನ್ನಭಾಗ್ಯ ಯೋಜನೆಯಾಗಿ ಮಾರ್ಪಾಡಾಗಿದೆ. ಗೃಹಲಕ್ಷ್ಮೀ ಯೋಜನೆ ಆರಂಭವಾದಾಗ ವಿರೋಧಪಕ್ಷದವರು ಫಲಾನುಭವಿ ಖಾತೆಗೆ ಹಣ ಜಮೆ ಆಗಿಲ್ಲವೆಂದು ಠೀಕಿಸಿದರು. ಇದೀಗ ಈ ಯೋಜನೆಯಲ್ಲಿಯೇ ಸರಿಸುಮಾರು 59,600ಕೋಟಿ ಹಣ ವ್ಯಯವಾಗಿದ್ದು 1.24ಕೋಟಿ ಫಲಾನುಭವಿಗಳಾಗಿದ್ದಾರೆ. ಅರ್ಥಶಾಸ್ತ್ರಜ್ಞರ ಪ್ರಕಾರ ಪಂಚಗ್ಯಾರಂಟಿಯು ಉದ್ಯೋಗಸೃಷ್ಠಿ,ಕುಟುಂಬ ನಿರ್ವಹಣೆ, ಮಹಿಳಾ ಸಬಲೀಕರಣ ಎಂದು ತಿಳಿಸಿದ್ದಾರೆ. ವಿಶ್ವಸಂಸ್ಥೆಯು ಮಹಿಳಾ ಸಬಲೀಕರಣ ಹಾಗೂ ಲಿಂಗ ಸಮಾನತೆ ತರುವಲ್ಲಿ ಪಂಚಗ್ಯಾರಂಟಿ ಯೋಜನೆಗಳ ಪಾತ್ರ ಮಹತ್ವದ್ದು ಎಂದು ಶ್ಲಾಘಿಸಿದೆ. ರಾಜ್ಯದಲ್ಲಿ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಉತ್ತೇಜಿಸಲು ಮಹಿಳಾ ಪರ ಕಾರ್ಯಕ್ರಮಗಳನ್ನು ಆಯೋಜಿಸಿರುವುದಕ್ಕೆ ಅಭಿನಂಧಿಸಿ, ಇದರಿಂದ ಲಿಂಗಸಮಾನತೆ, ವಿವಿಧತೆಯಲ್ಲಿ ಏಕತೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದೆ. ಪಂಚಗ್ಯಾರಂಟಿಯಿಂದ ತಲಾ ಆದಾಯದಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ. ಜಿಎಸ್ ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇವೆಲ್ಲವು ಅಭಿವೃದ್ದಿಯ ಸಂಕೇತವಾಗಿದ್ದು, ಜನಸಾಮಾನ್ಯರ ಜೀವನ ಹಾಸುಹೊಕ್ಕಾಗಿದೆ. ಪ್ರತಿಬಡಕುಟುಂಬ ಫಲಾನುಭವಿಯಾಗಿ ಸರಿಸುಮಾರು 5ರಿಂದ 10 ಸಾವಿರ ಆರ್ಥಿಕ ನೆರವು ಪಡೆದಿದೆ. ಈ ಯೋಜನೆ ಇನ್ನು ಸಹ ಪ್ರಚಾರವಾಗಿ ಮತ್ತಷ್ಟು ಜನರಿಗೆ ತಲುಪಬೇಕಿದೆ. ಅದಕ್ಕಾಗಿ ವಿವಿಧ ಸೆಲ್ ಮೂಲಕ ಪ್ರಚಾರಕೈಗೊಳ್ಳಲಾಗಿದೆ. ಮನೆ ಮನೆಗೆ ಪಂಚಗ್ಯಾರಂಟಿ ಮನೆಮುಂದೆ ರಂಗೋಲಿ’ ಎಂಬ ಸಂದೇಶದೊಂದಿಗೆ ಯೋಜನೆಯನ್ನು ರಾಜ್ಯದ ಅರ್ಹ ಫಲಾನುಭವಿಗೆ ತಲುಪಿಸುವ ಕಾರ್ಯ ಮಾಡಲಿದ್ದೇವೆ ಎಂದರು.
ಅನ್ನಭಾಗ್ಯ ಯೋಜನೆ ಅಡಿ ಪಡಿತರ ಪಡೆಯುವ ಹಿರಿಯ ನಾಗರಿಕರಿಗೆ ‘ತಂಬ್ ‘ ವ್ಯವಸ್ಥೆಯಿಂದ ಬೆರಳಚ್ಚು ಬಾರದೆ ಪಡಿತರದಿಂದ ವಂಚಿತರಾಗುತ್ತಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಉತ್ತರಿಸಿ ರಾಜ್ಯದ ವಿವಿಧ ಬಾಗದಿಂದ ಇಂತಹ ಹಲವಾರು ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ.ಈ ಬಗ್ಗೆ ಚರ್ಚಿಸಿ ಶಿಘ್ರದಲ್ಲೇ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವ ಮಂಕಾಳ ವೈದ್ಯ, ಗ್ಯಾರಂಟಿ ಯೋಜನೆಯ ರಾಜ್ಯ ಉಪಾಧ್ಯಕ್ಷ ಎಸ್ .ಆರ್ ಪಾಟೀಲ್, ಡಾ.ಪುಷ್ಪಾ ಅಮರನಾಥ, ಜಿಲ್ಲಾಧ್ಯಕ್ಷ ಸತೀಶ ನಾಯ್ಕ, ತಾಲೂಕಾಧ್ಯಕ್ಷ ಅಣ್ಣಪ್ಪ ನಾಯ್ಕ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಮತ್ತಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ