March 2, 2026

ಹಸಿವಿನಿಂದ ಬಳಲಬಾರದು-ಸಚಿವ ಮಂಕಾಳ ವೈದ್ಯ

ಹೊನ್ನಾವರ : ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎನ್ನುವ ಉದ್ದೇಶದಿಂದ ರಾಜ್ಯದ ಕಾಂಗ್ರೇಸ್ ಸರ್ಕಾರ  ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಮೀನುಗಾರಿಕಾ ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಹೇಳಿದರು.

ಕೆಳಗಿನೂರಿನ ಒಕ್ಕಲಿಗರ ಸಭಾಭವನದಲ್ಲಿ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಜಿಲ್ಲಾಮಟ್ಟದ ಗ್ಯಾರಂಟಿ ಕಾರ್ಯಾಗಾರ ಹಾಗೂ ಗ್ಯಾರಂಟಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಧಾನಸಭಾ ಚುನಾವಣೆಗೂ ಮುನ್ನಾ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆಸಿ ಅವರು ಐದು ಗ್ಯಾರಂಟಿಗಳನ್ನು ನೀಡುವುದಾಗಿ ಘೋಷಿಸಿದ್ದರು,  ಅದರಂತೆ  ರಾಜ್ಯದಲ್ಲಿ 136 ಸ್ಥಾನಗಳನ್ನು ಗೆದ್ದಿದ್ದೇವೆ. ಸರ್ಕಾರ ಅಧಿಕಾರಕ್ಕೆ ಬಂದ  ನಂತರ ಪ್ರಥಮ ಸಚಿವ ಸಂಪುಟದಲ್ಲಿ ಐದು ಗ್ಯಾರಂಟಿಗಳನ್ನು ನೀಡಿರುತ್ತೇವೆ.

ಈ ಗ್ಯಾರಂಟಿ ಸ್ಕೀಮ್‌ನಲ್ಲಿ ನಂಬಿಕೆ ಇಡಬೇಡಿ ಎಂದು ಬಿಜೆಪಿ ಹೇಳಿತ್ತು, ಆದರೆ ರಾಜ್ಯದ ಜನರು ಕಾಂಗ್ರೆಸ್ ಅನ್ನು ಗೆಲ್ಲಿಸಿದರು. ಗ್ಯಾರಂಟಿ ಮೂಲಕ ನಾವು 50 ಸಾವಿರ ಕೋಟಿ ನೀಡಿದ್ದೇವೆ. ಆದರೆ ಕಳೆದ ಐದು ವರ್ಷಗಳಲ್ಲಿ ನಾವು ನೀಡಿದ 50 ಸಾವಿರ ಕೋಟಿಗಳನ್ನು ಹಿಂದಿನ ಬಿಜೆಪಿ ಸರ್ಕಾರ ಏನು ಮಾಡಿದೆ ಎಂದು ನೀವು ಕೇಳಬೇಕು. ಈಗಲೂ ಅವರು ಗ್ಯಾರಂಟಿಯನ್ನು ನಿಲ್ಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಗ್ಯಾರಂಟಿಯನ್ನು ನಿಲ್ಲಿಸುವುದಿಲ್ಲ. ಗ್ಯಾರಂಟಿಯೊಂದಿಗೆ ಅಭಿವೃದ್ಧಿ ಮಾಡುತ್ತೇವೆ.‌

ಮಹಿಳೆಯರು ಮತ್ತು ಸಾಮಾನ್ಯ ಜನರು ಸಂತೋಷವಾಗಿದ್ದಾರೆ. ಈ ಯೋಜನೆಯಿಂದ ಹಲವು ಪ್ರಯೋಜನಗಳಿವೆ. ಎಲ್ಲರೂ ಸಮೃದ್ಧರಾಗಿದ್ದರೆ, ಅದನ್ನು ಅಭಿವೃದ್ಧಿ ಎಂದು ಹೇಳಬಹುದು. ಜನರು ಸ್ವಾಭಿಮಾನದಿಂದ ಬದುಕಬೇಕೆಂದು ಈ ಗ್ಯಾರಂಟಿ ಯೋಜನೆಯನ್ನು ನೀಡಲಾಯಿತು ಮತ್ತು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಗ್ಯಾರಂಟಿಯೊಂದಿಗೆ ಅಭಿವೃದ್ಧಿಯೂ ಆಗುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಗುತ್ತಿಗೆದಾರರಿಗೆ ಬರಬೇಕಾದ ಹಣವನ್ನು ಹಾಗೆಯೇ ಬಿಟ್ಟಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ನಾವು ಅದನ್ನು ನೀಡಿದ್ದೇವೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಗ್ಯಾರಂಟಿ ಯೋಜನೆಯನ್ನು ಘೋಷಿಸಿತ್ತು, ಗ್ಯಾರಂಟಿ ಬೋಗಸ್ ಜನರು ಸೋಮಾರಿಗಳಾಗುತ್ತಾರೆ ಎಂದು ಅವರು ಹೇಳಿದರು. ಒಳ್ಳೆಯದನ್ನು ಸ್ವಾಗತಿಸಬೇಕು ಮತ್ತು ಬಡವರು ಅಭಿವೃದ್ಧಿ ಹೊಂದಲು ಬಿಡಬಾರದು ಎನ್ನುವುದು ಬಿಜೆಪಿಯವರ ಮನಸ್ಥಿತಿ. ಕಪ್ಪು ಹಣ ತರುತ್ತೇವೆ ಹೇಳಿ 12 ವರ್ಷಗಳು ಕಳೆದರೂ, ಅವರು ಮೊದಲು ಹೇಳಿದ ಹಣವನ್ನು  ತಂದಿಲ್ಲ. ಅಕೌಂಟಗೆ  ಹಾಕಿಲ್ಲ, ಇದಕ್ಕೆ ಬಿಜೆಪಿಯವರು ಉತ್ತರಿಸಬೇಕು.

ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್. ಆರ್. ಪಾಟೀಲ್ ಬ್ಯಾಡಗಿ ಮತ್ತು ಡಾ. ಪುಷ್ಪಾ ಅಮರನಾಥ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಹೆಚ್. ಎಂ. ರೇವಣ್ಣ ಮಾತನಾಡಿ ಜನರಿಗಾಗಿ ಕೆಲಸ ಮಾಡಿದ ಯಾವುದೇ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಸರ್ಕಾರ. ನಾವು ಜನರ ಜೀವನಕ್ಕಾಗಿ ಕೆಲಸ ಮಾಡುತ್ತೇವೆ, ನಾವು ಜನರ ಭಾವನೆಗಳೊಂದಿಗೆ ಕೆಲಸ ಮಾಡುದಿಲ್ಲ. ನಾನು ದೇವರಾಜ ಅರಸು ಅವರ ಕಾಲದಿಂದಲೂ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಅವರು ನೀಡಿದ ಯೋಜನೆ ಇನ್ನೂ ಇದೆ, ಅಂದರೆ, ನಮ್ಮ ಸರ್ಕಾರ ನೀಡಿದ ಯೋಜನೆಯನ್ನು ನಿಲ್ಲಿಸಲಾಗುವುದಿಲ್ಲ, ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಅಂತಹ ಕಾರ್ಯಕ್ರಮವನ್ನು ನೀಡುತ್ತಿದೆ ಎಂದರು.

‌ಐದು ಗ್ಯಾರಂಟಿ  ಯೋಜನೆಯಿಂದಾಗಿ ತಲಾ ಆದಾಯ ಹೆಚ್ಚಾಗಿದೆ. ಕರ್ನಾಟಕ ರಾಜ್ಯ ದೇಶದಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದರು. ಕೊನೆಯದಾಗಿ,  “ಯಾರಾದರೂ ನಿಮ್ಮ ಮುಂದೆ ‘ಬಿಟ್ಟಿ ಭಾಗ್ಯ’ ಅಂತ ಹೇಳಿದರೆ, ಗ್ಯಾರಂಟಿ ಯೋಜನೆ ನಮ್ಮ ಹಕ್ಕು ಅಂತ ಹೇಳಿ” ಅಂತ ಅವರು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ ಪ್ರಾಸ್ತವಿಕ ಮಾತನಾಡಿ ಪಂಚ ಗ್ಯಾರಂಟಿ ಯೋಜನೆಯ ಮೂಲಕ ರಾಜ್ಯದ ಕಾಂಗ್ರೇಸ್ ಸರ್ಕಾರ ಜನಪರ ಎಂದು ಸಾಬೀತು ಮಾಡಿದೆ. ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕಾಗಿ ಈಗಾಗಲೇ 300 ಕ್ಕೂ ಹೆಚ್ಚು ಶಿಬಿರ ಆಯೋಜಿಸುವ ಮೂಲಕ ಜಾರಿಯಾಗಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇವೆ ಎಂದರು.

ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ ಶಸಿ ಸ್ವಾಗತಿಸಿದರು. ಗ್ಯಾರಂಟಿ  ಜಾಗೃತಿ ಅನುಷ್ಠಾನದ ಸದಸ್ಯ ಮೋಹನ ಕೆ. ಉಪನ್ಯಾಸ ನೀಡಿದರು. ಸುಧೀಶ ನಾಯ್ಕ ಹಾಗೂ ಪ್ರಕಾಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ವೇದಿಕೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷರುಗಳು ಇದ್ದರು. ಸಭಾ ಕಾರ್ಯಕ್ರಮದ ಮೊದಲು ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನದ ನೃತ್ಯ ಪ್ರದರ್ಶನಗೊಂಡಿತು.

ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!